ಸಾರಾಂಶ
ಹಾವೇರಿ ನಗರದ ಜಿಲ್ಲಾ ನೌಕರರ ಭವನದಲ್ಲಿ ವಿಶ್ವ ಪೋಷಣ ದಿನಾಚರಣೆ ಹಾಗೂ ರಾಷ್ಟ್ರೀಯ ಪೋಷಣ ಸಪ್ತಾಹ ಅಂಗವಾಗಿ ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಶೈಲಜಾ ಎಚ್.ವಿ. ಉದ್ಘಾಟಿಸಿದರು.
ಹಾವೇರಿ: ಫಾಸ್ಟ್‌ಫುಡ್‌ಗೆ ದಾಸರಾಗದೇ ಉತ್ತಮ ಪೌಷ್ಟಿಕ ಆಹಾರ ಸೇವಿಸಬೇಕು. ನಮ್ಮ ಮುಂದಿನ ಪೀಳಿಗೆಗೆ ನಮ್ಮ ಸಾಂಪ್ರದಾಯಿಕ ಆಹಾರ ಪದ್ಧತಿ ಪರಿಚಯಿಸುವ ಕೆಲಸವಾಗಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಶೈಲಜಾ ಎಚ್.ವಿ. ಅವರು ಹೇಳಿದರು.
ನಗರದ ಜಿಲ್ಲಾ ನೌಕರರ ಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ನ್ಯಾಯವಾದಿಗಳ ಸಂಘ, ಶಿಶು ಅಭಿವೃದ್ಧಿ ಇಲಾಖೆ, ತಾಪಂ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ವಿಶ್ವ ಪೋಷಣ ದಿನಾಚರಣೆ ಹಾಗೂ ರಾಷ್ಟ್ರೀಯ ಪೋಷಣ ಸಪ್ತಾಹ ಅಂಗವಾಗಿ ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತಾಯಂದಿರು ಹಾಗೂ ಮಕ್ಕಳಲ್ಲಿ ಕಂಡುಬರುವ ಅಪೌಷ್ಟಿಕತೆ ತೊಡೆದು ಹಾಕಲು ಸರ್ಕಾರ ಜಾರಿಗೊಳಿಸಿದ ಯೋಜನೆಗಳು ಎಲ್ಲರೂ ತಲುಪಬೇಕು. ಅಪೌಷ್ಟಿಕತೆ ನಿವಾರಣೆಗೆ ಸಿರಿಧಾನ್ಯಗಳು, ಮೊಳಕೆಕಾಳು, ಹಣ್ಣು-ತರಕಾರಿಗಳನ್ನು ದೈನಂದಿನ ಆಹಾರದಲ್ಲಿ ಬಳಸಬೇಕು ಎಂದು ಸಲಹೆ ನೀಡಿದರು.''ಘರ್ ಘರ್ ಮೇ ನ್ಯಾಯ ಕೀ ಜಾಗೃತಿ'' ಎಂಬ ಘೋಷವಾಕ್ಯದೊಂದಿಗೆ ಜನಸಾಮಾನ್ಯರಿಗೆ ಉಚಿತ ಕಾನೂನು ಅರಿವು ಮತ್ತು ನೆರವು ನೀಡಲಾಗುತ್ತಿದೆ. ಜಿಲ್ಲಾ ಜಾಗೃತಿ ಸಮಿತಿ ಸಹ ರಚಿಸಲಾಗಿದೆ. ಏನಾದರೂ ಸಮಸ್ಯೆಗಳಿದ್ದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಟೋಲ್ ಫ್ರೀ ಸಂಖ್ಯೆ 15100ಗೆ ಕರೆ ಮಾಡಬಹುದು ಎಂದು ಹೇಳಿದರು.
ಕಾನೂನು ನೆರವು ಸಹಾಯಕ ಅಭಿರಕ್ಷಣಾ ವಕೀಲ ಎನ್.ಎನ್. ಡಿಳ್ಳೆಪ್ಪನವರ ಅವರು ಅಪೌಷ್ಟಿಕ ಆಹಾರ ಮತ್ತು ಪೋಕ್ಸೋ ಕಾಯ್ದೆ ಕುರಿತು ಉಪನ್ಯಾಸ ನೀಡಿದರು.ರಾಷ್ಟ್ರೀಯ ಲೋಕ ಅದಾಲತ್ ಹಾಗೂ 90 ದಿನಗಳ ವಿಶೇಷ ಮಧ್ಯಸ್ಥಿಕೆ ಅಭಿಯಾನ, ಕಾಯಂ ಜನತಾ ನ್ಯಾಯಾಲಯದ ಉಪಯುಕ್ತ ಸೇವೆಗಳು ಹಾಗೂ ''ಘರ್ ಘರ್ ಮೇ ನ್ಯಾಯ ಕೀ ಜಾಗೃತಿ'' ಉಚಿತ ಕಾನೂನು ಅರಿವು ಕುರಿತು ಪ್ರಚಾರ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು.
ಜಿಲ್ಲಾ ನಿರೂಪಣಾಧಿಕಾರಿ ಶೈಲಾ ಕುರಹಟ್ಟಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ನೇತ್ರಾವತಿ ಇತರರು ಇದ್ದರು.