ಬಂದರು ಕಾಮಗಾರಿ ವಿರುದ್ಧ ಮೀನುಗಾರರು ಸಂಘಟಿತರಾಗಿರೋಣ

| Published : Jul 06 2025, 01:48 AM IST

ಸಾರಾಂಶ

ಕೇಣಿ ಬಂದರು ನಿರ್ಮಾಣ ವಿರುದ್ಧ ಸಂಘಟಿತ ಹೋರಾಟ ನಡೆಸಲು ಮೀನುಗಾರರು ತೀರ್ಮಾನಿಸಿದ್ದಾರೆ ಎಂದು ಜಿಲ್ಲಾ ಹರಿಕಂತ್ರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಗೌರವಾಧ್ಯಕ್ಷರಾದ ದಿಲೀಪ್ ಅರ್ಗೇಕರ್ ಹೇಳಿದ್ದಾರೆ.

ಕಾರವಾರ: ಜಿಲ್ಲೆಯಲ್ಲಿ ಮೀನುಗಾರರ ಬದುಕಿನ ಮೇಲೆ ಹೊಡೆದು ಮಾಡಲು ಹೊರಟಿರುವ ಬಂದರು ಯೋಜನೆಗಳ ವಿರುದ್ಧ ಮೀನುಗಾರರು ಸಂಘಟಿತರಾಗಿ ಹೋರಾಡೋಣ ಎಂದು ಜಿಲ್ಲಾ ಹರಿಕಂತ್ರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಗೌರವಾಧ್ಯಕ್ಷರಾದ ದಿಲೀಪ್ ಅರ್ಗೇಕರ್ ಹೇಳಿದ್ದಾರೆ.

ಈಗಾಗಲೇ ಕಾರವಾರ ಹಾಗೂ ಹೊನ್ನಾವರದಲ್ಲಿ ಬಂದರು ಮಾಡಲು ಮುಂದಾಗಿದ್ದ ಸರ್ಕಾರ ಅಂಕೋಲಾದ ಕೇಣಿಯಲ್ಲೂ ಜೆಎಸ್‌ಡಬ್ಲ್ಯೂ ಕಂಪನಿ ವತಿಯಿಂದ ಬೃಹತ್ ಬಂದರು ಮಾಡಲು ಮುಂದಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಇರುವ ಕರಾವಳಿ ಪ್ರದೇಶದಲ್ಲಿ ಅದರಲ್ಲೂ ಕಾರವಾರ, ಅಂಕೋಲಾ ಕರಾವಳಿ ಭಾಗದಲ್ಲಿ ಬಹುಭಾಗ ನೌಕಾನೆಲೆಯವರ ವ್ಯಾಪ್ತಿಗೆ ಹೋಗಿದ್ದು, ನೌಕಾನೆಲೆ ಜಾಗದಲ್ಲಿ ಮೀನುಗಾರಿಕೆ ಮಾಡಲು ಅವಕಾಶವಿಲ್ಲ. ಇರುವ ಅಲ್ಪ ಜಾಗದಲ್ಲಿ ಕಾರವಾರ ಹಾಗೂ ಕೇಣಿಯಲ್ಲಿ ಬಂದರು ಮಾಡಲು ಹೊರಟಿದ್ದಾರೆ. ಕೇಣಿಯಲ್ಲಿ ಬಂದರು ಆದರೆ ದೊಡ್ಡ ದೊಡ್ಡ ಹಡಗುಗಳ ಓಡಾಟದಿಂದ ಮತ್ಸ್ಯ ಸಂತತಿ ಮೇಲೆ ಪರಿಣಾಮ ಬೀಳಲಿದೆ. ಜತೆಗೆ ಹಡಗು ಓಡಾಡುವ ಜಾಗದಲ್ಲಿ ಮೀನು ಸಿಗದೇ ಮೀನುಗಾರರು ಪರದಾಡಬೇಕಾಗಬಹುದು. ಕೇಣಿ ಬಂದರನ್ನು ಬಲವಂತದಿಂದ ಮಾಡಲು ಮುಂದಾಗಿದ್ದಾರೆ. ಸಾರ್ವಜನಿಕ ಅಹವಾಲ ಸ್ವೀಕಾರ ಸಭೆಯಲ್ಲಿ ಜಿಲ್ಲೆಯ ಎಲ್ಲ ಮೀನುಗಾರರು ಒಗ್ಗಟ್ಟಾಗಿ ಬಂದರು ವಿರೋಧಿಸೋಣ. ನಮಗೆ ಬಂದರು ಬೇಡ, ನಮ್ಮನ್ನು ಇರುವಂತೆ ಬಿಡಿ ಎಂದು ಆಗ್ರಹಿಸೋಣ ಎಂದು ಹೇಳಿದರು.

ಉತ್ತರ ಕನ್ನಡ ಹರಿಕಂತ್ರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಯೋಜನೆ ವಿರುದ್ಧ ಹೋರಾಡಲು ಸಿದ್ಧರಾಗಿದ್ದೇವೆ ಎಂದು ಜಿಲ್ಲಾ ಗೌರವಾಧ್ಯಕ್ಷ ದಿಲೀಪ್ ಜಿ. ಅರ್ಗೇಕರ್, ಜಿಲ್ಲಾಧ್ಯಕ್ಷ ರೋಶನ್ ಹರಿಕಂತ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾರುತಿ ಹರಿಕಂತ್ರ, ಜಿಲ್ಲಾ ಉಪಾಧ್ಯಕ್ಷರಾದ ಭರತ್ ಖಾರ್ವಿ, ಸುನಿಲ್ ತಾಂಡೇಲ್, ಪ್ರವೀಣ ತಾಂಡೇಲ್, ಜಿಲ್ಲಾ ಕಾರ್ಯದರ್ಶಿ ಕೃಷ್ಣ ತಾಂಡೇಲ್, ಅಂಕೋಲಾ ತಾಲೂಕು ಅಧ್ಯಕ್ಷ ಮಹೇಶ ಹರಿಕಂತ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.