ಲೋಕಾ ಚುನಾವಣೆ ಬಹಿಷ್ಕರಿಸಿ ಆಯೋಗಕ್ಕೆ ಪತ್ರ

| Published : Mar 28 2024, 12:56 AM IST

ಸಾರಾಂಶ

ಬಾಳೆಹೊನ್ನೂರು ಸಮೀಪದ ಬನ್ನೂರಿನ ಜಕ್ಕಣಕ್ಕಿ ಗ್ರಾಮದಲ್ಲಿ ಚುನಾವಣಾ ಬಹಿಷ್ಕಾರ ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ಎನ್.ಆರ್.ಪುರ ತಹಸೀಲ್ದಾರ್ ರಮೇಶ್ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು

ಸಮೀಪದ ಬನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಕ್ಕಣಕ್ಕಿಯ ಗ್ರಾಮಸ್ಥರು ರಸ್ತೆ ನಿರ್ಮಾಣದ ಬೇಡಿಕೆ ಮುಂದಿಟ್ಟು ಚುನಾವಣಾ ಬಹಿಷ್ಕಾರಕ್ಕೆ ಕರೆ ನೀಡಿ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದ ಹಿನ್ನೆಲೆಯಲ್ಲಿ ಬುಧವಾರ ಎನ್.ಆರ್.ಪುರ ತಹಸೀಲ್ದಾರ್ ರಮೇಶ್‌ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಕೆ ಮಾಡಿದರು.

ಬನ್ನೂರು ಗ್ರಾಪಂ ಜಕ್ಕಣಕ್ಕಿಯಲ್ಲಿ ಸುಮಾರು 10 ಆದಿವಾಸಿ ಹಸಲರ ಕುಟುಂಬಗಳಿದ್ದು, ಇಲ್ಲಿನ ಮನೆಗಳಿಗೆ ತೆರಳಲು ಸಮರ್ಪಕವಾದ ರಸ್ತೆ ವ್ಯವಸ್ಥೆ ಇಲ್ಲ. ಈ ಹಿನ್ನೆಲೆಯಲ್ಲಿ ಹಲವು ಬಾರಿ ರಸ್ತೆಗೆ ಕಾಂಕ್ರೀಟ್ ಅಥವಾ ಡಾಂಬರೀಕರಣ ಮಾಡಿಕೊಡುವಂತೆ ಸ್ಥಳೀಯ ಗ್ರಾಮ ಪಂಚಾಯಿತಿ, ಶಾಸಕರು, ತಹಸೀಲ್ದಾರ್‌ಗೆ ಕೋರಿದ್ದರೂ ಸಹ ಇದುವರೆಗೆ ಯಾರೂ ಸ್ಪಂದಿಸಿಲ್ಲವಾಗಿ ಜಕ್ಕಣಕ್ಕಿ ಗ್ರಾಮದ 10 ಆದಿವಾಸಿ ಕುಟುಂಬಗಳು ಈ ಬಾರಿಯ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ರಾಜ್ಯ ಚುನಾವಣಾ ಆಯೋಗಕ್ಕೆ ಇತ್ತೀಚೆಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಿಂದ ಎನ್.ಆರ್.ಪುರ ತಹಸೀಲ್ದಾರ್ ಅವರಿಗೆ ಪತ್ರ ಬರೆದು ಸಮಸ್ಯೆ ಬಗೆಹರಿಸುವಂತೆ ಸೂಚಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಬುಧವಾರ ಎನ್.ಆರ್.ಪುರ ತಹಸೀಲ್ದಾರ್ ರಮೇಶ್ ಜಕ್ಕಣಕ್ಕಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿ ಶೀಘ್ರ ಸಮಸ್ಯೆ ಬಗೆಹರಿಸಲಾಗುವುದು. ಚುನಾವಣಾ ಬಹಿಷ್ಕಾರವನ್ನು ಕೈಬಿಡಬೇಕು ಎಂದು ಮನವಿ ಮಾಡಿದರು.

ಈ ಕುರಿತು ಮಾತುಕತೆ ನಡೆಸಲು ತಹಸೀಲ್ದಾರ್ ಕಚೇರಿಗೆ ಗ್ರಾಮಸ್ಥರನ್ನು ಆಹ್ವಾನಿಸಿದರು. ಬಳಿಕ ಗ್ರಾಮಸ್ಥರು ಚುನಾವಣಾ ಬಹಿಷ್ಕಾರ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಬಾಳೆಹೊನ್ನೂರು ಪಿಎಸ್‌ಐ ರವೀಶ್, ನಾಡಕಚೇರಿ ಉಪ ತಹಸೀಲ್ದಾರ್ ನಾಗೇಂದ್ರ, ಕಂದಾಯ ನಿರೀಕ್ಷಕ ಮಂಜು, ವಿಎ ನವೀನ್ ಮತ್ತಿತರರು ಹಾಜರಿದ್ದರು.