ಮೋದಿ ಬೆಂಬಲಿಸದಂತೆ ಟಿಡಿಪಿ, ಜೆಡಿಯುಗೆ ಒತ್ತಾಯ

| Published : Jun 09 2024, 01:33 AM IST

ಸಾರಾಂಶ

ಚಂದ್ರಬಾಬು ನಾಯ್ಡು, ನಿತೀಶ್‌ಕುಮಾರ್‌ಗೆ ಉಮ್ಮತ್ ಚಿಂತಕರ ವೇದಿಕೆಯಿಂದ ಪತ್ರ ಬರೆದು ನರೇಂದ್ರ ಮೋದಿ ಬೆಂಬಲಿಸದಂತೆ ಇ-ಮೇಲ್‌ ಮೂಲಕ ಮನವಿ ಮಾಡಲಾಗುವುದೆಂದು ವೇದಿಕೆಯ ಅಧ್ಯಕ್ಷ ಅನೀಸ್ ಪಾಷ ತಿಳಿಸಿದರು.

ಕನ್ನಡಪ್ರಭ ವಾರ್ತೆ, ದಾವಣಗೆರೆ

ಕೋಮುವಾದಿ ನಿಲುವಿನ ನರೇಂದ್ರ ಮೋದಿ ಪ್ರಧಾನಿಯಾಗಲು ಬೆಂಬಲ ನೀಡದಂತೆ ಟಿಡಿಪಿ ಹಾಗೂ ಜೆಡಿಯು ಪಕ್ಷಗಳ ಅಧ್ಯಕ್ಷರಿಗೆ ಉಮ್ಮತ್ ಚಿಂತಕರ ವೇದಿಕೆಯಿಂದ ಪತ್ರ ಬರೆದು ಮನವಿ ಮಾಡಿದ್ದೇವೆ ಎಂದು ವೇದಿಕೆ ಅಧ್ಯಕ್ಷ, ಹಿರಿಯ ವಕೀಲ ಅನೀಸ್ ಪಾಷ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ 3ನೇ ಬಾರಿಗೆ ಪ್ರಧಾನಿಯಾಗಲು ಟಿಡಿಪಿ ಮತ್ತು ಜೆಡಿಯು ಪಕ್ಷಗಳ ಅಧ್ಯಕ್ಷರು ನೀಡದಂತೆ ಪತ್ರದಲ್ಲಿ ಮನವಿ ಮಾಡಿದ್ದು, ಉಭಯ ಪಕ್ಷಗಳು ವೇದಿಕೆ ಮನವಿಗೆ ಸ್ಪಂದಿಸುವ ವಿಶ್ವಾಸವಿದೆ ಎಂದರು.

ಟಿಡಿಪಿ, ಜೆಡಿಯು ಪಕ್ಷಗಳು ನಿರಂತರ ಕೋಮುವಾದವನ್ನು ಧಿಕ್ಕರಿಸಿ, ಜಾತ್ಯತೀತ, ಸಾಮಾಜಿಕ ನ್ಯಾಯ, ಭಾರತದ ಏಕತೆ, ಅಖಂಡತೆಗಾಗಿ ಅದರಲ್ಲೂ ಮುಖ್ಯವಾಗಿ ಧ್ವನಿ ಇಲ್ಲದ ದಲಿತ ಮತ್ತು ಅಲ್ಪಸಂಖ್ಯಾತರ ಪರ ನಿಂತ ಪಕ್ಷಗಳಾಗಿವೆ. ಇತಿಹಾಸ ಗಮನಿಸಿದರೆ, ಬಿಜೆಪಿ ಪ್ರತಿ ಹಂತದಲ್ಲೂ ಕೋಮು ಧೃವೀಕರಣ ಮಾಡುತ್ತಾ, ದ್ವೇಷ ಭಾಷಣ ಗಳಿಂದ ಮುನ್ನೆಲೆಗೆ ಬಂದಿರುವ ಪಕ್ಷ ಎಂದು ಅವರು ಟೀಕಿಸಿದರು.

ರಥಯಾತ್ರೆ, ಗೋದ್ರಾ ಹತ್ಯಾಕಾಂಡ, ಮುಜಾಫರ್‌ ನಗರ ದೊಂಬಿ, ಭೀಮಾ ಕೋರೆಗಾಂವ್‌ ಘಟನೆ ಹೀಗೆ ಹಲವಾರು ಘಟನೆಗಳನ್ನು ಗಮನಿಸಿದರೆ, ಮೇಲ್ನೋಟಕ್ಕೆ ವಾಸ್ತವಾಂಶ ಅರ್ಥವಾಗುತ್ತದೆ. ನರೇಂದ್ರ ಮೋದಿ ಪ್ರಧಾನಿಯಾದ ನಂತರ ನಿರಂತರ ಪ್ರತಿ ಹಂತದಲ್ಲೂ ಮುಸ್ಲಿಂ ಸಮಾಜ, ದಲಿತರು, ಸಂವಿಧಾನದ ವಿರುದ್ಧ ಪ್ರಹಾರ ಮಾಡುತ್ತಾ ಬಂದಿದ್ದಾರೆ. ಪ್ರತಿಯೊಂದು ವಿಚಾರದಲ್ಲೂ ಹಿಂದು-ಮುಸ್ಲಿಂ ಎಂಬ ಧೋರಣೆ ತೋರಿಸುತ್ತಲೇ ಬಂದಿದ್ದಾರೆ ಎಂದು ಅ‍ವರು ದೂರಿದರು.

ನರೇಂದ್ರ ಮೋದಿ ಸಂಪುಟದ ರಮೇಶ ಬಿದೂರಿ ಸದನದಲ್ಲೇ ಮುಸ್ಲಿಂ ಸಂಸದ ಡ್ಯಾನಿಶ್ ಅಲಿಯವರನ್ನು ಮುಲ್ಲಾ ಭಯೋತ್ಪಾದಕನೆಂದು ಸಂಬೋಧನೆ ಮಾಡಿದ್ದು, ಮತ್ತೊಬ್ಬ ಸಂಸದ ಮುಸ್ಲಿಮರನ್ನೇ ಗುರಿಯಾಗಿಸಿಕೊಂಡು ಹಗುರ ಹೇಳಿಕೆ ನೀಡಿದ್ದರು. ಬಿಲ್ಕಿಸ್ ಭಾನು ಪ್ರಕರಣದಲ್ಲಿ ಆರೋಪಿಗಳಿಗೆ ಅವಧಿ ಪೂರ್ವ ಬಿಡುಗಡೆ ಮಾಡಿದಾಗ, ಕೊರೋನಾ ಕಾಯಿಲೆಗೆ ಮುಸ್ಲಿಮರೇ ಕಾರಣರೆಂದು ದ್ವೇಷದ ಕಿಡಿ ಹಚ್ಚಿದಾಗಲೂ ಪ್ರಧಾನಿ ಮೋದಿ ಮೌನವಾಗಿಯೇ ಇದ್ದರು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಬಿಜೆಪಿ ಆಳ್ವಿಕೆ ಇದ್ದಾಗ ಹಿಜಾಬ್‌, ಆಜಾನ್‌, ಲವ್ ಜಿಹಾದ್‌, ಜಟ್ಕಾ ಕಟ್‌, ಹಲಾಲ್‌, ಪ್ರಾರ್ಥನಾ ಮಂದಿರಗಳಲ್ಲಿ ಮುಸ್ಲಿಮರು ವ್ಯಾಪಾರ ಮಾಡಬಾರದೆಂದು ತಡೆದಾಗ, ಮುಸ್ಲಿಮರ ಮೀಸಲಾತಿಯನ್ನು ರದ್ದುಗೊಳಿಸಿದಾಗ ಹೀಗೆ ಹತ್ತು ಹಲವಾರು ಪ್ರಸಂಗಗಳ ವೇಳೆ ನರೇಂದ್ರ ಮೋದಿ ಮೂಕ ಪ್ರೇಕ್ಷಕರಂತೆ ಚಕಾರವೆತ್ತದೇ, ಇಂತಹದ್ದಕ್ಕೆಲ್ಲಾ ಮೌನವಾಗಿದ್ದುಕೊಂಡೇ ಸಮ್ಮಿತಿಸಿದ್ದಾರೆ ಎಂದು ಅ‍ರು ಆರೋಪಿಸಿದರು.

ಲೋಕಸಭೆ ಚುನಾವಣೆ ವೇಳೆ ಮೋದಿ ಮುಸ್ಲಿಮರ ವಿರುದ್ಧ ಪರೋಕ್ಷವಾಗಿ ಮಾತನಾಡಿ, ರಾಜಸ್ಥಾನದ ಭಾಷಣದಲ್ಲಿ ಭಾರತದ ಮೂಲ ನಿವಾಸಿಗಳಾದ ಮುಸ್ಲಿಮರನ್ನೇ ಗುರಿಯಾಗಿಸಿಕೊಂಡು, ನುಸುಳುಕೋರರು ಹೆಚ್ಚು ಮಕ್ಕಳನ್ನು ಹುಟ್ಟಿಸುವವರು ಎಂಬುದಾಗಿ ಹೀನಾಯವಾಗಿ, ಕೀಳು ಮಟ್ಟದ ಶೈಲಿಯಲ್ಲಿ ದ್ವೇಷ ಭಾಷಣ ಮಾಡಿ, ಇಡೀ ಮುಸ್ಲಿಂ ಸಮಾಜಕ್ಕೆ ಅವಮಾನಿಸಿದ್ದಾರೆ. ಇದರಿಂದ ವಿಶ್ವಾದ್ಯಂತ ಇತರೆ ರಾಷ್ಟ್ರಗಳ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಆದರೂ, ಚುನಾವಣಾ ಆಯೋಗವಾಗಲೀ, ಪೊಲೀಸ್ ಇಲಾಖೆಯಾಗಲೀ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಟೀಕಿಸಿದರು.

ನರೇಂದ್ರ ಮೋದಿಗೆ ಮತ್ತೊಮ್ಮೆ ಪ್ರಧಾನಿಯಾಗಲು ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ ಯಾವುದೇ ಕಾರಣಕ್ಕೂ ಬೆಂಬಲ ನೀಡಬಾರದು ಎಂಬುದಾಗಿ ವೇದಿಕೆಯಿಂದ ಕಳಕಳಿಯ ಮನವಿ ಮಾಡಿದ್ದೇವೆ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರೆ, ಮುಸ್ಲಿಂ ಸಮುದಾಯವು ದೇಶಾದ್ಯಂತ ಹೋರಾಟವನ್ನು ಮಾಡಬೇಕಾಗುತ್ತದೆ ಎಂಬುದಾಗಿ ಇ-ಮೇಲ್ ಮೂಲಕ ಮನವಿ ಪತ್ರದಲ್ಲಿ ಎಚ್ಚರಿಸಿರುವುದಾಗಿ ಅನೀಸ್ ಪಾಷ ತಿಳಿಸಿದರು. ವೇದಿಕೆಯ ನಸೀಮಾ ಬಾನು, ಅಲ್ಲಾಭಕ್ಷ್‌, ಆದಿಲ್ ಖಾನ್ ಇತರರು ಇದ್ದರು.