ಸಿರಸಂಗಿ ಲಿಂಗರಾಜ ದೇಸಾಯಿ ಆದರ್ಶ ಪಾಲಿಸೋಣ: ಸಚಿವ ಎಂ.ಬಿ. ಪಾಟೀಲ್‌

| Published : Jan 11 2025, 12:47 AM IST

ಸಿರಸಂಗಿ ಲಿಂಗರಾಜ ದೇಸಾಯಿ ಆದರ್ಶ ಪಾಲಿಸೋಣ: ಸಚಿವ ಎಂ.ಬಿ. ಪಾಟೀಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಸಿರಸಂಗಿ ಲಿಂಗರಾಜ ದೇಸಾಯಿ ನಾಡಿನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

ಹೊಸಪೇಟೆ: ಸಿರಸಂಗಿ ಲಿಂಗರಾಜ ದೇಸಾಯಿ ನಾಡಿನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರು ಇಡೀ ಆಸ್ತಿಯನ್ನು ಸಮಾಜಕ್ಕೆ ದಾನ ನೀಡಿದರು. ಅವರ ಆದರ್ಶವನ್ನು ನಾವೆಲ್ಲರೂ ಪಾಲಿಸಬೇಕು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್‌ ಹೇಳಿದರು.ನಗರದ ಸಾಯಿಲೀಲಾ ರಂಗಮಂದಿರದಲ್ಲಿ ಶುಕ್ರವಾರ ನಡೆದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಸಂಸ್ಥಾಪಕ ಅಧ್ಯಕ್ಷ ಸಿರಸಂಗಿ ಶ್ರೀಲಿಂಗರಾಜ ದೇಸಾಯಿ ಅವರ 164ನೇ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಸ್ತ ವೀರಶೈವ ಲಿಂಗಾಯತ ಸಮಾಜದ ಅಸ್ಮಿತೆಯಾಗಿರುವ ಲಿಂಗರಾಜ ದೇಸಾಯಿ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು. ಅವರು ಸ್ಥಾಪನೆ ಮಾಡಿದ ಟ್ರಸ್ಟ್‌ ಹಾಗೂ ಶಿಷ್ಯವೇತನದ ಅಡಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದಾರೆ, ನಾಡಿನ ಮುಖ್ಯಮಂತ್ರಿಯಾಗಿದ್ದಾರೆ, ಉನ್ನತ ಹುದ್ದೆ ಅಲಂಕರಿಸಿದ್ದಾರೆ ಎಂದರು.

ಮಾನವೀಯತೆಯ ಪ್ರತೀಕವಾಗಿರುವ ಲಿಂಗರಾಜ ದೇಸಾಯಿ ದಾನ ಗುಣ ಹೊಂದಿದ್ದರು. ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಮುಂದುವರೆಯಲು ಅ.ಭಾ. ವೀರಶೈವ ಮಹಾಸಭಾ ಹುಟ್ಟು ಹಾಕಿದರು. ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಪಠ್ಯಕ್ರಮದಲ್ಲೂ ಲಿಂಗರಾಜ ದೇಸಾಯಿ ಕುರಿತು ಅಧ್ಯಯನ ಮಾಡಬೇಕಿದೆ. ಲಿಂಗಾಯತ ಸಮಾಜದ ಬಡ ವಿದ್ಯಾರ್ಥಿಗಳಿಗೆ ಸಿರಸಂಗಿ ಟ್ರಸ್ಟ್‌ನಿಂದ ಶಿಷ್ಯವೇತನ ನೀಡಲಾಗುವುದು. ಈ ಮೂಲಕ ಸಮಾಜ ಮತ್ತೆ ಶಿಕ್ಷಣ ರಂಗದಲ್ಲೂ ಮುಂದುವರೆಯಲು ಕ್ರಮವಹಿಸಲಾಗುವುದು ಎಂದರು.

ಕೊಟ್ಟೂರುಸ್ವಾಮಿ ಸಂಸ್ಥಾನಮಠದ ಜ.ಶ್ರೀಕೊಟ್ಟೂರು ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಸಿರಸಂಗಿ ಲಿಂಗರಾಜ ದೇಸಾಯಿ ತನ್ನ ತಲೆಗೆ ಕಲ್ಲು ಹೊಡೆದ ಬಾಲಕನಿಗೆ ಎರಡು ಎಕರೆ ಜಮೀನು ನೀಡುತ್ತಾರೆ. ಮಾನವೀಯ ಸಾಕಾರಮೂರ್ತಿ ಆಗಿದ್ದರು ಎಂದರು.

ಶಾಸಕ ಗವಿಯಪ್ಪ ಮಾತನಾಡಿ, ಕೆರೆಗಳನ್ನು ಕಟ್ಟಿಸಿದ ಲಿಂಗರಾಜ ದೇಸಾಯಿ ಅವರಂತೆ ಸಚಿವ ಎಂ.ಬಿ. ಪಾಟೀಲ್‌ ಕೂಡ ನೀರಾವರಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಅವರು ಕೂಡ ಈ ನಾಡಿನ ದೊಡ್ಡ ಹುದ್ದೆ ಅಲಂಕರಿಸಲಿ ಎಂದರು.

ಶಾಸಕ ಕೆ. ನೇಮರಾಜ್‌ ನಾಯ್ಕ ಮಾತನಾಡಿ, ಎಲ್ಲ ಜಾತಿ, ಸಮಾಜಕ್ಕೆ ಶಿಕ್ಷಣ ನೀಡಿದ ಶಿಕ್ಷಣ ಸಂಸ್ಥೆಗಳು ಬೆಳೆಯಲು ಲಿಂಗರಾಜ ದೇಸಾಯಿ ಕೊಡುಗೆ ನೀಡಿದ್ದಾರೆ. ಇಂತಹ ಮಹಾನ್‌ ದಾಸೋಹಿಯನ್ನು ಸ್ಮರಿಸಬೇಕು ಎಂದರು.

ಶಾಸಕಿ ಅನ್ನಪೂರ್ಣ ಮಾತನಾಡಿ, ತ್ಯಾಗಮಯಿ ಲಿಂಗರಾಜ ದೇಸಾಯಿ ಒಂದು ಜಾತಿ, ಸಮಾಜಕ್ಕೆ ಸೇರಿದವರಲ್ಲ, ಇಡೀ ನಾಡಿಗೆ ಸೇರಿದವರು. ಹಾಗಾಗಿ ಇವರು ಎಂದಿಗೂ ಅಜರಾಮರ ಆಗಿರಲಿದ್ದಾರೆ. ಇವರ ಬಗ್ಗೆ ಶಾಲಾ ಮಕ್ಕಳಿಗೂ ತಿಳಿಯಬೇಕು ಎಂದರು.

ಅ.ಭಾ. ಮಹಾಸಭಾದ ರಾಜ್ಯ ಉಪಾಧ್ಯಕ್ಷ ಕೆ.ಬಿ. ಶ್ರೀನಿವಾಸ ರೆಡ್ಡಿ ಮಾತನಾಡಿ, ಸಿರಸಂಗಿ ಲಿಂಗರಾಜ ದೇಸಾಯಿ ಅವರ ಜಯಂತಿಯನ್ನು ಸರ್ಕಾರ ಆಚರಣೆ ಮಾಡಲು ಮಹಾಸಭಾ ಒತ್ತಾಯಿಸಲಿದೆ ಎಂದರು.

ನಂದಿಪುರದ ಮಹೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಜಾನಪದ ಸಾಹಿತಿ ಡಾ.ಶಂಭು ಬಳಿಗಾರ್‌ ಉಪನ್ಯಾಸ ನೀಡಿದರು. ಲಿಂಗಾಯತ ಕುಡುವಕ್ಕಲಿಗ ಮಹಾಸಭಾದ ಅಧ್ಯಕ್ಷ ಬಿ.ಬಿ. ಪಾಟೀಲ್‌ ಶೇಗುಣಸಿ, ಮುಖಂಡರಾದ ನವೀನ್‌ ಗುಳಗಣ್ಣವರ್‌, ಎಸ್‌. ಬಸವರಾಜ, ಐ. ಸಂಗಪ್ಪ ಮತ್ತಿತರರಿದ್ದರು.