ಸಾಮಾಜಿಕ ಸಮಸ್ಯೆ ಬಗ್ಗೆ ಕವಿತೆ ಮೂಡಿ ಬರಲಿ

| Published : Nov 23 2025, 03:00 AM IST

ಸಾರಾಂಶ

ಇಂದಿನ ಯುವ ಕವಿಗಳು ಸಾಮಾಜಿಕ ಸಮಸ್ಯೆಗಳ ಬಗ್ಗೆ ಕವಿತೆ, ಬರೆಯುತ್ತ ಗಮನ ಹರಿಸಬೇಕಿದೆ

ಹೂವಿನಹಡಗಲಿ: ಕನ್ನಡ ಸಾಹಿತ್ಯ ಲೋಕದಲ್ಲಿ ಸಾಕಷ್ಟು ವಿಭಿನ್ನ ಪುಸ್ತಕಗಳು ಇವೆ. ಜತೆಗೆ ಇಂದಿನ ಯುವ ಕವಿಗಳು ಸಾಮಾಜಿಕ ಸಮಸ್ಯೆಗಳ ಬಗ್ಗೆ ಕವಿತೆ, ಬರೆಯುತ್ತ ಗಮನ ಹರಿಸಬೇಕಿದೆ ಎಂದು ನಿವೃತ್ತ ಪ್ರಾಚಾರ್ಯ ಶಾಂತಮೂರ್ತಿ ಬಿ. ಕುಲಕರ್ಣಿ ಹೇಳಿದರು.

ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಶಾಖಾ ಗ್ರಂಥಾಲಯ ಬೀಚಿ ಗ್ರಂಥಾಲಯ ಬೆಂಬಲಿಗರ ಬಳಗ, ತಾಲೂಕ ಗ್ರಾಮ ಪಂಚಾಯಿತಿ ಮೇಲ್ವಿಚಾರಕರ ಸಂಘದ ವತಿಯಿಂದ ಆಯೋಜಿಸಿದ್ದ ಗ್ರಂಥಾಲಯ ಸಪ್ತಾಹ 2025 ಸಮಾರೋಪ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಕಾವ್ಯ ಓದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಗ್ರಂಥಾಲಯ ಜ್ಞಾನದ ಕಣಜವಾಗಿದೆ. ಪುಸ್ತಕ ಬದುಕಿನ ಸಂಗಾತಿ ಗ್ರಂಥಗಳನ್ನು ಹೆಚ್ಚು ಓದುವುದರಿಂದ ಮನುಷತ್ವ ಬೆಳೆಯುತ್ತದೆ. ಗ್ರಂಥಾಲಯದ ಸದುಪಯೋಗವನ್ನು ಯುವಕರು ಮಕ್ಕಳು ಪಡೆದುಕೊಳ್ಳಲು ತಿಳಿಸಿದರು.

ಪುಸ್ತಕ ಓದಿನ ಅನುಭೂತಿ ಅನುಭಾವ ಮೊಬೈಲ್ ಫೋನ್‌ನಿಂದ ಸಿಗುವುದಿಲ್ಲ. ವಿದ್ಯಾವಂತರು ಓದಿನಿಂದ ವಿಮುಕ್ತರಾಗುತ್ತಿರುವುದು ವಿಷಾದನೀಯ. ನಿತ್ಯ ಕನಿಷ್ಠ ಒಂದು ದಿನ ಪತ್ರಿಕೆ ಓದದವರು ಇರುವುದು ವಿಪರ್ಯಾಸ ಎಂದರು.

ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಕೊಟ್ರಗೌಡ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವ ವಿದ್ಯಾರ್ಥಿಗಳಿಗೆ ಮೊದಲನೇ ಮಹಡಿ ಶೀಘ್ರದಲ್ಲೇ ಉದ್ಘಾಟನೆ ನೆರವೇರಿಸುವ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

ಹಿಂದಿನ ಗ್ರಂಥಪಾಲಕರ ಹಾದಿಯಲ್ಲಿ ಈಗಿನ ಶಾಖಾ ಗ್ರಂಥಾಲಯ ಸಿಬ್ಬಂದಿ ಈ ವರ್ಷ ಅರ್ಥಪೂರ್ಣವಾಗಿ ಗ್ರಂಥಾಲಯ ಸಪ್ತಾಹ ಆಚರಿಸಿದ್ದಾರೆ ಎಂದು ಪ್ರಶಂಸಿಸಿದರು.

ಬಳಗದ ಹಿರಿಯ ಸದಸ್ಯರಾದ ಬೀರಬ್ಬಿ ಬಸವರಾಜ, ಮಲ್ಲಿಗೆ ಪ್ರಕಾಶನದ ಎಲ್.ಖಾದರ ಭಾಷಾ ಮಾತನಾಡಿದರು.

ಯುವ ಕವಿ ಸಾಲಿನ್ ನಿಸಾರ್ ಅಹಮದ್ ಅವರ ಕವನ ಸಂಕಲನ ಒಲವಿನ ಹನಿ ಪುಸ್ತಕವನ್ನು, ಶಾಂತಮೂರ್ತಿ ಬಿ ಕುಲಕರ್ಣಿ ಲೋಕಾರ್ಪಣೆ ಮಾಡಿದರು.

ಕವಿ ಉಪನ್ಯಾಸಕ ಶಂಕರ್ ಬೆಟಗೇರಿ ಕೃತಿ ಪರಿಚಯಿಸಿದರು. ಗ್ರಾಪಂ ಮೇಲ್ವಿಚಾರಕರ ಸಂಘದ ಜಿಲ್ಲಾಧ್ಯಕ್ಷ ಕುರಿ ಮಂಜುನಾಥ, ತಾಲೂಕು ಅಧ್ಯಕ್ಷ ಕೆ.ದೊಡ್ಡಬಸಪ್ಪ, ಶಾಖಾ ಗ್ರಂಥಾಲಯಾಧಿಕಾರಿ ಬಿ.ನಾರಾಯಣ್, ಪತ್ರಕರ್ತ ಬಿಚ್ಚುಗತ್ತಿ ಖಾಜಾ ಹುಸೇನ್, ಎಂ.ದಯಾನಂದ ಉಪಸ್ಥಿತರಿದ್ದರು.