ಸಾರಾಂಶ
ದಾವಣಗೆರೆಯ ಬಾಪೂಜಿ ಹೈಟೆಕ್ ಕಾಲೇಜಿನಲ್ಲಿ ನಡೆದ ಓರಿಯಂಟೇಷನ್ ಕಾರ್ಯಕ್ರಮದಲ್ಲಿ ಡಾ.ಎಚ್.ಬಿ.ಮಂಜುನಾಥರನ್ನು ಸನ್ಮಾನಿಸಿದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಜೀವನದಲ್ಲಿ ಯಾವುದೇ ಸಾಧನೆ ಮಾಡಲು ಶಿಸ್ತು ಎಂಬುದು ಅತಿ ಮುಖ್ಯವಾಗಿದ್ದು, ಶಿಸ್ತುಬದ್ಧ ಕಾರ್ಯಗಳು ಒಂದಕ್ಕೊಂದು ಹೊಂದಿಕೊಂಡು ಸಫಲತೆ ತಂದುಕೊಡುತ್ತವೆ ಎಂದು ಹಿರಿಯ ಪತ್ರಕರ್ತ ಡಾ.ಎಚ್.ಬಿ.ಮಂಜುನಾಥ ಹೇಳಿದರು.ಗುರುವಾರ ನಗರದ ಬಾಪೂಜಿ ಹೈಟೆಕ್ ಕಾಲೇಜಿನ ಬಿಕಾಂ ವಿದ್ಯಾರ್ಥಿಗಳ ‘ಪೀಠಿಕಾ’ (ಓರಿಯಂಟೇಷನ್) ಕಾರ್ಯಕ್ರಮದಲ್ಲಿ ‘ಜೀವನ ಶಿಸ್ತು’ ಎನ್ನುವ ವಿಷಯವಾಗಿ ವಿಶೇಷ ಉಪನ್ಯಾಸ ನೀಡಿದರು.
ಶೈಕ್ಷಣಿಕ ಶಿಸ್ತು ಅಂದರೆ ಅಂದಂದಿನ ಪಾಠ ಪ್ರವಚನಗಳನ್ನು ಅಂದೇ ಅರ್ಥ ಮಾಡಿಕೊಂಡು ಮನದಟ್ಟು ಮಾಡಿಕೊಳ್ಳುವುದು. ಪ್ರಶ್ನೆಗಳು ಸಂದೇಹಗಳು ಎದುರಾದಲ್ಲಿ ತಕ್ಷಣವೇ ಶಿಕ್ಷಕರನ್ನು ಸಂಪರ್ಕಿಸಿ ಪರಿಹಾರ ಪಡೆಯುವುದು. ಆಗ ಪರೀಕ್ಷಾ ಭಯವೂ ಇರುವುದಿಲ್ಲ. ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾಗುವ ಅವಕಾಶ ಹೆಚ್ಚುತ್ತದೆ ಎಂದು ತಿಳಿಸಿದರು.ಬದುಕಿನಲ್ಲಿ ಸಂವಿಧಾನದ ಹಕ್ಕುಗಳಿಗಿಂತ ಕರ್ತವ್ಯಗಳ ಕಡೆಗೆ ಹೆಚ್ಚಿನ ಗಮನ ನೀಡಬೇಕು, ಇದನ್ನು ರಾಷ್ಟ್ರೀಯ ಶಿಸ್ತು ಎನ್ನಬಹುದು, ಇದರಿಂದ ರಾಷ್ಟ್ರಾಭಿವೃದ್ಧಿ ಸಾಧ್ಯ ಎಂಬುದನ್ನು ನಿದರ್ಶನಗಳ ಸಹಿತ ವಿವರಿಸಿದರು.
ದೇಶದಲ್ಲಿ ವಾರ್ಷಿಕ ಸುಮಾರು 1 ಕೋಟಿ ಪದವಿ ಹಾಗೂ ಡಿಪ್ಲೋಮಾ ವಿದ್ಯಾರ್ಥಿಗಲು ಹೊರಬರುತ್ತಿದ್ದು ಇದರಲ್ಲಿ ದೇಶದ ಸುಮಾರು 962 ವಿಶ್ವವಿದ್ಯಾಲಯಗಳ 38,160 ಕಾಲೇಜುಗಳಿಂದ ಸುಮಾರು 25 ಲಕ್ಷದಷ್ಟು ಸಾಮಾನ್ಯ ಪದವೀಧರರು ಹೊರಬರುತ್ತಿದ್ದಾರೆ. ಇವರಲ್ಲಿ ಶೇಕಡ 70ರಷ್ಟು ಬಿಕಾಂ ಪದವೀಧರರೇ ಆಗಿರುತ್ತಾರೆ. ವಾಣಿಜ್ಯ ಪದವೀಧರರಿಗೆ ಕೈಗಾರಿಕೋದ್ಯಮದಲ್ಲಿ ಉತ್ತಮ ಅವಕಾಶಗಳಿವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ನಿರ್ದೇಶಕ ಡಾ.ಸ್ವಾಮಿ ತ್ರಿಭುವಾನಂದ, ಪ್ರೊಫೆಸರ್‌ಗಳಾದ ಮಂಜುನಾಥ, ಆರ್.ಎಸ್.ಜ್ಞಾನೇಶ್ವರ, ಒ.ಎಚ್.ಲತಾ, ಶ್ವೇತಾ ಬಿ.ವಿ, ಮಂಜುಳಾ ಎ.ಎನ್, ಕಾಂಚನಾ ಟಿ.ಎಸ್, ನಾಗರಾಜ್ ಎಂ.ಎಸ್.ಉಪಸ್ಥಿತರಿದ್ದರು.