ಬ್ಯಾಡಗಿ:ವ್ಯಕ್ತಿಯ ಸಾಮಾಜಿಕ, ಆರ್ಥಿಕ ಹಿನ್ನೆಲೆಯನ್ನು ಲೆಕ್ಕಿಸದೆ ಗ್ರಂಥಾಲಯಗಳು ಉಚಿತ ಸಂಪನ್ಮೂಲಗಳನ್ನು ಒದಗಿಸುತ್ತವೆ. ಶಿಕ್ಷಣದಲ್ಲಿ ಸಮಾನತೆ ಉತ್ತೇಜಿಸುವ ಜನಸಾಮಾನ್ಯರ ವಿಶ್ವವಿದ್ಯಾಲಯವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಸಾಹಿತಿ ಜೀವರಾಜ ಛತ್ರದ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಜಾಗೃತಿ ಸಮಿತಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಗ್ರಂಥಾಲಯಗಳು ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ವ್ಯಾಪಕ ಶ್ರೇಣಿಯ ಪಠ್ಯಪುಸ್ತಕಗಳು, ಪಾಂಡಿತ್ಯಪೂರ್ಣ ನಿಯತಕಾಲಿಕೆಗಳನ್ನು ನೀಡಲಿದ್ದು, ಸ್ವಯಂಪ್ರೇರಿತ ಆವಿಷ್ಕಾರಕ್ಕೆ ಪ್ರೋತ್ಸಾಹ ಸೇರಿದಂತೆ ಕಲಿಯುವವರಿಗೆ ಪಠ್ಯಕ್ರಮ ಮೀರಿದ ವಿಷಯ ಅನ್ವೇಷಿಸಲು ಅನುವು ಮಾಡಿಕೊಡಲಿವೆ ಎಂದರು.

ಸಮುದಾಯ ಸಂಪರ್ಕ: ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ವಿದ್ಯಾವಂತ ಜನರಿಗೆ ಅರಮನೆಗಳಾಗಿ ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತವೆ. ಪುಸ್ತಕ ಭಂಢಾರಗಳು ಸಾಮಾಜಿಕ ಸಂಬಂಧ ಮತ್ತು ಭಾವನೆ ಬೆಳೆಸುವ ಸಾಂಸ್ಕೃತಿಕ ರಾಯಭಾರಿಗಳಾಗಿವೆ. ರಚನಾತ್ಮಕ ವಾತಾವರಣ, ಆಳವಾದ ಏಕಾಗ್ರತೆಯನ್ನು ಗ್ರಂಥಾಲಯಗಳು ಉತ್ತೇಜಿಸಲಿದ್ದು, ಪರಿಣಾಮಕಾರಿ ಅಧ್ಯಯನ ಮತ್ತು ಪರೀಕ್ಷೆಯ ತಯಾರಿಕೆಗೂ ಅತ್ಯವಶ್ಯಕವಾಗಿದೆ ಎಂದರು.

ಕ್ರಿಯಾತ್ಮಕ ಕೇಂದ್ರಗಳು: ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ಗ್ರಂಥಾಲಯಗಳು ಶೈಕ್ಷಣಿಕ ಮತ್ತು ವೈಯಕ್ತಿಕ ಅಭಿವೃದ್ಧಿ ಬೆಂಬಲಿಸುವ ಕ್ರಿಯಾತ್ಮಕ ಸಮುದಾಯ ಕೇಂದ್ರಗಳಾಗಿದ್ದು, ಎಲ್ಲ ವ್ಯಕ್ತಿಗಳಿಗೆ ಜೀವಮಾನದ ಕಲಿಕೆಯ ಸಂಸ್ಕೃತಿ ಬೆಳೆಸಲಿವೆ ಎಂದರು.

ಯೋಗಕ್ಷೇಮ ನೋಡಿಕೊಳ್ಳಲಿವೆ:


ತಾಲೂಕಾಧ್ಯಕ್ಷ ಬಿ.ಎಂ. ಜಗಾಪುರ ಮಾತನಾಡಿ, ವೈವಿಧ್ಯಮಯ ಸಾಹಿತ್ಯದೊಂದಿಗೆ ನಮ್ಮ ಬದುಕನ್ನು ತೊಡಗಿಸಿಕೊಳ್ಳುವುದರಿಂದ ಓದುಗರಿಗೆ ವಿಭಿನ್ನ ದೃಷ್ಟಿಕೋನಗಳು ಮತ್ತು ಜೀವನಾನುಭವ ದೊರೆಯಲಿದ್ದು, ವಿಮರ್ಶಾತ್ಮಕ ಚಿಂತನೆ ಹೆಚ್ಚಿಸಲಿವೆ. ಗ್ರಂಥಾಲಯಗಳು ಸುರಕ್ಷಿತ, ಶಾಂತಿಯುತ ಸ್ಥಳವಾಗಿದ್ದು, ಜನರು ವಿಶ್ರಾಂತಿ ಪಡೆದು, ಓದುವಿಕೆ ಅಥವಾ ಸೃಜನಶೀಲ ಚಟುವಟಿಕೆ ಮೂಲಕ ಮಾನಸಿಕ ಯೋಗಕ್ಷೇಮ ಸಹ ವಿಚಾರಿಸಿಕೊಳ್ಳಲಿವೆ ಎಂದರು.

ಇದೇ ಸಂದರ್ಭದಲ್ಲಿ ಮನೆಗೊಂದು ಗ್ರಂಥಾಲಯ ಯೋಜನೆಯಡಿ ನಿಸರ್ಗ ನಗರದ 3 ಕಡೆಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಲಾಯಿತು. ಚಂದ್ರು ಛತ್ರದ, ವೈ.ಟಿ. ಹೆಬ್ಬಳ್ಳಿ, ರೇಣುಕಾ ಗುಡಿಮನಿ, ಬಿ.ಸಿ. ಮಾಕಳ್ಳಿ, ಆರ್.ಡಿ. ವಾಲ್ಮೀಕಿ, ವಿ.ಎನ್. ಮಾಳಪ್ಪನವರ, ಮಾಲತೇಶ ಚಳಗೇರಿ, ಪ್ರಭುಗೌಡ ಪಾಟೀಲ, ಎಸ್.ಆರ್. ಹಿರೇಮಠ, ಸೋಮಣ್ಣ ಡಂಬರಮತ್ತೂರ, ಡಾ. ಲಕ್ಷ್ಮೀಕಾಂತ ಮಿರಜಕರ, ಸಿದ್ದೇಶ್ವರ ಹುಣಶೀಕಟ್ಟಿಮಠ ಹಾಗೂ ಇನ್ನಿತರರಿದ್ದರು.