ಹಾನಗಲ್ಲ: ತಾಲೂಕಿನ ಅರಿಷಿಣಗುಪ್ಪಿ ಗ್ರಾಮದಲ್ಲಿ ಕುಕ್ಕಡೇಶ್ವರಿ ದೇವಿ ಜಾತ್ರಾ ಕಮಿಟಿ ಆಯೋಜಿಸಿದ್ದ ಹೋರಿ ಹಬ್ಬಕ್ಕೆ ಹೈಕೋರ್ಟ್ ವಕೀಲ ಸಂದೀಪ ಪಾಟೀಲ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಇದು ನಮ್ಮ ಮಣ್ಣಿನ ಹಬ್ಬ, ಉತ್ಸಾಹ-ಉಲ್ಲಾಸದಿಂದ ಆಚರಿಸಿ, ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸೋಣ. ಜನಪದ ಕ್ರೀಡೆಗಳು ಉಳಿಯಬೇಕು. ನಮ್ಮ ಗ್ರಾಮೀಣ ಭಾರತದಲ್ಲಿ ಕೃಷಿಕನಿಗೆ ಎಲ್ಲದರಲ್ಲೂ ಮೊದಲ ಆದ್ಯತೆ ಇರಬೇಕು ಎಂದು ಹೇಳಿದರು.ಕೃಷಿಕನ ಹಬ್ಬ ಹರಿದಿನಗಳು ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಹಳ್ಳಿಯ ಜನಪದರಿಂದಲೇ ಗ್ರಾಮೀಣ ಕ್ರೀಡೆಗಳು ಉಳಿದಿವೆ. ಎಲ್ಲ ರೀತಿಯ ಹಬ್ಬ ಹರಿದಿನಗಳನ್ನು ಈಗಲೂ ಅಚ್ಚುಕಟ್ಟಾಗಿ ಆಚರಿಸೋಣ. ಇದರಲ್ಲಿ ಒಂದು ತೃಪ್ತಿಯ ಜತೆಗೆ ನಮ್ಮ ಪೀಳಿಗೆಗೆ ಸಂಸ್ಕಾರವೂ ಇದೆ. ಜೀವನೋತ್ಸಾಹಕ್ಕೆ ಕ್ರೀಡೆಗಳು ಸಹಕಾರಿ ಕೂಡ. ಹೋರಿ ಹಬ್ಬ ಒಂದು ಜನಪದ ಕ್ರೀಡೆಯಾಗಿದೆ. ಆದರೆ ಅದನ್ನು ಆಚರಿಸುವಾಗ ಹೆಚ್ಚಿನ ಎಚ್ಚರಿಕೆ, ಜಾಗೃತಿ ಕ್ರಮಗಳನ್ನು ಕೈಗೊಳ್ಳಬೇಕು. ಹೋರಿ ಹಬ್ಬ ನಮ್ಮ ಮಣ್ಣಿನ ಹಬ್ಬ. ಇದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಇದನ್ನು ನಿಲ್ಲಿಸಲು ಬಿಡುವುದಿಲ್ಲ. ಎಲ್ಲರೂ ಜಾಗೃತಿ, ಜವಾಬ್ದಾರಿಯಿಂದ ಈ ಹಬ್ಬದಲ್ಲಿ ಪಾಲ್ಗೊಳ್ಳಿ. ಇದನ್ನು ಶಾಶ್ವತವಾಗಿ ಉಳಿಸಿಕೊಳ್ಳೋಣ. ನಿಯತ್ತಿನಿಂದ ಈ ಹಬ್ಬದಲ್ಲಿ ಪಾಲ್ಗೊಳ್ಳೋಣ ಎಂದು ಕರೆ ನೀಡಿದರು.
ಕುಕ್ಕಡೇಶ್ವರಿ ಮಠದ ಪ್ರಶಾಂತ ಗುರುಗಳು, ಅಖಿಲ ಕರ್ನಾಟಕ ರೈತರ ಜನಪದ ಕ್ರೀಡೆ ಹೋರಿ ಹಬ್ಬ ಹೋರಾಟ ಸಮಿತಿ ಅಧ್ಯಕ್ಷ ವಿನಾಯಕ ಶಂಕರಗೌಡ ಗಿರಿಗೌಡ್ರ, ಮಾಲತೇಶ ಗಂಟೇರ, ಅಮರ ಬೆಲ್ಲದ, ಮಂಜುನಾಥ ಯಳ್ಳೂರ, ಗುಡ್ಡನಗೌಡ ಪಾಟೀಲ ಇದ್ದರು.