ಬಹುತ್ವದ ನಾಡು ಕಟ್ಟಲು ದುಡಿಯೋಣ: ತಹಸೀಲ್ದಾರ್ ಕುಮಾರಸ್ವಾಮಿ

| Published : Nov 02 2024, 01:16 AM IST

ಸಾರಾಂಶ

ಕನ್ನಡದ ವಾತಾವರಣ ವಿಸ್ತರಿಸಲು, ಗಟ್ಟಿಗೊಳಿಸಲು ನಾವೆಲ್ಲ ಹೆಚ್ಚೆಚ್ಚು ಶ್ರಮಿಸೋಣ.

ಕನ್ನಡಪ್ರಭ ವಾರ್ತೆ ಕಾರಟಗಿ

ಕನ್ನಡದ ವಾತಾವರಣ ವಿಸ್ತರಿಸಲು, ಗಟ್ಟಿಗೊಳಿಸಲು ನಾವೆಲ್ಲ ಹೆಚ್ಚೆಚ್ಚು ಶ್ರಮಿಸೋಣ. ಕರ್ನಾಟಕ ಬಹುತ್ವದ ಬೀಡು. ಬಹುತ್ವದ ನಾಡು ಕಟ್ಟುವ ವಿಚಾರದಲ್ಲಿ ಕನ್ನಡಿಗರೆಲ್ಲ ಒಗ್ಗಟಾಗಿ ದುಡಿಯೋಣ ಎಂದು ತಹಸೀಲ್ದಾರ್ ಎಂ. ಕುಮಾರಸ್ವಾಮಿ ತಿಳಿಸಿದರು.

ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪ್ರೌಢಶಾಲಾ ಹಿಂಭಾಗದ ಸಿದ್ದೇಶ್ವರ ರಂಗ ಮಂದಿರದಲ್ಲಿ ತಾಲೂಕಾಡಳಿತ, ತಾಪಂ ಮತ್ತು ಪುರಸಭೆ ಕಾರಟಗಿ ಇವುಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ೬೯ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ದೇವರಾಜ ಅರಸರು ೧೯೭೩ರಲ್ಲಿ ಕರ್ನಾಟಕ ಎಂದು ನಾಮಕರಣ ಮಾಡಿದ್ದು, ನಾಮಕರಣಗೊಂಡು ೫೦ ವರ್ಷದ ಸುವರ್ಣ ಸಂಭ್ರಮದ ಹೊತ್ತಿನಲ್ಲಿ ನಾವಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಈ ಮಣ್ಣಿನಲ್ಲಿ ಕನ್ನಡ-ಕರ್ನಾಟಕ-ಬಹುತ್ವ-ವೈಚಾರಿಕತೆ ಎಲ್ಲವೂ ಸೇರಿ ಆಗಿರುವ ಕನ್ನಡತನ ರೂಪುಗೊಂಡಿದೆ. ಈ ಕನ್ನಡತನದ ಚರಿತ್ರೆಯನ್ನು ನಾವು ತಲೆಮಾರಿಗೆ ದಾಟಿಸುವ ಕೆಲಸವನ್ನು ಪರಿಣಾಮಕಾರಿಯಾಗಿ ತಲುಪಿಸುವ ಉದ್ದೇಶದಿಂದ ರಾಜ್ಯೋತ್ಸವ ಆಚರಿಸಲಾಗುತ್ತಿದೆ ಎಂದರು.

ಮುಂದಿನ ದಿನಗಳಲ್ಲಿ ಕನ್ನಡ ಭಾಷೆ, ಕರ್ನಾಟಕ ಬೆಳವಣಿಗೆಗೆ ಪೂರಕವಾದ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಇಲ್ಲಿನ ನೆಲ, ಜಲ, ಸಂಸ್ಕೃತಿ, ಪರಂಪರೆಯನ್ನು ಎತ್ತಿ ಹಿಡಿಯೋಣ ಎಂದು ತಿಳಿಸಿದರು.

ನಂತರ ಪುರಸಭೆ ಮುಖ್ಯಾಧಿಕಾರಿ ಸುರೇಶ ಶೆಟ್ಟರ್ ಮತ್ತು ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಶರಣಪ್ಪ ಕೋಟ್ಯಾಳ ಮಾತನಾಡಿದರು.

ಭವ್ಯ ಮೆರವಣಿಗೆ ಮತ್ತು ಧ್ವಜಾರೋಹಣ:ವೇದಿಕೆ ಕಾರ್ಯಕ್ರಮ ಆರಂಭಕ್ಕೂ ಮುನ್ನ ತಾಲೂಕಾಡಳಿತ ಸೇರಿದಂತೆ ವಿವಿಧ ಇಲಾಖೆಗಳ ನೇತೃತ್ವದಲ್ಲಿ ವಿಶೇಷ ಎಪಿಎಂಸಿಯಿಂದ ನಾಡದೇವತೆ ಭುವನೇಶ್ವರಿ ದೇವಿಯ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆ ಆರಂಭಕ್ಕೂ ಮೊದಲು ಭುವನೇಶ್ವರಿದೇವಿಗೆ ಪುಷ್ಪ ನಮನ ಸಲ್ಲಿಸಿದರು.

ಈ ಸಂದರ್ಭ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ವಿವಿಧ ಇಲಾಖೆಗಳ ನೌಕರರು, ಸಂಘ-ಸಂಸ್ಥೆಯ ಪ್ರತಿನಿಧಿಗಳು ಭಾಗವಹಿಸಿದ್ದರು. ಕೊನೆಯಲ್ಲಿ ಮೆರವಣಿಗೆಯು ಸಿದ್ದೇಶ್ವರ ರಂಗ ಮಂದಿರದ ಮುಂದಿನ ಕ್ರೀಡಾಂಗಣ ತಲುಪಿತು.

ಈ ವೇಳೆ ಪೊಲೀಸ್, ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ತಂಡಗಳು, ಎನ್.ಸಿ.ಸಿ, ಸ್ಕೌಟ್ಸ್ ಮತ್ತು ಗೈಡ್ಸ್, ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ಗಮನ ಸೆಳೆದವು.

ಇದೇ ಸಂದರ್ಭ ರಾಜ್ಯೋತ್ಸವ ಪ್ರಯುಕ್ತ ರೈತ ಮುಖಂಡ ಮರಿಯಪ್ಪ ಸಾಲೋಣಿ, ಕನ್ನಡ ಪರ ಸಂಘಟನೆಯ ಹನುಮೇಶ ನಡುವಲಮನಿ ಮತ್ತು ಶ್ರೀಶರಣಬಸವೇಶ್ವರ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಕ ಬಸವರಾಜ್ ಮೂಲಿಮನಿ ಅವರನ್ನು ಗೌರವಿಸಲಾಯಿತು.

ಈ ವೇಳೆ ಪುರಸಭೆ ಅಧ್ಯಕ್ಷೆ ರೇಖಾ ಆನೆಹೊಸೂರು, ಉಪಾಧ್ಯಕ್ಷ ದೇವಮ್ಮ, ಸದಸ್ಯರಾದ ಸಂಗನಗೌಡ, ಸಿದ್ದಪ್ಪ ಬೇವಿನಾಳ, ಪಿಐ ಸುಧೀರ್ ಬೆಂಕಿ, ಗ್ರೇಡ್-೨ ತಹಸೀಲ್ದಾರ್ ವಿಶ್ವೇಶ್ವರಯ್ಯ, ಇಸಿಒ ರಾಘವೇಂದ್ರ, ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ನಾಗರಾಜ ಅರಳಿ, ಸದಸ್ಯ ಸೋಮನಾಥ ದೊಡ್ಡಮನಿ, ಖಾಜಾ ಹುಸೇನ್ ಮುಲ್ಲಾ, ನಿಂಗಪ್ಪ ಗಿಣಿವಾರ್, ಶರಣಪ್ಪ ಸಂಗಟಿ, ಮೃತ್ಯುಂಜಯ ಸಂಗಟಿ ಇತರರು ಇದ್ದರು.