ಸಾರಾಂಶ
ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದ ನಗರಸಭೆ ಅಧ್ಯಕ್ಷ
ಕನ್ನಡಪ್ರಭ ವಾರ್ತೆ ಕೊಪ್ಪಳನಿಜಶರಣ ಅಂಬಿಗರ ಚೌಡಯ್ಯ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆದಾಗ ಬದುಕು ಸಾರ್ಥಕವಾಗುತ್ತದೆ. ಜಯಂತಿಯ ಆಚರಣೆಗೆ ಅರ್ಥ ಬರುತ್ತದೆ ಎಂದು ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಇವುಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.12ನೇ ಶತಮಾನದಲ್ಲಿ ಜೀವಿಸಿದ್ದ ಅಂಬಿಗರ ಚೌಡಯ್ಯನವರು ತಮ್ಮ ನೇರ ನುಡಿ ವಚನಗಳ ಮೂಲಕ ಸಮಾಜದಲ್ಲಿ ಬೇರೂರಿದ್ದ ಅಂಧ ಶ್ರದ್ಧೆಗಳನ್ನು ಹೋಗಲಾಡಿಸಲು ಶ್ರಮಿಸಿದ್ದರು. ಸಮಾಜ ಹಾಗೂ ದೇಶಕ್ಕೆ ನೀಡಿದ ಅವರ ಕೊಡುಗೆ ಬಹುದೊಡ್ಡದು ಎಂದು ಹೇಳಿದರು.
ಕೊಪ್ಪಳ ಜಿಲ್ಲೆಯಲ್ಲಿ ಅಂಬಿಗರ ಚೌಡಯ್ಯ ಸಮಾಜದವರು ಎಲ್ಲಾ ಸಮಾಜದವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಪರಸ್ಪರ ಪ್ರೀತಿ ಹಾಗೂ ವಿಶ್ವಾಸದಿಂದ ಬಾಳುತ್ತಿದ್ದಾರೆ. ಈ ಸಮಾಜ ಆರ್ಥಿಕವಾಗಿ ಬಲಿಷ್ಠವಾಗಬೇಕಾದರೆ ತಮ್ಮ ಮಕ್ಕಳಿಗೆ ಮೊದಲು ಉತ್ತಮ ಶಿಕ್ಷಣ ನೀಡಬೇಕೆಂದರು.ಕೊಪ್ಪಳ ನಗರದಲ್ಲಿ ಅಂಬಿಗರ ಚೌಡಯ್ಯ ವೃತ್ತ ನಿರ್ಮಿಸಬೇಕೆಂಬುದು ತಮ್ಮೆಲ್ಲರ ಬೇಡಿಕೆಯಂತೆ ನಗರಸಭೆಯ ಬರುವ ಮುಂದಿನ ಸಭೆಯಲ್ಲಿ ಈ ಕುರಿತು ಚರ್ಚಿಸಿ ನಿರ್ಣಯಿಸಲಾಗುವುದು ಎಂದು ಹೇಳಿದರು.
ಶಿಕ್ಷಕ ಮಹೇಶ ಬಳ್ಳಾರಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಜಗತ್ತಿಗೆ ಮೊದಲ ಪಾರ್ಲಿಮೆಂಟ್ ಕೊಟ್ಟ ನಾಡು ನಮ್ಮದು. ಭಕ್ತಿ, ಕಾಯಕ, ದಾಸೋಹ ಪರಿಕಲ್ಪನೆಯನ್ನು ಶರಣರು ಜಗತ್ತಿಗೆ ನೀಡಿದ್ದಾರೆ. ಅನುಭವ ಮಂಟಪದ 770 ಅಮರಗಣಂಗಳಲ್ಲಿ ಅಂಬಿಗರ ಚೌಡಯ್ಯವರು ಒಬ್ಬರಾಗಿದ್ದರು. ಅವರು ಕಾಲಜ್ಞಾನಿ, ಚಿಂತಕ ಹಾಗೂ ಪಾಂಡಿತ್ಯದ ಬಹುದೊಡ್ಡ ನಿಧಿಯಾಗಿದ್ದರು. 64 ವಿದ್ಯೆಗಳಲ್ಲಿ ಒಂದಾದ ಸಂಜೀವಿನಿ ವಿದ್ಯೆಯನ್ನು ಕೆಲವರಿಗೆ ಮಾತ್ರ ಬರುತಿತ್ತು. ಅದರಲ್ಲಿ ನಮ್ಮ ನಿಜ ಶರಣರು ಒಬ್ಬರು ಎಂದು ಹೇಳಿದರು.ಕಲ್ಯಾಣದ ಕ್ರಾಂತಿಯ ನಂತರ ವಚನಗಳ ಸಂರಕ್ಷಣೆ ಜವಾಬ್ದಾರಿಯನ್ನು ಅಂಬಿಗರ ಚೌಡಯ್ಯ ಹೊತ್ತಿದ್ದರು. ಗಂಗಾಮತಸ್ಥ ಸಮಾಜವನ್ನು 39 ಹೆಸರುಗಳಿಂದ ಕರೆಯಲಾಗುತ್ತದೆ. ನಮ್ಮ ಸಮಾಜ ಸಾಮಾಜಿಕ. ಧಾರ್ಮಿಕ ಹಾಗೂ ಶೈಕ್ಷಣಿಕವಾಗಿ ಇನ್ನೂ ಮುಂದೆ ಬರಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎನ್.ಯಂಕಪ್ಪ. ಶಂಕರಗೌಡ ಮಾಲಿ ಪಾಟೀಲ್, ಗಂಗಾಮತಸ್ಥ ಸಮಾಜದ ಜಿಲ್ಲಾಧ್ಯಕ್ಷ ಸೋಮಣ್ಣ ಬಾರಕೇರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಗ್ರೇಡ್-2 ತಹಸೀಲ್ದಾರ ಗವಿಸಿದ್ದಪ್ಪ ಮಣ್ಣೂರು, ಜಿಪಂ ಮಾಜಿ ಉಪಾಧ್ಯಕ್ಷ ಯಮನಪ್ಪ ಕಬ್ಬೇರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಮಂಜುನಾಥ ಗೊಂಡಬಾಳ, ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಹನುಮಂತಪ್ಪ ಯಲಿಗಾರ, ನಗರಸಭೆ ಸದಸ್ಯರಾದ ರಾಜಶೇಖರ ಆಡೂರ್, ಬಸಯ್ಯಜ್ಜ ಹಿರೇಮಠ, ಸಿದ್ದು ಮ್ಯಾಗೇರಿ ಸೇರಿದಂತೆ ಇತರೆ ಹಲವರು ಹಾಗೂ ಗಂಗಾಮತಸ್ಥ ಸಮಾಜದ ಕುಲಭಾಂದವರು ಉಪಸ್ಥಿತರಿದ್ದರು.ಮೆರವಣಿಗೆ:ಅಂಬಿಗರ ಚೌಡಯ್ಯ ಜಯಂತಿ ಅಂಗವಾಗಿ ಭಾವಚಿತ್ರದ ಮೆರವಣಿಗೆ ನಗರದ ಸಿರಸಪ್ಪಯ್ಯನ ಮಠದಿಂದ ಆರಂಭವಾಗಿ ಜಿಲ್ಲಾ ಸಾಹಿತ್ಯ ಭವನದವರೆಗೆ ನಡೆಯಿತು. ತಹಸೀಲ್ದಾರ ವಿಠ್ಠಲ್ ಚೌಗಲಾ ಹಾಗೂ ಸಮಾಜದ ಮುಖಂಡರು ಚಾಲನೆ ನೀಡಿದರು. ಕೊಪ್ಪಳ ನಗರದ ವಿವಿಧ ವೃತ್ತಗಳ ಮೂಲಕ ನಡೆದ ಈ ಮೆರವಣಿಗೆಯಲ್ಲಿ ಮಹಿಳೆಯರು ಕುಂಭ ಹೊತ್ತು ಪಾಲ್ಗೊಂಡಿದ್ದರು.