ಬಿಎಸ್ಪಿಎಲ್‌ ಕಾರ್ಖಾನೆ ವಿರುದ್ಧ ಹೋರಾಡೋಣ: ಶಾಸಕ ರಾಘವೇಂದ್ರ ಹಿಟ್ನಾಳ

| Published : Jul 28 2025, 12:33 AM IST

ಬಿಎಸ್ಪಿಎಲ್‌ ಕಾರ್ಖಾನೆ ವಿರುದ್ಧ ಹೋರಾಡೋಣ: ಶಾಸಕ ರಾಘವೇಂದ್ರ ಹಿಟ್ನಾಳ
Share this Article
  • FB
  • TW
  • Linkdin
  • Email

ಸಾರಾಂಶ

ಬಿಎಸ್‌ಪಿಎಲ್‌ ಕಾರ್ಖಾನೆ ವಿರುದ್ಧ ಹೋರಾಡಲು ಕೊಪ್ಪಳ ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಬಚಾವ್ ಆಂದೋಲನ ಸಮಿತಿಯಿಂದ ಸಭೆ ಆಯೋಜಿಸಲಾಗಿತ್ತು. ಜನಪ್ರತಿನಿಧಿಗಳು, ಹೋರಾಟಗಾರರು ಭಾಗವಹಿಸಿದ್ದರು.

ಕೊಪ್ಪಳ: ನಗರದ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ಬಿಎಸ್‌ಪಿಎಲ್‌ ಕಾರ್ಖಾನೆ ನಿರ್ಮಾಣ ವಿರುದ್ಧ ಹೋರಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಬಚಾವ್ ಆಂದೋಲನ ಸಮಿತಿಯಿಂದ ಕರೆಯಲಾಗಿದ್ದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಳೆದ ಬಾರಿ ಹೋರಾಟಗಾರರು ಕರೆದಿದ್ದ ಸಭೆಗೆ ರಾಬಕೊವಿ ಒಕ್ಕೂಟದ ಚುನಾವಣೆ ಚಟುವಟಿಕೆಯ ಹಿನ್ನೆಲೆ ಗೈರಾಗಿದ್ದೆ. ಅದಕ್ಕಾಗಿ ಕ್ಷಮೆ ಕೇಳುವೆ ಎಂದರು.

ಬಲ್ಡೋಟಾ ಕಾರ್ಖಾನೆ ವಿಚಾರದಲ್ಲಿ ಗವಿಶ್ರೀಗಳು ನಮಗೆ ಒಪ್ಪಿಸಿದ ಜವಾಬ್ದಾರಿಯಂತೆ ಮುಖ್ಯಮಂತ್ರಿ ಭೇಟಿಯಾಗಿದ್ದು, ಅವರು ಕೂಡ ಕಾರ್ಖಾನೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲು ಅಂದೇ ತಿಳಿಸಿದ್ದಾರೆ. ಬಲ್ಡೋಟಾ ಕಾರ್ಖಾನೆ ಸಿಎಂ ಅವರ ಸೂಚನೆಯಂತೆ ಬಂದಾಗಿದೆ. ಒಂದು ವೇಳೆ ಕಾಮಗಾರಿ ನಡೆಯುತ್ತಿದ್ದರೆ ಪರಿಶೀಲಿಸಿ, ಡಿಸಿಯವರ ಗಮನಕ್ಕೆ ತಂದು ಬಂದ್ ಮಾಡಿಸಲಾಗುವುದು. ಕುರಿಗಾಯಿಗಳ ಮೇಲೆ ಬಿಎಸ್‌ಪಿಎಲ್ ಕಾರ್ಖಾನೆ ಸಿಬ್ಬಂದಿಯಿಂದ ಹಲ್ಲೆಯಾಗಿರುವುದು ಹಾಗೂ ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಿರುವ ವಿಚಾರ ಗೊತ್ತಾಗಿದೆ. ಈ ಕುರಿತು ಡಿಸಿ ಹಾಗೂ ಎಸ್ಪಿ ಅವರೊಂದಿಗೆ ಮಾತನಾಡಿ, ಸಮಸ್ಯೆ ಬಗೆಹರಿಸುವೆ ಎಂದರು.

ಇನ್ನೂ ಬಿಎಸ್‌ಪಿಎಲ್‌ ಸ್ವಾಧೀನ ಮಾಡಿಕೊಂಡಿರುವ ಜಾಗದ ಬಳಿಯಿರುವ ಬಸಾಪುರ ಕೆರೆಯಲ್ಲಿ ಸಾರ್ವಜನಿಕರ ಬಳಕೆಗೆ ನೀಡುವ ಕುರಿತಂತೆ ಮೊದಲು ಹೈಕೋರ್ಟ್ ಆದೇಶ ನೀಡಿತ್ತು. ಆದರೆ, ಅದಾದ ಬಳಿಕ ಸುಪ್ರೀಂ ಕೋರ್ಟ್ ಈ ಕೆರೆ ಬಿಎಸ್‌ಪಿಎಲ್‌ ಕಂಪನಿಗೆ ಸಂಬಂಧಿಸಿದ್ದು ಎಂದು ತೀರ್ಪು ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದರು.

ಶಾಸಕರ ಈ ಮಾತಿಗೆ ಹೋರಾಟಗಾರರು ಆಕೇಪ ವ್ಯಕ್ತಪಡಿಸಿದರು. ಸುಪ್ರೀಂ ಕೋರ್ಟ್ ಈ ವಿಚಾರದಲ್ಲಿ ತೀರ್ಪು ನೀಡಿಲ್ಲ. ಹೈಕೋರ್ಟ್ ಬಸಾಪುರ ಕೆರೆ ಸಾರ್ವಜನಿಕ ಬಳಕೆಗೆ ಮೀಸಲಿಡಬೇಕು ಎಂದು ಕಟ್ಟುನಿಟ್ಟಾಗಿ ನಿರ್ದೇಶನ ನೀಡಿದೆ. ಆದರೂ ಬಿಎಸ್‌ಪಿಎಲ್ ಕಂಪನಿ ಗುಂಡಾವರ್ತನೆ ತೋರಿ, ನೀರು ಕುಡಿಸಲು ಹೋದ ಕುರಿಗಾಹಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ ಎಂದರು.

ಅಲ್ಲದೆ, ಕೂಡಲೇ ಈಗಲೇ ಡಿಸಿ ಅವರೊಂದಿಗೆ ಮಾತನಾಡಿ, ಕೆರೆಯ ಸಂಪೂರ್ಣ ವಿವರ ಪಡೆಯುವಂತೆ ಶಾಸಕರಿಗೆ ಹೋರಾಟಗಾರರು ಒತ್ತಾಯ ಮಾಡಿದರು.

ಶಾಸಕ ಹಿಟ್ನಾಳ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರೊಂದಿಗೆ ಫೋನ್ ಮೂಲಕ ಬಸಾಪುರ ಕೆರೆಯ ವಿಚಾರದ ಕುರಿತು ಸುದೀರ್ಘ ಮಾತನಾಡಿದರು. ಡಿಸಿ ಅವರು, ಕೆರೆ ಬಿಎಸ್‌ಪಿಎಲ್ ಕಂಪನಿಗೆ ಸಂಬಂಧಿಸಿದ್ದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ ಎಂದು ತಿಳಿಸಿದರು. ಇದರಿಂದ ಮತ್ತೆ ಹೋರಾಟಗಾರರು ಹಾಗೂ ಜನಪ್ರತಿನಿಧಿಗಳ ನಡುವೆ ಗೊಂದಲ ಉಂಟಾಯಿತು.

ಶಾಸಕ ಮತ್ತು ಸಂಸದ ರಾಜಶೇಖರ ಹಿಟ್ನಾಳ ಅವರು, ಕೂಲಂಕಷವಾಗಿ ಬಸಾಪುರ ಕೆರೆಯ ವಿಚಾರದಲ್ಲಿ ನ್ಯಾಯಾಲಯ ಯಾವ ತೀರ್ಮಾನ ನೀಡಿದೆ ಎನ್ನುವುದನ್ನು ನಾಲ್ಕು ದಿನದೊಳಗೆ ಪರಿಶೀಲಿಸಿ ಎಂದು ಡಿಸಿ ಸುರೇಶ ಅವರಿಗೆ ತಿಳಿಸಿದರು.

ಮಾಜಿ ಸಂಸದ ಸಂಗಣ್ಣ ಕರಡಿ ಅವರು, ಕಾನೂನಾತ್ಮಕವಾಗಿ ಬಸಾಪುರ ಕೆರೆಯ ವಿಚಾರ ಯಾವ ಹಂತದಲ್ಲಿದೆ ತಿಳಿದುಕೊಳ್ಳೋಣ. ಡಿಸಿ ಅವರಿಗೆ ನಮ್ಮ ಶಾಸಕ-ಸಂಸದರು ಈ ಕುರಿತು ಪರಿಶೀಲಿಸುವಂತೆ ತಿಳಿಸಿದ್ದಾರೆ. ಹಾಗಾಗಿ ನಾಲ್ಕೈದು ದಿನ ನೋಡಿಕೊಂಡು ನ್ಯಾಯಾಲಯ ಈ ವಿಚಾರದಲ್ಲಿ ಯಾವ ತೀರ್ಮಾನ ನೀಡಿದೆ ಎನ್ನುವುದನ್ನು ನೋಡಿಕೊಂಡು ನಾವೆಲ್ಲರೂ ಸೇರಿ ಮುಂದಿನ ಹೆಜ್ಜೆ ಇಡೋಣ ಎಂದರು.

ಹೋರಾಟಗಾರ ಕೆ.ಬಿ. ಗೋನಾಳ ಮಾತನಾಡಿ, ಬಸಾಪುರ ಕೆರೆಯ ಬಳಿ ಬಫರ್ ಜೋನ್ ಅಳವಡಿಸಿಲ್ಲ. ಮುಚ್ಚಿರುವ ಕೆರೆಯ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಮಾಹಿತಿಯೇ ಇಲ್ಲ. ಇದ್ದರೆ ಒಂದು ಆದೇಶ ಕಾಪಿ ಕೊಡಲಿ, ಸುಖಾಸುಮ್ಮನೆ ಬಿಎಸ್‌ಪಿಎಲ್ ಕಂಪನಿ ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದರು.

ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಜಿಲ್ಲೆಯಲ್ಲಿ ಕೊಪ್ಪಳ ಇರಬೇಕು, ಇಲ್ಲವೇ ಬಲ್ಡೋಟಾ ಕಂಪನಿ ಇರಬೇಕು. ಎರಡು ಒಂದೇ ಕಡೆ ಇರಲು ಸಾಧ್ಯವಿಲ್ಲ. ಪ್ರಮುಖವಾಗಿ ಜನ- ಜಾನುವಾರುಗಳಿಗೆ ಬಲ್ಡೋಟಾ ಸುಪರ್ದಿಯಲ್ಲಿರುವ ಕೆರೆಯ ನೀರು ಕುಡಿಯಲು ಬಿಡಬೇಕು. ಗವಿಶ್ರೀಗಳು ಹೇಳಿದಂತೆ ಜನಪ್ರತಿನಿಧಿಗಳು ಬಿಎಸ್‌ಪಿಎಲ್ ಕಾರ್ಖಾನೆ ರದ್ದಾದ ಆದೇಶ ತರಬೇಕು. ಕಂಪನಿ ಹೋರಾಟಗಾರರು ಹಾಗೂ ಕುರಿಗಾಹಿಗಳ ಮೇಲೆ ಹಾಕಿರುವ ಸುಳ್ಳು ಕೇಸ್‌ಗಳಿಗೆ ಬಿ- ರಿಪೋರ್ಟ್ ಹಾಕಿಸಬೇಕು. ಹಲ್ಲೆಗೊಳಗಾದ ಕುರಿಗಾಹಿ ದೇವಪ್ಪ ಅವರ ಕುಟುಂಬಕ್ಕೆ ಪರಿಹಾರ ಕೊಡಬೇಕು. ಮುಂದಿನ ದಿನಮಾನಗಳಲ್ಲಿ ಏನೇ ಅನಾಹುತವಾದರೂ ಅದಕ್ಕೆ ಜಿಲ್ಲೆಯ ಆಡಳಿತ ವರ್ಗದ ಜನಪ್ರತಿನಿಧಿಗಳೇ ಹೊಣೆಯಾಗುತ್ತಾರೆ ಎಂದು ಎಚ್ಚರಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಜಿಲ್ಲಾ ಬಚಾವ್ ಆಂದೋಲನ ಸಮಿತಿ ಮುಖಂಡರಾದ ಡಿ.ಎಚ್. ಪೂಜಾರ, ರಾಜು ಬಾಕಳೆ, ಮಂಜುನಾಥ ಸಜ್ಜನ, ನಜೀರಸಾಬ ಮೂಲಿಮನಿ, ಮಂಜುನಾಥ ಗೊಂಡಬಾಳ, ಎಸ್.ಎ. ಗಫಾರ್, ಕಾಶಪ್ಪ ಚಲವಾದಿ ಇದ್ದರು.

ಹಿಟ್ನಾಳ ಅಧ್ಯಕ್ಷತೆಯಲ್ಲಿ ನಡೆದ ಸಭೆ ತೃಪ್ತಿ ತಂದಿಲ್ಲ: ಅಲ್ಲಮಪ್ರಭು ಬೆಟದೂರು

ಶಾಸಕ ರಾಘವೇಂದ್ರ ಹಿಟ್ನಾಳ್ ಅವರ ಅಧ್ಯಕ್ಷತೆಯಲ್ಲಿ ಬಲ್ಡೋಟಾ ವಿಚಾರಕ್ಕೆ ನಡೆದ ಸಭೆ ನಮಗೆ ತೃಪ್ತಿ ತಂದಿಲ್ಲ ಎಂದು ಜಿಲ್ಲಾ ಬಚಾವ್ ಆಂದೋಲನ ಸಮಿತಿಯ ಹೋರಾಟಗಾರ ಅಲ್ಲಮಪ್ರಭು ಬೆಟದೂರು ತಿಳಿಸಿದರು.

ಸಭೆ ಬಳಿಕ ಮಾತನಾಡಿದ ಅವರು, ಶಾಸಕ ಹಿಟ್ನಾಳ್ ಅವರಿಗೆ ಪ್ರಮುಖ ನಾಲ್ಕು ವಿಷಯಗಳಾದ ಬಿಎಸ್‌ಪಿಎಲ್ ಕಾರ್ಖಾನೆ ಬಂದ್ ಮಾಡಿಸುವುದು, ಬಸಾಪುರ ಕೆರೆಯನ್ನು ಸಾರ್ವಜನಿಕ ಬಳಕೆಗೆ ಒದಗಿಸುವುದು, ಹಲ್ಲೆಗೊಳಗಾದ ಕುರಿಗಾರರಿಗೆ ಪರಿಹಾರ ಕೊಡಿಸಬೇಕು. ಹೋರಾಟಗಾರರ ಮೇಲೆ ಹಾಕಿರುವ ಕೇಸ್‌ಗಳನ್ನು ಹಿಂಪಡೆಯಬೇಕು ಎನ್ನುವ ಸಂದೇಶ ರವಾನಿಸಲಾಯಿತು. ಆದರೆ, ಈ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಪೂರ್ಣ ಪ್ರಮಾಣದ ಭರವಸೆ ನಮಗೆ ಕೊಡಲಿಲ್ಲ. ಹೀಗಾಗಿ ಶಾಸಕ ಹಿಟ್ನಾಳ್ ಹೋರಾಟಗಾರರೊಂದಿಗೆ ಕರೆದ ಸಭೆ ನಮಗೆ ತೃಪ್ತಿ ತಂದಿಲ್ಲ. ಕಳೆದ ಬಾರಿಯೂ ಕರೆಯಲಾಗಿದ್ದ ಸಭೆಗೆ ಶಾಸಕ ಹಿಟ್ನಾಳ್ ಗೈರಾಗಿದ್ದರು. ಈ ಬಾರಿ ಬಂದರೂ ಹೋರಾಟಗಾರರ ಮಾತಿಗೆ ಪೂರ್ಣ ಪ್ರಮಾಣದಲ್ಲಿ ವಿಶ್ವಾಸ ನೀಡಿಲ್ಲ ಎಂದು ಆರೋಪಿಸಿದರು.