ಸಾರಾಂಶ
ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಎಲ್ಲ ಅರ್ಹತೆ ಇರುವ ಬಗ್ಗೆ ಕಳೆದ ಹತ್ತಾರು ವರ್ಷಗಳ ಹಿಂದೆಯೇ ತಿಳಿದುಕೊಂಡಿರುವೆ.
ಜೋಯಿಡಾ: ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಎಲ್ಲ ಅರ್ಹತೆ ಇರುವ ಬಗ್ಗೆ ಕಳೆದ ಹತ್ತಾರು ವರ್ಷಗಳ ಹಿಂದೆಯೇ ತಿಳಿದುಕೊಂಡಿರುವೆ. ರಾಜ್ಯ ಸರ್ಕಾರ ಅಧ್ಯಯನ ವರದಿ ಕೇಂದ್ರಕ್ಕೆ ಸಲ್ಲಿಸಿದೆ. ಆದಷ್ಟು ಬೇಗ ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರ್ಕಾರ ತೀರ್ಮಾನ ಮಾಡುವಂತೆ ಪತ್ರ ಬರೆಯಲಾಗುವುದು ಎಂದು ನಿವೃತ್ತ ನ್ಯಾ. ನಾಗಮೋಹನದಾಸ್ ಹೇಳಿದರು.
ಅವರು ಜೋಯಿಡಾ ತಾಲೂಕಿನ ಕಾರ್ಟೋಳಿ ಗ್ರಾಮದಲ್ಲಿ ಜಿಲ್ಲಾ ಕುಣಬಿ ಸಮಾಜದಿಂದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.ನೆರೆಯ ಗೋವಾ ರಾಜ್ಯದ ಕುಣಬಿಗಳು ಪರಿಶಿಷ್ಟ ಪಂಗಡ ಸೌಲಭ್ಯ ಕಳೆದ 22 ವರ್ಷಗಳಿಂದ ಪಡೆಯುತ್ತಿದ್ದಾರೆ. ಪರಿಶಿಷ್ಟ ಪಂಗಡಕ್ಕೆ ಸೇರಿಸುವುದು ನಿಮ್ಮ ಹಕ್ಕು, ಇದರ ಹೊರತಾಗಿ ಶಿಕ್ಷಣ ಅತಿಮುಖ್ಯ. ನಿರುದ್ಯೋಗ ನಿವಾರಣೆ ಹಂತ ಹಂತವಾಗಿ ಆಗಬೇಕು. ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ತೆರೆದು ಆ ಮೂಲಕ ಯುವಕರು ಕೌಶಲ್ಯ ಪಡೆದು ಮೊದಲ ಹಂತದಲ್ಲಿ ಕೃಷಿ ಜೊತೆಗೆ ಸಣ್ಣ ಸಣ್ಣ ಉದ್ಯೋಗ ಮಾಡುವುದರ ಮೂಲಕ ಆರ್ಥಿಕ ಸದೃಢರಾಗಬೇಕು ಎಂದರು.
ಪ್ರತಿ ತಿಂಗಳು ಸಮಾಜದ ಸಭೆ ಸೇರುವ ಮೂಲಕ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಲು ಕಾರ್ಯತಂತ್ರ ರೂಪಿಸಬೇಕೆಂದರು.ಮುಖ್ಯಮಂತ್ರಿ ಜೊತೆ ವಿಶೇಷ ಚರ್ಚೆ:
ರೈತ ಸಂಘದ ಮನವಿ ಸ್ವೀಕರಿಸಿದ ಅವರು, ಈ ಗಡಿ ಗ್ರಾಮದಲ್ಲಿ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯ ಕೊರತೆ ಇದೆ. ಇ ಬಗ್ಗೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗುತ್ತದೆ. ಇನ್ನು ಕೆಲವೇ ದಿನಗಳಲ್ಲಿ ಸಿಎಂ ಸಿದ್ದರಾಮಯ್ಯ ಜತೆ ಚರ್ಚೆ ಮಾಡಿ ಈ ಭಾಗದ ಸಮಸ್ಯೆ ಪರಿಹಾರ ಮಾಡಲು ಮನವಿ ಮಾಡಲಾಗುವುದು ಎಂದರು.ಸಮಾಜದ ಸಂಸ್ಥಾಪಕ ಅಧ್ಯಕ್ಷ ಮಾಬಳು ಕುಂಡಲಕರ, ಸಮಾಜ ಅಧ್ಯಕ್ಷ ಸುಭಾಷ ಗಾವಡಾ, ತಾಲೂಕು ಅಧ್ಯಕ್ಷ ಪ್ರೇಮಾನಂದ ವೇಳಿಪ, ಉಪಾಧ್ಯಕ್ಷ ಕೃಷ್ಣ ಮಿರಾಶಿ, ಕಾರ್ಯದರ್ಶಿ ರಾಜೇಶ್ ಗಾವಡಾ, ದಯಾನಂದ ಕುಮಗಾಳಕರ, ಖಜಾಂಚಿ ದೀವಾಕರ ಕುಂಡಲಕರ್, ಸಿಐಟಿಯು ಕಾರ್ಯದರ್ಶಿ ಡಿ.ಶ್ಯಾಮಸನ್, ಗ್ರಾಮದ ಮುಖಂಡ ಸುರೇಶ್ ವೇಳಿಪ, ಶಾಂತಾ ವೇಳಿಪ, ಪ್ರಕಾಶ್ ವೇಳಿಪ ಇದ್ದರು.