ಹೆಚ್ಚುವರಿ ದಾಸ್ತಾನು ಕಂಡ ಬಂದ 10 ನ್ಯಾಯಬೆಲೆ ಅಂಗಡಿಗಳ ಪರವಾನಗಿ ರದ್ದು

| Published : Feb 21 2025, 11:47 PM IST

ಹೆಚ್ಚುವರಿ ದಾಸ್ತಾನು ಕಂಡ ಬಂದ 10 ನ್ಯಾಯಬೆಲೆ ಅಂಗಡಿಗಳ ಪರವಾನಗಿ ರದ್ದು
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಐದು ದಿನಗಳಿಂದ ಜಿಲ್ಲಾದ್ಯಂತ ಸಂಚರಿಸಿ ನ್ಯಾಯಬೆಲೆ ಅಂಗಡಿ, ಹಾಸ್ಟೆಲ್‌, ಹೋಟೆಲ್‌ ಸೇರಿದಂತೆ ನಾನಾ ಕಡೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ.

ಬಳ್ಳಾರಿ: ಜಿಲ್ಲೆಯ ವಿವಿಧ ತಾಲೂಕುಗಳ ನ್ಯಾಯಬೆಲೆ ಅಂಗಡಿಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿದಾಗ ಹೆಚ್ಚುವರಿಯಾಗಿ ಪಡಿತರ ದಾಸ್ತಾನು ಕಂಡು ಬಂದ ಒಟ್ಟು 10 ನ್ಯಾಯಬೆಲೆ ಅಂಗಡಿಗಳ ಪರವಾನಗಿ ರದ್ದು ಮಾಡಲಾಗಿದ್ದು, ಓರ್ವ ಗೋದಾಮಿನ ವ್ಯವಸ್ಥಾಪಕನ ಅಮಾನತಿಗೆ ಶಿಫಾರಸ್ಸು ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ. ಎಚ್. ಕೃಷ್ಣ ತಿಳಿಸಿದರು. ನಗರದ ಸರ್ಕಾರಿ ಅತಿಥಿ ಗೃಹದ ಸಭಾಂಗಣದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕಳೆದ ಐದು ದಿನಗಳಿಂದ ಜಿಲ್ಲಾದ್ಯಂತ ಸಂಚರಿಸಿ ನ್ಯಾಯಬೆಲೆ ಅಂಗಡಿ, ಹಾಸ್ಟೆಲ್‌, ಹೋಟೆಲ್‌ ಸೇರಿದಂತೆ ನಾನಾ ಕಡೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ. ಮಾಹಿತಿ ನೀಡಿ ಬಂದರೆ ಎಚ್ಚೆತ್ತುಕೊಳ್ಳುತ್ತಾರೆ ಎಂಬ ಕಾರಣಕ್ಕಾಗಿ ಮಾಧ್ಯಮಗಳು ಹಾಗೂ ಅಧಿಕಾರಿಗಳಿಗೂ ಮಾಹಿತಿ ನೀಡದೆ ದಿಢೀರನೇ ಭೇಟಿ ಮಾಡಲಾಯಿತು. ಭೇಟಿ ವೇಳೆ ಅನೇಕ ಕಡೆ ಅವ್ಯವಸ್ಥೆ ಕಂಡು ಬಂತು. ನ್ಯಾಯ ಬೆಲೆ ಅಂಗಡಿಗಳಲ್ಲಿ ಹೆಚ್ಚಿನ ಪ್ರಮಾಣದ ಪಡಿತರ ಕಂಡು ಬಂತು. ಆಹಾರ ನಿಗಮದ ಸಗಟು ಗೋದಾಮಿನಲ್ಲೂ ಸರಿಯಾದ ವ್ಯವಸ್ಥೆಯಿಲ್ಲ. ಸ್ವಚ್ಛತೆಯೇ ಇಲ್ಲದಿರುವುದು ಕಣ್ಣಿಗೆ ರಾಚಿತು ಎಂದು ತಿಳಿಸಿದರು.

ಜಿಲ್ಲೆಯ ವಿವಿಧ ತಾಲೂಕುಗಳ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿದಾಗ ಅಲ್ಲಿ ಯಾವುದೇ ರೀತಿಯ ಆಹಾರ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ಮಾಹಿತಿ ವಿವರ ಫಲಕ ಪ್ರದರ್ಶಿಸುವುದು ಕಂಡುಬಂದಿಲ್ಲ. ಗ್ರಾಹಕರಿಗೆ ನ್ಯೂನತೆ ಕಂಡುಬಂದಲ್ಲಿ ಅವರು ಯಾರನ್ನು ವಿಚಾರಿಸಬೇಕು ಎಂಬುದರ ಕುರಿತ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ಹೆಸರು ಮತ್ತು ಸಂಪರ್ಕ ವಿವರ ಸಹಿತ ಮಾಹಿತಿ ಪ್ರದರ್ಶಿಸಬೇಕು ಎಂದು ಸೂಚಿಸಲಾಗಿದೆ ಎಂದರು.

ನ್ಯಾಯ ಬೆಲೆ ಅಂಗಡಿಗಳಲ್ಲಿಯೂ ಸಹ ಸ್ವಚ್ಛತಾ ಮರೀಚಿಕೆ ಆಗಿದೆ. ಜಾಗೃತಿ ಸಮಿತಿ ಸದಸ್ಯರ ಪಟ್ಟಿ ಹಾಗೂ ಆಹಾರ ಆಯೋಗದ ಸದಸ್ಯರ ನಾಮಫಲಕ ಅಳವಡಿಸಿಲ್ಲ. ಜಾಗೃತಿ ಸಮಿತಿ ಕೊರತೆ, ಭೌತಿಕ ಹಾಗೂ ತಾಂತ್ರಿಕ ದಾಸ್ತಾನು ವ್ಯತ್ಯಾಸ ಕಂಡುಬಂದಿದೆ. ಅದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.

ಮಂಗಳವಾರ ಹಾಗೂ ಸರ್ಕಾರಿ ರಜೆ ಹೊರತು ಪಡಿಸಿ,ನ್ಯಾಯ ಬೆಲೆ ಅಂಗಡಿ ತೆರೆದಿರಬೇಕು. ಪಡಿತರ ವಿತರಣೆ ಕಾರ್ಯ, ಪಡಿತರ ವಿತರಣೆ ಸಮರ್ಪಕವಾಗಿ ವಿತರಿಸಿರುವ ಬಗ್ಗೆ ಫಲಾನುಭವಿಗಳ ಮನೆ-ಮನೆ ಭೇಟಿ ನೀಡಿ ಖುದ್ದು ಪರಿಶೀಲನೆ ಮಾಡಲಾಗಿದೆ ಎಂದರು.

ಪಡಿತರ ಅಕ್ಕಿ ಸಂಗ್ರಹಿಸುವ ಉಗ್ರಾಣಗಳಲ್ಲಿಯೂ ಸಹ ಸರಿಯಾದ ವ್ಯವಸ್ಥೆಯಿಲ್ಲ. ಮಾನದಂಡ ಇಲ್ಲದೆ ಪರವಾನಗಿ ನೀಡಲಾಗಿದೆ. ತಿಂಗಳಲ್ಲೇ ನಾಲ್ಕು ದಿನ ಮಾತ್ರ ಪಡಿತರ ವಿತರಿಸುವುದು. ಮುಂಚಿತವಾಗಿ ಬೆರಳು ಗುರುತು ಹಾಕಿಸಿಕೊಳ್ಳುವುದು ಗಮನಕ್ಕೆ ಬಂದಿದೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ವಿವಿಧ ವಸತಿ ಶಾಲೆಯಲ್ಲಿ ಮೂಲಭೂತ ಸೌಕರ್ಯ ಇಲ್ಲ. ಗುಣಮಟ್ಟದ ಆಹಾರ ನೀಡುತ್ತಿಲ್ಲ. ಈ ಕುರಿತು ನಿಲಯ ಪಾಲಕರ ಅಮಾನತಿಗೆ ಶಿಫಾರಸ್ಸು ಮಾಡಲಾಗಿದೆ ಎಂದರು. ಪೆಟ್ರೋಲ್ ಬಂಕ್‌ಗಳಿಗೆ ಭೇಟಿ ನೀಡಿದಾಗ ಶೌಚಾಲಯ ಹಾಗೂ ಕುಡಿವ ನೀರಿನ ವ್ಯವಸ್ಥೆ ಸಮರ್ಪಕವಾಗಿ ಮಾಡದಿರುವುದು ಕಂಡು ಬಂತು. ಕೆಲವು ಹೋಟೆಲ್‌ಗಳಿಗೆ ತೆರಳಿ ಅಲ್ಲಿನ ಸ್ವಚ್ಛತೆ ಹಾಗೂ ಆಹಾರ ಗುಣಮಟ್ಟ ಕುರಿತು ಪರಿಶೀಲನೆ ಮಾಡಲಾಯಿತು. ಸಾರ್ವಜನಿಕರು ಜಾಗೃತಗೊಳ್ಳಬೇಕು. ಸರ್ಕಾರದಿಂದ ಸಲ್ಲಬೇಕಾದ ಸೌಲಭ್ಯಗಳ ಕುರಿತು ಕೇಳಬೇಕು. ಸರಿಯಾಗಿ ಸ್ಪಂದಿಸದೇ ಇದ್ದರೆ ದೂರು ನೀಡಬೇಕು ಎಂದರು.

ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯ ಲಿಂಗರಾಜ್ ಕೋಟೆ, ರೋಹಿಣಿ ಪ್ರಿಯ, ಮಾರುತಿ ಎಂ. ದೊಡ್ಡಲಿಂಗಣ್ಣನವರ್, ಸುಮಂತ್ ರಾವ್ ಸುದ್ದಿಗೋಷ್ಠಿಯಲ್ಲಿದ್ದರು.