ಕೃಷಿ ಪರಿಕರ ಮಾರಾಟಗಾರರು ಕಡ್ಡಾಯವಾಗಿ ತಮ್ಮ ಮಳಿಗೆಯ ಸೂಚನಾ ಫಲಕದಲ್ಲಿ ರಸಗೊಬ್ಬರಗಳ ಮಾಹಿತಿ ಮತ್ತು ಅವುಗಳ ದರಪಟ್ಟಿಯನ್ನು ಪ್ರದರ್ಶಿಸಬೇಕು.

ನರಗುಂದ: ಕೃಷಿ ಪರಿಕರ ಮಾರಾಟಗಾರರು ಕಡ್ಡಾಯವಾಗಿ ರೈತರ ಎಫ್ಐಡಿಯನ್ನು ಪರಿಶೀಲಿಸಿ, ನಿಗದಿತ ಪ್ರಮಾಣದಲ್ಲಿ ರಸಗೊಬ್ಬರವನ್ನು ಕೆ-ಕಿಸಾನ್ ತಂತ್ರಾಂಶ ಬಳಸಿಕೊಂಡು ಪಿಒಎಸ್ ಮಷಿನ್ ಮೂಲಕ ರಸಗೊಬ್ಬರ ವಿತರಿಸಬೇಕು. ಇದರಿಂದ ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ಸಾಧ್ಯವಾಗುವುದಿಲ್ಲ. ರೈತರು ಅನವಶ್ಯಕವಾಗಿ ಹೆಚ್ಚುವರಿ ರಸಗೊಬ್ಬರ ಬಳಸದಂತೆ ನಿಯಂತ್ರಿಸಿ ಮಣ್ಣಿನ ಫಲವತ್ತತೆಯನ್ನು ಕಾಯ್ದುಕೊಳ್ಳಲು ಸಹಾಯವಾಗುವುದು ಎಂದು ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ತಿಳಿಸಿದರು.

ತಾಪಂ ಸಭಾಭವನದಲ್ಲಿ ಏರ್ಪಡಿಸಿದ್ದ ತಾಲೂಕಿನ ಖಾಸಗಿ ಹಾಗೂ ಸಹಕಾರಿ ಸಂಘಗಳ ರಸಗೊಬ್ಬರ ಮಾರಾಟಗಾರರ ಸಭೆಯಲ್ಲಿ ಮಾತನಾಡಿ, ಯೂರಿಯಾ ಹಾಗೂ ಡಿಎಪಿಗಳ ಬದಲಾಗಿ ನ್ಯಾನೋ ಯೂರಿಯಾ, ನ್ಯಾನೋ ಡಿಎಪಿಯಂತಹ ದ್ರವರೂಪದ ರಸಗೊಬ್ಬರಗಳನ್ನು ಬಳಸುವ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಬೇಕು ಎಂದರು.

ಕೃಷಿ ಪರಿಕರ ಮಾರಾಟಗಾರರು ಕಡ್ಡಾಯವಾಗಿ ತಮ್ಮ ಮಳಿಗೆಯ ಸೂಚನಾ ಫಲಕದಲ್ಲಿ ರಸಗೊಬ್ಬರಗಳ ಮಾಹಿತಿ ಮತ್ತು ಅವುಗಳ ದರಪಟ್ಟಿಯನ್ನು ಪ್ರದರ್ಶಿಸಬೇಕು. ಯಾವುದೇ ಕಾರಣಕ್ಕೂ ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮಾಡಿದಲ್ಲಿ ಅಂಥವರ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

ತಾಲೂಕಿನ ರೈತರಿಗೆ ಮಾತ್ರ ರಸಗೊಬ್ಬರವನ್ನು ವಿತರಿಸಬೇಕು. ಕಾಳಸಂತೆಯಲ್ಲಿ ರಸಗೊಬ್ಬರ ಮಾರಿದರೆ ಅಂಥ ಗೊಬ್ಬರ ಮಾರಾಟಗಾರರ ಪರವಾನಗಿ ರದ್ದು ಮಾಡಬೇಕು. ಕೃತಕ ಅಭಾವ ಸೃಷ್ಟಿಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.ತಹಸೀಲ್ದಾರ್ ಶ್ರೀಶೈಲ ತಳವಾರ ಮಾತನಾಡಿ, ಯಾವುದೇ ಕಾರಣಕ್ಕೂ ರೈತರಿಗೆ ರಸಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಸೂಕ್ತ ಪ್ರಮಾಣದಲ್ಲಿ ರಸಗೊಬ್ಬರವನ್ನು ದಾಸ್ತಾನು ಮಾಡಿಕೊಳ್ಳಲು ಮತ್ತು ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ರಸಗೊಬ್ಬರ ಮಾರಾಟ ಮಾಡದಂತೆ ಮಾರಾಟಗಾರರಿಗೆ ಸೂಚಿಸಿದರು.ಜಂಟಿ ಕೃಷಿ ನಿರ್ದೇಶಕಿ ಚೈತ್ರಾ ಅವರು ಕೆ- ಕಿಸಾನ್ ತಂತ್ರಾಂಶದ ಮೂಲಕ ರಸಗೊಬ್ಬರ ವಿತರಣೆ ಮಾಡಬೇಕೆಂದರು.ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ವೆಂಕಟೇಶ ಗುಡಿಸಾಗರ ಮಾತನಾಡಿ, ನಾವು ಇಲಾಖೆ ಮಾರ್ಗದರ್ಶನ ಮತ್ತು ಮಾರ್ಗಸೂಚಿಯಂತೆ ಕ್ರಮ ಕೈಗೊಳ್ಳುತ್ತೇವೆ ಎಂದರು.ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಉಪ ಕೃಷಿ ನಿರ್ದೇಶಕರಾದ ಪಾಲಾಕ್ಷಗೌಡ, ಆತ್ಮ ಯೋಜನೆಯ ಉಪಯೋಜನಾ ನಿರ್ದೇಶಕ ಮಂಜುನಾಥ ಭರಮಗೌಡ್ರ, ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್. ಕುಲಕರ್ಣಿ, ಪ್ರವೀಣ ಪಾಟೀಲ, ಶಿವಾಜಿ ಸಾಠೆ, ಶರತ ಪಾಟೀಲ, ಶ್ರೀರಾಮ ಟ್ರೇಡಿಂಗ್ ಕಂ, ಉಮೇಶ್ವರ ಅಗ್ರೋ ಸೆಂಟರ್, ಕೊಣ್ಣೂರಿನ ಶ್ರೀನಿವಾಸ ಅಗ್ರೋ ಸೆಂಟರ್ ಹಾಗೂ ಕರ್ನಾಟಕ ಅಗ್ರೋ ಸೆಂಟರ, ಟಿ.ವಿ. ಗುಡಿಸಾಗರ, ಶ್ರೀರಾಮ್ ಟ್ರೇಡಿಂಗ್ ಕಂ., ಉಮೇಶ್ವರ ಆಗ್ರೋ ಸೆಂಟರ್, ಮಹೇಶ ಟ್ರೇಡರ್ಸ್, ಗಿರೀಶ ಅಗ್ರೋ ಸೆಂಟರ್‌ನ ಮಾಲೀಕರು, ತಾಲೂಕಿನ ಕೃಷಿ ಪರಿಕರ ಮಾರಾಟಗಾರರು ಇದ್ದರು.