ಸಾರಾಂಶ
ಬಿನ್ನಮತ, ಜಗಳ ಕಿತ್ತಾಟ ಇರೋದು ಬಿಜೆಪಿಯಲ್ಲಿ । ಶೃಂಗೇರಿಯಲ್ಲಿ ಸರ್ಕಾರದ ನಡೆ ಕಾರ್ಯಕರ್ತರ ಕಡೆಗೆ ಸಮಾವೇಶ
ಕನ್ನಡಪ್ರಭ ವಾರ್ತೆ, ಶೃಂಗೇರಿಬಿಜೆಪಿಯವರಿಗೆ ನಮ್ಮ ಸರ್ಕಾರದ ಸಾಧನೆಗಳು ಮತ್ತು ರಾಜ್ಯದ ಅಭಿವೃದ್ಧಿ ಕಂಡು ಸಹಿಸಲಾಗದೆ ಇಲ್ಲಸಲ್ಲದ ಆರೋಪ ಗಳನ್ನು ಮಾಡುತ್ತಿದ್ದಾರೆ. ಸುಳ್ಳುಗಳ ಸರಮಾಲೆ, ಆರೋಪಗಳೇ ಬಿಜೆಪಿಯವರ ಜಾಯಮಾನವಾಗಿದೆ ಎಂದು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಗುಡುಗಿದರು.
ಪಟ್ಟಣದ ಆದಿಚುಂಚನಗಿರಿ ಸಭಾಭವನದಲ್ಲಿ ನಡೆದ ಶೃಂಗೇರಿ ಕ್ಷೇತ್ರ ಮಟ್ಟದ ಸರ್ಕಾರದ ನಡೆ ಕಾರ್ಯಕರ್ತರ ಕಡೆಗೆ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಅವರದ್ದು ಫ್ಯಾಸಿಸ್ಟ್ ಮನೋಭಾವನೆ ಸುಳ್ಳು ಹೇಳುವುದೇ ಅವರ ಉದ್ಯೋಗ ವಾಗಿದೆ. ಕಳೆದ 5 ವರ್ಷ ಅವರು ಆಡಳಿತ ಮಾಡಿದರು. ಕೇವಲ ಭ್ರಷ್ಟಾಚಾರ, ದುರಾಡಳಿತ, ಜಗಳಗಳಲ್ಲಿಯೇ ಕಳೆದರು. ಕಾಂಗ್ರೆಸ್ ನಲ್ಲಿ ಬಿನ್ನಮತ ಇಲ್ಲ. ಬಿನ್ನಮತ, ಜಗಳ ಕಿತ್ತಾಟ ಇರೋದು ಬಿಜೆಪಿಯಲ್ಲಿ. ನಮ್ಮ ಬಗ್ಗೆ ಹೇಳುವುದು ಬೇಡ ಎಂದರು.ರಾಜ್ಯದಲ್ಲಿ ಉತ್ತಮ ಆಡಳಿತ ನಡೆಯುತ್ತಿದೆ. 5 ಗ್ಯಾರಂಟಿ ಯೋಜನೆಗಳು ಜನರ ಮನೆ ಬಾಗಿಲಿಗೆ ತಲುಪುತ್ತಿವೆ. ಶಕ್ತಿ ಯೋಜನೆ, ಗೃಹಲಕ್ಷ್ಮಿ, ಗೃಹಜ್ಯೋತಿ ಎಲ್ಲವೂ ಜನರಿಗೆ ತಲುಪುತ್ತಿದೆ. ವಿದ್ಯುತ್ ಕೊರತೆಯಿದ್ದರೂ ಬೇರೆ ರಾಜ್ಯಗಳಿಂದ ಸರಬರಾಜು ಮಾಡಿಕೊಂಡು ವಿದ್ಯುತ್ ನೀಡಲಾಗುತ್ತಿದೆ. ವಿದ್ಯುತ್ ಕಡಿತ ಮಾಡಲಾಗುತ್ತಿಲ್ಲ. ರೈತರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಮಾಡಲಾಗುತ್ತಿದೆ. ಅಧಿಕಾರಿಗಳು ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆಡಳಿತ ಒಳ್ಳೆಯ ರೀತಿಯಲ್ಲಿ ನಡೆಯಬೇಕಾದರೆ ಅಧಿಕಾರಿಗಳ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.
ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು. ಜನರೇ ಪ್ರಭುಗಳು. ನಾವು ಚುನಾವಣೆಯಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಿದ್ದೇವೆ. ಅಗತ್ಯ ರಸ್ತೆ, ಸೇತುವೆಗಳು ಸೇರಿದಂತೆ ಮೂಲಭೂತ ಸಮಸ್ಯೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಅಗತ್ಯ ಅನುಧಾನ ಬಿಡುಗಡೆ ಮಾಡಲಾಗುವುದು. ಜಿಲ್ಲೆಯಲ್ಲಿ ಅರಣ್ಯ ಸಮಸ್ಯೆ ಇದೆ.ಡೀಮ್ಡ್ ಫಾರೆಸ್ಟ್, 4(1) ಸಮಸ್ಯೆಗಳು ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಪಕ್ಷ ಸಂಘಟಿಸುವಲ್ಲಿ ಕಾರ್ಯಕರ್ತರ ಪಾತ್ರ ಮಹತ್ತರವಾಗಿದೆ. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಕೇವಲ ಚುನಾವಣೆಗಳ ಸಂದರ್ಭದ ಸಭೆ ಸಮಾರಂಭಗಳಲ್ಲಿ ಮಾತ್ರ ಬಳಸಿಕೊಳ್ಳುವುದಲ್ಲ. ಅವರಿಗೆ ಪಕ್ಷದಲ್ಲಿ ಸೂಕ್ತ ಜವಾಬ್ದಾರಿ, ಸ್ಥಾನಮಾನ ನೀಡಬೇಕು. ಪಕ್ಷದ ಗೆಲುವಿಗೆ ಅವರ ಪರಿಶ್ರಮ, ಪ್ರಯತ್ನವೇ ಪ್ರಮುಖ ಆದಾರ. ಬೂತ್ ಮಟ್ಟದಿಂದ ಪಕ್ಷ ಸಂಘಟಿಸಬೇಕು. ಮುಂಬರುವ ತಾಪಂ, ಜಿಪಂ, ಗ್ರಾಪಂ ಎಲ್ಲಾ ಚುನಾವಣೆಗಳನ್ನು ಗೆಲ್ಲಬೇಕು.ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.
ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ ಮೂಲಭೂತ ಸೌಕರ್ಯಗಳಾದ ನೀರು, ರಸ್ತೆ, ಅಭಿವೃದ್ಧಿ ಜೊತೆಗೆ ಮನೆಮನೆಗೆ ಅನುಧಾನ ತಲುಪಿಸಲಾಗುತ್ತಿದೆ. ಸರ್ಕಾರದ ಯೋಜನೆ ತಲುಪಿಸುವ ಕಾರ್ಯಕ್ರಮಗಳು ನಿರಂತರ ಕಾರ್ಯಕ್ರಮಗಳಾಗಬೇಕು. ಅವರಿಗೆ ಬೆಂಬಲ ನೀಡಿದರೆ ಇನ್ನಷ್ಟು ಕೆಲಸ ಮಾಡಲು ಪ್ರೇರಣೆ ಸಿಗುತ್ತದೆ. ನಾನು ಪರಾಜಿತ ಅಭ್ಯರ್ಥಿಯಲ್ಲ. ಚುನಾವಣೆಯಲ್ಲಿ ಸೂತರೂ ಚಲಾವಣೆಯಲ್ಲಿದ್ದೇನೆ. ಜನರ ನಡುವೆ ಇದ್ದೇನೆ. ಜನರ ಸೇವೆ ಮಾಡುತ್ತಿದ್ದೇನೆ.ಬೆಲೆ ಏರಿಕೆ ಮಾಡಿದ್ದು ರಾಜ್ಯ ಸರ್ಕಾರವಲ್ಲ ಕೇಂದ್ರ ಸರ್ಕಾರ. ಡಿಸೆಲ್, ಪೆಟ್ರೋಲ್ ಬೆಲೆ ಏರಿಕೆ ಮಾಡಿರುವ ಪರಿಣಾಮ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ. ರಾಜ್ಯ ಸರ್ಕಾರ ಹಾಲಿನ ದರ ಹೆಚ್ಚಳ ಮಾಡಿದ್ದು,ಅದರ ಲಾಭ ರೈತರಿಗೆ ಹೋಗುತ್ತದೆ ಹೊರತು ಸರ್ಕಾರಕ್ಕಲ್ಲ. ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ಪ್ರಶ್ನಿಸುವ ಧೈರ್ಯ ಯಾರಿಗೂ ಇಲ್ಲ. ಪ್ರಶ್ನಿಸಿದರೆ ದೇಶ ದ್ರೋಹಿಗಳಾಗುತ್ತಾರೆ. ₹15 ಲಕ್ಷ ಜನರ ಖಾತೆಗೆ ಹಾಕುತ್ತೇವೆ ಎಂದರು ಆದರೆ ಇಲ್ಲಿವರೆಗೂ ಹಾಕಲಿಲ್ಲ. ಈಗ ರಾಜ್ಯ ಸರ್ಕಾರದ ಬಗ್ಗೆ ಮಾತನಾಡುತ್ತಾರೆ. ನಾವು ನುಡಿದಂತೆ 5 ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ. ಕೇವಲ ಸಭೆ, ಭಾಷಣಗಳನ್ನು ಮಾಡಿದರೆ ಸಾಲದು. ಸರ್ಕಾರದ ಯೋಜನೆಗಳ ಬಗ್ಗೆ ಚರ್ಚೆ ಮಾಡಬೇಕು. ಹಳ್ಳಿ ಹಳ್ಳಿಗಳಿಗೂ,ಮನೆ ಮನೆಗಳಿಗೂ ಸರ್ಕಾರ ಯೋಜನೆಗಳನ್ನು ತಲುಪಿಸುವ ಕೆಲಸ ಮಾಡಬೇಕು ಎಂದರು.
ಶಾಸಕ ಟಿ.ಡಿ.ರಾಜೇಗೌಡ, ಕೆಪಿಸಿಸಿ ಕಿಸಾನ್ ಘಟಕ ಅಧ್ಯಕ್ಷ ಸಚಿನ್ ಮೀಗಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಅಂಶುಮಂತ್, ಎಐಸಿಸಿ ವಕ್ತಾರ ಸಂದೀಪ್, ಕೆಪಿಸಿಸಿ ಸದಸ್ಯ ಸದಾಶಿವ, ಇಪ್ತಿಕಾರ್ ಅಹ್ಮದ್, ದುರ್ಗಾಚರಣ್, ಶೃಂಗೇರಿ ತಾಲೂಕು ಅಧ್ಯಕ್ಷ ನಟರಾಜ್, ಕೊಪ್ಪ ತಾಲೂಕು ಅಧ್ಯಕ್ಷ ಕುಕ್ಕುಡಿಗೆ ರವೀಂದ್ರ,ಎನ್.ಆರ್ ಪುರ ತಾಲೂಕು ಅಧ್ಯಕ್ಷ ಗೇರ್ ಬೈಲ್ ನಟರಾಜ್, ಯುವ ಕಾಂಗ್ರೆಸ್ ನ ಶ್ರೀಜಿತ್ ಮತ್ತಿತರರು ಇದ್ದರು.23 ಶ್ರೀ ಚಿತ್ರ 1-
ಶೃಂಗೇರಿ ಪಟ್ಟಣದ ಆದಿಚುಂಚನಗಿರಿ ಸಭಾಭವನದಲ್ಲಿ ನಡೆದ ಸರ್ಕಾರದ ನಡೆ ಕಾರ್ಯಕರ್ತರ ಕಡೆಗೆ ಶೃಂಗೇರಿ ಕ್ಷೇತ್ರ ಮಟ್ಟದ ಸಮಾವೇಶವನ್ನು ಸಚಿವ ಕೆ.ಜೆ.ಜಾರ್ಜ್ ಉದ್ಘಾಟಿಸಿದರು. ಶಾಸಕ ರಾಜೇಗೌಡ, ಸಂದೀಪ್, ಡಾ.ಅಂಶುಮಂತ್ ಮತ್ತಿತರರು ಇದ್ದರು.