ಕಿಷ್ಕಿಂಧೆ ಕಟ್ಟಡದಿಂದ ಬಿಇಒ ಕಚೇರಿಗೆ ಗ್ರಂಥಾಲಯ ಶಿಫ್ಟ್‌

| Published : Apr 29 2024, 01:37 AM IST

ಸಾರಾಂಶ

ಕನ್ನಡಪ್ರಭ ನಿರಂತರ ವರದಿಗೆ ಜಿಲ್ಲಾಡಳಿತ, ಶಾಸಕರು ಕೊನೆಗೂ ಎಚ್ಚೆತ್ತು ಪಟ್ಟಣದಲ್ಲಿ ಕಿಷ್ಕಿಂಧೆಯಂತಿದ್ದ ಗುಂಡ್ಲುಪೇಟೆಯ ಗ್ರಂಥಾಲಯ ಪುಸ್ತಕ ದಿನಾಚರಣೆಯ ದಿನವೇ ಸ್ಥಳಾಂತರಗೊಂಡು ಕಾರ್ಯಾರಂಭ ಮಾಡಿದೆ.

ರಂಗೂಪುರ ಶಿವಕುಮಾರ್‌

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಕನ್ನಡಪ್ರಭ ನಿರಂತರ ವರದಿಗೆ ಜಿಲ್ಲಾಡಳಿತ, ಶಾಸಕರು ಕೊನೆಗೂ ಎಚ್ಚೆತ್ತು ಪಟ್ಟಣದಲ್ಲಿ ಕಿಷ್ಕಿಂಧೆಯಂತಿದ್ದ ಗುಂಡ್ಲುಪೇಟೆಯ ಗ್ರಂಥಾಲಯ ಪುಸ್ತಕ ದಿನಾಚರಣೆಯ ದಿನವೇ ಸ್ಥಳಾಂತರಗೊಂಡು ಕಾರ್ಯಾರಂಭ ಮಾಡಿದೆ.

ಪಟ್ಟಣದ ಹಳೇ ಆಸ್ಪತ್ರೆಯ ರಸ್ತೆ ಬದಿಯಲ್ಲಿ ಬೆಳಕಿಲ್ಲದ ಕಿಷ್ಕಿಂಧೆ ಈ ಗ್ರಂಥಾಲಯ ಕಟ್ಟಡ ಎಂದು ಕನ್ನಡಪ್ರಭ ಪತ್ರಿಕೆ ೨೦೨೩ ರ ಜೂ.೧೬ ರಂದು ಪ್ರಕಟವಾದ ವರದಿಯಲ್ಲಿ ಅವ್ಯವಸ್ಥೆಯ ಆಗರ ಗುಂಡ್ಲುಪೇಟೆ ಗ್ರಂಥಾಲಯ, ಸ್ಥಳಾಂತರಕ್ಕೆ ಅಧಿಕಾರಿಗಳ ಹಿಂದೇಟು, ಕಟ್ಟಡದಲ್ಲಿ ಶೌಚಾಲಯದ ದುಸ್ಥಿತಿ ಎಂದು ಗಮನ ಸೆಳೆದಿತ್ತು.

ಕನ್ನಡಪ್ರಭ ವರದಿಗೆ ಎಚ್ಚೆತ್ತ ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌, ಜಿಲ್ಲಾಧಿಕಾರಿ ಟಿ.ಸಿ. ಶಿಲ್ಪಾನಾಗ್‌ ಸೂಚನೆಯ ಮೇರೆಗೆ ಜಿಲ್ಲಾ ಮುಖ್ಯ ಗ್ರಂಥಾಲಯ ಅಧಿಕಾರಿ ಶಿವಸ್ವಾಮಿ ಗ್ರಂಥಾಲಯಕ್ಕೆ ಕಟ್ಟಡ ಹುಡುಕಲು ಶುರು ಮಾಡಿದರು.

ಆಗ ಕನ್ನಡಪ್ರಭ, ಕಸಾಪ ಜಿಲಾಧ್ಯಕ್ಷ ಎಂ. ಶೈಲಕುಮಾರ್‌ (ಶೈಲೇಶ್), ಪುರಸಭೆ ಸದಸ್ಯ ಎನ್ .ಕುಮಾರ್‌, ರಾಜಗೋಪಾಲ್‌, ಕಸಾಪ ತಾಲೂಕು ಮಾಜಿ ಅಧ್ಯಕ್ಷ ಚಿದಾನಂದ, ದಲಿತ ಮುಖಂಡ ಕಾಳಸ್ವಾಮಿ, ಪುತ್ತನಪುರ ಸಾಹುಕಾರ್‌ ಚಿಕ್ಕಮಲ್ಲಪ್ಪ ದಾನ ನೀಡಿದ್ದ ಹಳೇಯ ಬಿಇಒ ಕಚೇರಿಯಲ್ಲಿ ಕೊಠಡಿಯ ಮೇಲೆ ಕಣ್ಣು ಹಾಕಿದರು.

ನಂತರ ದಾನಿಗಳ ಕುಟುಂಬ ಒಪ್ಪಿಸಿದ ಬಳಿಕ ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ರ ಗಮನಕ್ಕೆ ತಂದು, ಬಿಇಒ ರಾಜಶೇಖರ್‌ ಮೇಲೆ ಒತ್ತಡ ತಂದ ಬಳಿಕ ಹಳೆಯ ಬಿಇಒ ಕಚೇರಿಯಲ್ಲಿ ಒಂದು ಕೊಠಡಿ ಸಿಕ್ಕಿತು.

ಬಳಿಕ ಗ್ರಂಥಾಲಯ ಇಲಾಖೆಯ ಸಹಾಯಕ ನಿರ್ದೇಶಕ ಶಿವಸ್ವಾಮಿ ಆಸಕ್ತಿ ಫಲವಾಗಿ ಹಳೆಯ ಬಿಇಒ ಕಚೇರಿಯ ಒಂದು ಕೊಠಡಿಗೆ ವಿದ್ಯುತ್‌ ಸಂಪರ್ಕ, ದೂರವಾಣಿ ಸಂಪರ್ಕ, ಸಿಸಿ ಕ್ಯಾಮೆರಾ, ಎಲೆಕ್ಟ್ರಿಕಲ್‌ ಕೆಲಸ ಮಾಡಿಸಿದ ಬಳಿಕ ಬಣ್ಣ ತುಂಬಿಸಿದ ನಂತರ ಪುಸ್ತಕವಿಡಲು ರ್‍ಯಾಕ್‌, ಟೇಬಲ್‌, ಕುರ್ಚಿ ಹಾಗೂ ಇನ್ನಿತರ ವಸ್ತುಗಳನ್ನು ಸಾಗಿಸಿ ಗ್ರಂಥಾಲಯ ಆರಂಭಕ್ಕೆ ಮುನ್ನುಡಿ ಬರೆದರು.

ಕನ್ನಡಪ್ರಭಕ್ಕೆ ಅಭಿನಂದನೆ: ಕನ್ನಡಪ್ರಭ ನಿರಂತರ ವರದಿಯೇ ಗ್ರಂಥಾಲಯ ಸ್ಥಳಾಂತರಕ್ಕೆ ಕಾರಣ ಎಂದು ಸಭೆಯಲ್ಲಿದ್ದ ಬಹುತೇಕ ಗಣ್ಯರು ಮಾತನಾಡಿ ಕನ್ನಡಪ್ರಭಕ್ಕೆ ಅಭಿನಂದನೆ ಸಲ್ಲಿಸಿದರು. ಕನ್ನಡಪ್ರಭ ವರದಿ ಬಳಿಕ ಕಿಷ್ಕಿಂಧೆ ಕಟ್ಟಡದಿಂದ ಬೆಳಕಿನ ಕಟ್ಟಡಕ್ಕೆ ಗ್ರಂಥಾಲಯ ಬಂತು ಎಂದು ಕನ್ನಡಪ್ರಭ ವರದಿ ಕೊಂಡಾಡಿದರು.

ಬಿಇಒ ಹಳೇ ಕಚೇರಿಯ ಗ್ರಂಥಾಲಯ ಆರಂಭವಾಯ್ತು:

ಪುಸ್ತಕ ದಿನಾಚರಣೆಯ ದಿನವೇ ಪಟ್ಟಣದ ಹಳೇ ಆಸ್ಪತ್ರೆ ರಸ್ತೆ ಬದಿಯಿದ್ದ ಗ್ರಂಥಾಲಯವನ್ನು ಹಳೇ ಬಿಇಒ ಕಚೇರಿಯಲ್ಲಿ ಸದ್ದಿಲ್ಲದೇ ಕಳೆದ ಮಂಗಳವಾರ ಆರಂಭವಾಗಿದೆ.

ಸರಳವಾಗಿ ನಡೆದ ಸಭೆಯಲ್ಲಿ ಪುಸ್ತಕ ದಿನಾಚರಣೆಯ ದಿನ ಚುನಾವಣೆ ನೀತಿ ಸಂಹಿತೆ ಇದ್ದ ಜಿಲ್ಲಾ ಮುಖ್ಯ ಗ್ರಂಥಾಲಯ ಅಧಿಕಾರಿ ಶಿವಸ್ವಾಮಿ ಅವರು ಹಳೇ ಬಿಇಒ ಕಚೇರಿ ಸ್ಥಳ ದಾನಿ ಪುತ್ತನಪುರ ಸಾಹುಕಾರ್‌ ಚಿಕ್ಕಮಲ್ಲಪ್ಪ ಕುಟುಂಬಸ್ಥರಾದ ದೊಡ್ಡಮಲ್ಲಪ್ಪ, ಶಂಭಪ್ಪ, ಚಂದ್ರಶೇಖರ್‌ ಜೊತೆಗೂಡಿ ಕಸಾಪ ಜಿಲ್ಲಾಧ್ಯಕ್ಷ ಎಂ.ಶೈಲಕುಮಾರ್‌,ಪ್ರಗತಿಪರ ಚಿಂತಕ ಸುಭಾಷ್‌ ಮಾಡ್ರಹಳ್ಳಿ,ಪುರಸಭೆ ಸದಸ್ಯ ಎನ್.ಕುಮಾರ್‌,ಕಸಾಪ ಮಾಜಿ ಅಧ್ಯಕ್ಷ ಚಿದಾನಂದ ಸಮ್ಮುಖದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಸ್ಥಳಾಂತರಗೊಂಡ ಗ್ರಂಥಾಲಯಕ್ಕೆ ಚಾಲನೆ ಗೊಂಡಿತು. ಈ ವೇಳೆ ದಲಿತ ಮುಖಂಡರಾದ ಆರ್.‌ಸೋಮಣ್ಣ,ಕಾಳಿಂಗಸ್ವಾಮಿ,ಕಾಳಸ್ವಾಮಿ,ಡಿ.ಉಲ್ಲಾಸ್‌,ಗ್ರಂಥ ಪಾಲಕ ಜಯಸ್ವಾಮಿ ಸೇರಿದಂತೆ ಹಲವರಿದ್ದರು.ಡಿಜಿಟಲ್‌ ಗ್ರಂಥಾಲಯ ನಿರ್ಮಿಸುವಾಸೆ: ಪಟ್ಟಣದಲ್ಲಿ ಡಿಜಿಟಲ್‌ ಗ್ರಂಥಾಲಯದ ನಿರ್ಮಾಣದ ಆಸೆ ಇದೆ ಎಂದು ಜಿಲ್ಲಾ ಮುಖ್ಯ ಗ್ರಂಥಾಲಯ ಅಧಿಕಾರಿ ಶಿವಸ್ವಾಮಿ ಹೇಳಿದರು. ಪಟ್ಟಣದಲ್ಲಿ ಗ್ರಂಥಾಲಯ ಸ್ಥಳಾಂತರಕ್ಕೆ ಇಲಾಖೆ ಎಲ್ಲಾ ಕ್ರಮ ತೆಗೆದುಕೊಂಡಿದ್ದು,ಗುಂಡ್ಲುಪೇಟೆಯಲ್ಲಿ ಡಿಜಿಟಲ್‌ ಗ್ರಂಥಾಲಯ ಆಗಬೇಕಿದ್ದು ಶಾಸಕರ ಗಮನಕ್ಕೆ ತಂದು ಮುಂದೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಸ್ಥಳಾಂತರ ಗೊಂಡ ಗ್ರಂಥಾಲಯ ಆವರಣ ಕ್ಲೀನ್‌ ಆಗಬೇಕು ಜೊತೆಗೆ ಸುತ್ತು ಗೋಡೆ ಆಗಬೇಕು.ಚುನಾವಣೆಯ ನೀತಿ ಸಂಹಿತೆ ಮುಗಿದ ಬಳಿಕ ಶಾಸಕರಿಗೆ ಬೇಡಿಕೆ ಇಡಲಾಗುವುದ ಜೊತೆಗೆ ಗ್ರಂಥಾಲಯ ಇಲಾಖೆಯಿಂದಲೂ ಉಳಿದ ಕೆಲಸ ಮಾಡುವುದಾಗಿ ಹೇಳಿದರು.