ಹಾನಗಲ್ಲ ತಾಲೂಕಿನ ಆಡೂರಿನಲ್ಲಿ ಹಾನಗಲ್ಲಿನ ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಾನಗಲ್ಲ ನ್ಯಾಯಾಲಯದ ಉಚಿತ ಕಾನೂನು ನೆರವು ಸಮಿತಿ ಸಹಯೋಗದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ ನಡೆಯಿತು.

ಹಾನಗಲ್ಲ: ತಪ್ಪಿಗೆ ಶಿಕ್ಷೆ ತಪ್ಪಿದ್ದಲ್ಲ, ಕಾನೂನು ಜ್ಞಾನದ ಕೊರತೆಯಿಂದ ಜೀವನವನ್ನೇ ಹಾಳು ಮಾಡಿಕೊಳ್ಳುವ ದುರಂತಕ್ಕೆ ಸಾಕ್ಷಿಯಾಗಬೇಕಾದೀತು, ಸಣ್ಣ ತಪ್ಪು ದೊಡ್ಡ ಅನಾಹುತಕ್ಕೆ ದಾರಿಯಾಗುವಂತಾಗುವುದು ಬೇಡ ಎಂದು ವಕೀಲ ರವಿಬಾಬು ಪೂಜಾರ ಹೇಳಿದರು.ತಾಲೂಕಿನ ಆಡೂರಿನಲ್ಲಿ ಹಾನಗಲ್ಲಿನ ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯ ಆಯೋಜಿಸಿದ್ದ ವಾರ್ಷಿಕ ರಾಷ್ಟ್ರೀಯ ಯೋಜನಾ ಶಿಬಿರ ಹಾಗೂ ಹಾನಗಲ್ಲ ನ್ಯಾಯಾಲಯದ ಉಚಿತ ಕಾನೂನು ನೆರವು ಸಮಿತಿ ಸಹಯೋಗದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾನೂನು ನಿರಪರಾಧಿಯನ್ನು ರಕ್ಷಿಸುತ್ತದೆ, ಅಪರಾಧಿಯನ್ನು ಶಿಕ್ಷಿಸುತ್ತದೆ. ತಪ್ಪು ಮಾಡಿದವರು ಪಶ್ಚಾತ್ತಾಪ ಅನುಭವಿಸಲೇಬೇಕು. ಕಾನೂನು ಎಲ್ಲರಿಗೂ ಒಂದೇ. ತಪ್ಪುಗಳಾಗದಂತೆ ಜೀವನ ನಿರ್ವಹಣೆ ಮಾಡಬೇಕು. ಕಾನೂನು ಜ್ಞಾನವಿಲ್ಲದೆ ತಿಳಿದೋ ತಿಳಿಯದೆಯೋ ಅಪರಾಧಕ್ಕೆ ಒಳಗಾಗಿ ಇಡೀ ಕುಟುಂಬವೇ ಸರ್ವನಾಶವಾದ ಘಟನೆಗಳಿವೆ. ಸಾಮಾಜಿಕ ಜೀವನದಲ್ಲಿ ಎಚ್ಚರಿಕೆಯಿಂದ ನಮ್ಮ ನಡೆ-ನುಡಿಗಳಿರಬೇಕು. ಗ್ರಾಹಕರ ಕಾನೂನುಗಳನ್ನು ಸರಿಯಾಗಿ ಆರ್ಥ ಮಾಡಿಕೊಳ್ಳದೇ ಇದ್ದುದರಿಂದ ವ್ಯಾಪಾರಸ್ಥರಿಂದ ಮೋಸದ ಜಾಲಕ್ಕೆ ಒಳಗಾಗುವ ವ್ಯವಸ್ಥೆ ಒಳಗಾಗುತ್ತಿದ್ದಾರೆ. ಯುವಕರು ಈಗ ಎಚ್ಚೆತ್ತುಕೊಳ್ಳಬೇಕು. ನಾಳೆಯ ನಮ್ಮ ಬದುಕಿಗಾಗಿ ಈಗಲೇ ಒಂದಷ್ಟು ಯೋಜನಾಬದ್ಧ ಜೀವನದ ದಾರಿಯನ್ನು ಅನುಸರಿಸಿ ಎಂದು ಕರೆ ನೀಡಿದರು.ಸಾಹಿತಿ ಪ್ರೊ. ಮಾರುತಿ ಶಿಡ್ಲಾಪುರ ಮಾತನಾಡಿ, ವೇಗದ ಬದಲಾವಣೆಯು ಯುಗದಲ್ಲಿರುವ ನಮಗೆ ಯೋಜನಾಬದ್ಧವಾದ ಜೀವನ ವಿಧಾನ ಬೇಕಾಗಿದೆ. ಇಂದು ಇಡೀ ಜಗತ್ತು ಅಂಗೈಯಲ್ಲಿದೆ. ಎಲ್ಲ ಸ್ಪರ್ಧೆಗಳು ಜಗತ್ತಿನ ನಡುವೆ ನಡೆಯುತ್ತಿವೆ. ನಮ್ಮ ಸಂಸ್ಕೃತಿ, ಆದರ್ಶಗಳನ್ನು ಒಳಗೊಂಡು ಸಾತ್ವಿಕ ಜೀವನ ವಿಧಾನ ಈಗ ನಮಗೆ ಬೇಕಾಗಿದೆ. ಒಟ್ಟಾಗಿ ಬಾಳುವ ಸಂಕಲ್ಪಕ್ಕೆ ಎಲ್ಲರೂ ಬದ್ಧರಾಗಬೇಕಾಗಿದೆ. ದ್ವೇಷ, ಅಸೂಯೆಗಳನ್ನು ಬಿಟ್ಟು ಪ್ರೀತಿ-ವಿಶ್ವಾಸದಿಂದ ಬದುಕುವ ಯತ್ನ ನಮ್ಮದಾಗಿರಲಿ ಎಂದರು.

ಅಧ್ಯಕ್ಷತೆವಹಿಸಿ ಮಾತನಾಡಿದ ಎನ್‌ಎಸ್‌ಎಸ್ ಯೋಜನಾಧಿಕಾರಿ ಡಾ. ವಿಶ್ವನಾಥ ಬೊಂದಾಡೆ, ಹೊರಗಿನ ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಬದುಕಿಗೆ ಬೇಡವಾದದ್ದೇ ನಮ್ಮನ್ನು ಸೆಳೆಯುತ್ತಿದೆ. ಯಾವುದು ಸರಿ ತಪ್ಪು ಎಂಬ ಜಿಜ್ಞಾಸೆ ಎಲ್ಲರನ್ನೂ ಕಾಡುತ್ತಿದೆ. ಈಗ ಮತ್ತೆ ನಮ್ಮ ಜಾನಪದ ಜೀವನ ವಿಧಾನವೇ ಸರಿ ಎಂಬ ಸತ್ಯಕ್ಕೆ ಎಲ್ಲರೂ ಮೊರೆ ಹೋಗುವ ಹಂತದಲ್ಲಿದ್ದೇವೆ. ನಮ್ಮ ಮನಸ್ಸು ಸಾಂಸ್ಕೃತಿಕವಾಗಿ ಗಟ್ಟಿಗೊಳ್ಳಬೇಕಾಗಿದೆ. ಶಾಲೆ, ಕಾಲೇಜುಗಳು ಅಕ್ಷರ ಕ್ರಾಂತಿಯ ಜತೆಗೆ ಸಂಸ್ಕಾರ, ಸಂಸ್ಕೃತಿಯ ಕ್ರಾಂತಿಗೆ ಒಳಗಾಗುವ ಅನಿವಾರ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದರು.ನ್ಯಾಯಾಲಯದ ಸಿಬ್ಬಂದಿ ಸಂತೋಷ ಮಾಳಗಿ ಉಪಸ್ಥಿತರಿದ್ದರು. ವಿದ್ಯಾ ಸಂಗಡಿಗರು ಪ್ರಾರ್ಥಿಸಿದರು. ಜೆ. ಸ್ವಾತಿ ಸ್ವಾಗತಿಸಿದರು. ಕಾವ್ಯಾ ಮಲಗುಂದ ಕಾರ್ಯಕ್ರಮ ನಿರೂಪಿಸಿದರು.ಸಾಂಸ್ಕೃತಿಕ ಕಾರ್ಯಕ್ರಮ: ಸಭಾ ಕಾರ್ಯಕ್ರಮದ ಆನಂತರ ಜನ ಜಾಗೃತಿ ಮೂಡಿಸುವ ಯೋಗ ಪ್ರದರ್ಶನ, ಮೊಬೈಲ ಬಳಕೆಯ ಅಪಾಯಗಳನ್ನು ನಿರೂಪಿಸುವ ಮೊಬೈಲ್ ಕಮಾಲ ನಾಟಕ, ನೃತ್ಯ, ಭಾವಗೀತೆ, ಭಕ್ತಿಗೀತೆ ಕಾರ್ಯಕ್ರಮಗಳು ಪ್ರೇಕ್ಷಕರ ಮನ ಸೆಳೆದವು.