ಹಾವೇರಿ ನಗರದ ಎಲ್‌ಐಸಿ ಕಾಲನಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೆ.ಎಫ್. ಪಾಟೀಲ ಅವರ 30ನೇ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಚಾಲನೆ ನೀಡಿದರು.

ಹಾವೇರಿ: ಸ್ವಾತಂತ್ರ್ಯ ಹೋರಾಟಗಾರ ಕೆ.ಎಫ್‌. ಪಾಟೀಲ್ ಅವರನ್ನು ಮುಂದಿನ ಪೀಳಿಗೆ ಅಭಿಮಾನದಿಂದ ಕಾಣುವ ಉದ್ದೇಶದಿಂದ ಎಲ್‌ಐಸಿ ಕಾಲನಿಗೆ ಕೆ.ಎಫ್. ಪಾಟೀಲ ಕಾಲನಿ ಎಂದು ನಾಮಕರಣ ಮಾಡಲು ಸ್ಥಳೀಯ ನಿವಾಸಿಗಳು ಸಹಕಾರ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.

ನಗರದ ಎಲ್‌ಐಸಿ ಕಾಲನಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೆ.ಎಫ್. ಪಾಟೀಲ ಅವರ 30ನೇ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಾಕೋಳದ ಕೆ.ಎಫ್. ಪಾಟೀಲ ಅವರು ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಶ್ರಮಿಸಿದವರು. ಬಳಿಕ ಕನ್ನಡ ನಾಡಿನ ಶ್ರೇಯಸ್ಸಿಗೆ ತಮ್ಮನ್ನು ಅರ್ಪಿಸಿಕೊಂಡಿದ್ದರು. ಅವರ ದೂರದೃಷ್ಟಿಯ ಚಿಂತನೆ ನಮ್ಮ ಮೇಲೆ ಪ್ರಭಾವ ಬೀರಿದೆ ಎಂದು ಹೇಳಿದರು.

ನಾನು ಬ್ಯಾಡಗಿ ಶಾಸಕನಾಗಿದ್ದ ಸಂದರ್ಭದಲ್ಲಿ ತುಂಗಾ ಮೇಲ್ದಂಡೆ ಯೋಜನೆ ಬಗ್ಗೆ ತಮ್ಮ ಕನಸನ್ನು ಕೆ.ಎಫ್‌. ಪಾಟೀಲ್ ಅವರು ವಿವರಿಸಿದ್ದರು. ಭವಿಷ್ಯದಲ್ಲಿ ನಮ್ಮ ಭಾಗ ಹೇಗಿರಬೇಕೆಂದು ತಿಳಿಸುತ್ತಿದ್ದರು. ಮೊದಮೊದಲು ಅವರ ಕನಸುಗಳನ್ನು ಕಂಡು ಬೆರಗಾಗಿದ್ದೆ. ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಎಚ್.ಕೆ. ಪಾಟೀಲ ಅವರು ಜಲಸಂಪನ್ಮೂಲ ಸಚಿವರಾಗಿದ್ದರು. ಆಗ ನಾನು ತುಂಗಾ ಮೇಲ್ದಂಡೆ ಯೋಜನೆ ಬಗ್ಗೆ ಇದ್ದ ಪಾಟೀಲರ ಕನಸನ್ನು ಪೂರ್ಣಗೊಳಿಸಿದ ತೃಪ್ತಿ ಇದೆ. ಅಂಥ ಮಹನೀಯರನ್ನು ಸದಾ ಸ್ಮರಿಸಲು ಸ್ಥಳೀಯ ಕಾಲನಿಗಳಿಗೆ ಹಾಗೂ ಉದ್ಯಾನಗಳಿಗೆ ಅವರ ನಾಮಕರಣ ಮಾಡುವುದು ಅತ್ಯವಶ್ಯ ಎಂದರು.

ಸಾನ್ನಿಧ್ಯ ವಹಿಸಿದ್ದ ಹೊಸಮಠದ ಶ್ರೀ ಬಸವ ಶಾಂತಲಿಂಗ ಮಹಾಸ್ವಾಮೀಜಿ ಮಾತನಾಡಿ, ಜನ ಮತ್ತು ಜನಪ್ರತಿನಿಧಿಗಳು ಸಮಕ್ಷಮ ಸೇರಿದಾಗ ಸಮಾಜಮುಖಿ ಕಾರ್ಯಗಳು ನೆರವೇರುತ್ತವೆ. ಅದಕ್ಕೆ ಪೂರಕ ಎಂಬಂತೆ ಸ್ವಾತಂತ್ರ್ಯ ಹೋರಾಟಗಾರ ಕೆ.ಎಫ್. ಪಾಟೀಲ ಅವರನ್ನು ಮತ್ತೆ ನೆನಪಿಸುವ ಕಾರ್ಯ ನಡೆದಿರುವುದು ಪ್ರಶಂಸನೀಯ ಎಂದರು.

ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್ ಗಾಜಿಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಉದ್ಯಾನದಲ್ಲಿ ಅಳವಡಿಸಲು ಪರಮೇಶಪ್ಪ ಶಿವಣ್ಣನವರ 5, ಮಂಜುನಾಥ ಸಣ್ಣಿಂಗಣ್ಣನವರ ಮತ್ತು ನಿಂಗಪ್ಪ ಆರೇರ ತಲಾ ಒಂದು ಬೆಂಚು ಕೊಡಿಸುವುದಾಗಿ ಹೇಳಿದರು.

ಜಗದೀಶ ಬೆಟಗೇರಿ, ಹನುಮಂತಗೌಡ ಗೊಲ್ಲರ, ಜಗದೀಶ ಮಹಾರಾಜಪೇಟ, ಹರೀಶ ಇಂಗಳಗೊಂದಿ, ಸಿದ್ದಣ್ಣ ಬಾರ್ಕಿ, ಪವನ್ ಚಲ್ಲಾಳ, ಶಿವಣ್ಣ ಮಾಳಶೆಟ್ಟಿ, ರಾಜು ಗುರ್ಜರ, ಸುಲೋಚನಾ ಮಸಾಲಜಿ, ಸವಿತಾ ಅಗಸಿಬಾಗಿಲ, ವಿದ್ಯಾ ಮಡಿವಾಳರ ಉಪಸ್ಥಿತರಿದ್ದರು.

ಕೆ.ಎಫ್. ಪಾಟೀಲ ಉದ್ಯಾನ ಸಮಿತಿ, ದಿಶಾ ಫೌಂಡೇಶನ್ ಹಾವೇರಿ, ಅಮ್ಮಾ ಸಂಸ್ಥೆ ಹಿರೇಮುಗದೂರ ಹಾಗೂ ಅರಳಿಕಟ್ಟಿ ಪ್ರಕಾಶನ ಹಾವೇರಿ ಸಹಯೋಗದಲ್ಲಿ ನಡೆದ ಕಾರ್ಯಕ್ರಮವನ್ನು ಗೂಳಪ್ಪ ಅರಳಿಕಟ್ಟಿ ನಿರ್ವಹಿಸಿದರು.