ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಕಾಂಗ್ರೆಸ್‌ನಿಂದ ಜೆಡಿಎಸ್ ಸೇರ್ಪಡೆಯಾಗಿ ಚುನಾವಣೆಯಲ್ಲಿ ಸೋಲನುಭವಿಸಿದ ಬಳಿಕ ಮಾಜಿ ಶಾಸಕ ಮೊಹಿಯುದ್ದೀನ್ ಬಾವ ಇದೀಗ ತುಳು ಭಾಷೆಗಾಗಿ ಪಕ್ಷಾತೀತ ಹೋರಾಟಕ್ಕೆ ಕೈ ಹಾಕಿದ್ದಾರೆ. ತುಳುವನ್ನು ಅಧಿಕೃತ ಭಾಷೆಯಾಗಿ ಘೋಷಣೆ ಮಾಡುವ ಮೂಲಕ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಿ ಜನರ ಮೂಲಕ ಮುಖ್ಯಮಂತ್ರಿ ಮತ್ತು ಪ್ರಧಾನಿಗೆ ಪತ್ರ ಅಭಿಯಾನ ನಡೆಸಲು ಮುಂದಾಗಿದ್ದಾರೆ. ಈ ಅಭಿಯಾನ ಜ.29ರಿಂದ ಫೆ.2ರವರೆಗೆ ನಡೆಯಲಿದೆ.ರಾಜ್ಯ ಸರ್ಕಾರ ಈ ಕುರಿತು ನಿರ್ಧಾರ ಮಾಡಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಕ್ರಮಬದ್ಧವಾಗಿ ಈ ಪ್ರಕ್ರಿಯೆ ನಡೆಸಿದರೆ ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರುವುದು ನಿಶ್ಚಿತ. ಇದಕ್ಕೆ ಪೂರಕವಾಗಿ ತುಳುನಾಡಿನ ಜನರೂ ಕೈಜೋಡಿಸಿ ಪತ್ರ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದು ಮಾಜಿ ಶಾಸಕ ಮೊಹಿಯುದ್ದೀನ್ ಬಾವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ರಿಜಿಸ್ಟರ್ಡ್ ಪೋಸ್ಟ್: ಮನವಿ ಪತ್ರದ ಲಿಂಕ್‌ನ್ನು ಜನರಿಗೆ ತಲುಪಿಸಲಿದ್ದೇವೆ. ಅದನ್ನು ಡೌನ್ ಲೋಡ್ ಮಾಡಿ ಅಂಚೆ ಇಲಾಖೆಯ ರಿಜಿಸ್ಟರ್ಡ್ ಪೋಸ್ಟ್ ಮೂಲಕ ಸಿಎಂ ಮತ್ತು ಪಿಎಂ ಅವರ ವಿಳಾಸಕ್ಕೆ ಪೋಸ್ಟ್ ಮಾಡಬೇಕು. ತುಳುನಾಡಿನಿಂದ ಕನಿಷ್ಠ ೧೦ ಸಾವಿರ ಪತ್ರಗಳನ್ನಾದರೂ ಕಳುಹಿಸಿದರೆ ತುಳು ಭಾಷೆಗೆ ಸ್ಥಾನಮಾನ ದೊರಕಿಸುವ ನಿಟ್ಟಿನಲ್ಲಿ ಬಹುದೊಡ್ಡ ಕೊಡುಗೆ ಆಗಲಿದೆ ಎಂದು ಅವರು ಹೇಳಿದರು.
ತುಳು ಅಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಮಾತನಾಡಿ, ತುಳುವಿಗೆ ಸ್ಥಾನಮಾನ ದೊರಕಿಸುವ ನಿಟ್ಟಿನಲ್ಲಿ ಹಿಂದೆಯೇ ಎಲ್ಲ ದಾಖಲೆಗಳನ್ನು ಸರ್ಕಾರಕ್ಕೆ ಕಳಿಸಿದ್ದೆವು, ಅದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಂತರ ಮೋಹನ್ ಆಳ್ವ ವರದಿಯನ್ನು ಸರ್ಕಾರ ತರಿಸಿಕೊಂಡಿತ್ತು. ಅದಕ್ಕೆ ಕೂಡ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. 8ನೇ ಪರಿಚ್ಛೇದಕ್ಕೆ ಸೇರಿಸಲು ಎಲ್ಲ ಕೆಲಸ ಈಗಾಗಲೇ ಆಗಿದೆ. ಯುನಿಕೋಡ್‌ಗೂ ತುಳು ಲಿಪಿ ಸೇರಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇದೀಗ ಪತ್ರ ಅಭಿಯಾನವೂ ಭಾಷೆಗೆ ಇನ್ನಷ್ಟು ಬಲ ತುಂಬಲಿದೆ ಎಂದು ತಿಳಿಸಿದರು.ಹಿರಿಯ ರಂಗಕರ್ಮಿ, ಚಿತ್ರ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲಬೈಲ್ ಮಾತನಾಡಿ, ತುಳು ಭಾಷೆಗೆ ಸ್ಥಾನಮಾನ ನೀಡಲು ರಾಜಕೀಯ ಇಚ್ಛಾಶಕ್ತಿ ಕೊರತೆ ಇದೆ. ಎರಡೆರಡು ವರದಿಗಳು ಸಲ್ಲಿಕೆಯಾದರೂ ಇದುವರೆಗೂ ಸಾಧ್ಯವಾಗಿಲ್ಲ. ಪತ್ರ ಅಭಿಯಾನಕ್ಕೆ ಕಲಾವಿದರ ಬೆಂಬಲ ಇದೆ ಎಂದು ಹೇಳಿದರು.
ಪ್ರಮುಖರಾದ ಹೆಜಮಾಡಿಯ ಎಚ್.ಕೆ.ಶರೀಫ್, ಶೈಲೇಶ್ ಇದ್ದರು.