ಕನ್ನಡಪ್ರಭ ವಾರ್ತೆ ವಿಜಯಪುರ

ಗ್ರಂಥಾಲಯಗಳು ಕೇವಲ ಜ್ಞಾನದ ಉಗ್ರಾಣಗಳಲ್ಲ, ಈಗ ಅವುಗಳನ್ನು ಡಿಜಿಟಲ್ ಜ್ಞಾನ ಕೇಂದ್ರಗಳಾಗಿ ಪರಿವರ್ತಿಸುವುದು ಮತ್ತು ಬಳಕೆದಾರರಿಗೆ ಎಲೆಕ್ಟ್ರಾನಿಕ್ ಸೇವೆಗಳನ್ನು ಒದಗಿಸುವುದು ಎಂದಿಗಿಂತಲೂ ಹೆಚ್ಚು ಮುಖ್ಯವಾಗಿದೆ ಎಂದು ಇಂಡಿಯನ್ ಸೊಸೈಟಿ ಫಾರ್‌ ಟೆಕ್ನಿಕಲ್ ಎಜುಕೇಶನ್ ಅಧ್ಯಕ್ಷ ಡಾ.ಸುರೇಶ.ಡಿ.ಎಸ್ ಹೇಳಿದರು.

ನಗರದ ಬಿಎಲ್‌ಡಿಇ ಸಂಸ್ಥೆಯ ವಚನ ಪಿತಾಮಹ ಡಾ.ಪಿ.ಜಿ.ಹಳಕಟ್ಟಿ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಕೇಂದ್ರ ಗ್ರಂಥಾಲಯದಲ್ಲಿ ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಶನ್ ಮತ್ತು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಒಕ್ಕೂಟದ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಮುಕ್ತ ಮೂಲ ಸಾಫ್ಟ್‌ವೇರ್ ಗ್ರಂಥಾಲಯ ನಿರ್ವಹಣೆಯನ್ನು ಅನ್ವೇಷಿಸುವುದು ಎಂಬ ವಿಷಯದ ಕುರಿತು ಮೂರು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಅಂತಹ ಸೇವೆಗಳನ್ನು ನೀಡುವಲ್ಲಿ ಕೌಶಲ್ಯಪೂರ್ಣ ಗ್ರಂಥಪಾಲಕರು ಪ್ರಮುಖ ಪಾತ್ರ ವಹಿಸುತ್ತಾರೆ. ಗ್ರಂಥಾಲಯ ನವೀಕರಣಗಳಿಗಾಗಿ ಹಲವು ಮುಕ್ತ ಮೂಲ ಸಾಫ್ಟ್‌ವೇರ್ ಆಯ್ಕೆಗಳಿವೆ. ಗ್ರಂಥಾಲಯ ಯಾಂತ್ರೀಕರಣಕ್ಕೆ ಕೋಹಾ ಮತ್ತು ಡಿಸ್ಪೇಸ್ ತುಂಬಾ ಉಪಯುಕ್ತವಾಗಿವೆ ಎಂದರು. ಪ್ರಾಂಶುಪಾಲ ಡಾ.ಮಂಜುನಾಥ ಮಾತನಾಡಿ, ಗ್ರಂಥಾಲಯ ಸೇವೆಗಳು ಪುಸ್ತಕಗಳು ಮತ್ತು ಇ-ಜರ್ನಲ್‌ಗಳು ಸೇರಿದಂತೆ ವ್ಯಾಪಕವಾದ ಮುದ್ರಣ ಮತ್ತು ಡಿಜಿಟಲ್ ಸಂಪನ್ಮೂಲಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಶೈಕ್ಷಣಿಕ ಬೆಳವಣಿಗೆಗೆ ಬೆಂಬಲ ನೀಡುತ್ತವೆ. ಪ್ರತಿಯೊಬ್ಬರೂ ತಮ್ಮ ಅಧ್ಯಯನ ಮತ್ತು ಸಂಶೋಧನೆಯನ್ನು ಹೆಚ್ಚಿಸಲು ಗ್ರಂಥಾಲಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಂತೆ ಅವರು ಪ್ರೋತ್ಸಾಹಿಸಿದರು. ಕಾರ್ಯಾಗಾರದಲ್ಲಿ ಶಿವಮೊಗ್ಗದ ಡಿವಿಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಗ್ರಂಥಪಾಲಕ ನಿರಂಜನ.ಕೆ, ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಗ್ರಂಥಪಾಲಕ ಡಾ.ಬಸವರಾಜ ಕುಂಬಾರ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ ಎಂದರು.ಉಪಪ್ರಾಂಶುಪಾಲೆ ಡಾ.ಲೀನಾ ರಾಘಾ, ಡಾ.ಪ್ರದೀಪ ಮಾಳಜಿ ಮಾತನಾಡಿದರು. ಕಾರ್ಯಾಗಾರದ ಸಂಚಾಲಕ ಡಾ.ಎಂ.ಎಂ.ಬಾಚಲಾಪುರ ಸ್ವಾಗತಿಸಿದರು. ಡಾ.ಶಶಿಕಾಂತ ಚೋಳಕೆ ಪರಿಚಯಿಸಿದರು. ಡಾ.ಕೈಲಾಶ ಚಡಚಣ ನಿರೂಪಿಸಿದರು. ವಿದ್ಯಾ ಬುದಿಹಾಳ ವಂದಿಸಿದರು.