ಸಂಸ್ಕೃತಿ, ಭಾಷೆ ಉಳಿದರೆ ಬದುಕು ಸುಂದರ: ಗುರುವೇಶ್

| Published : Feb 13 2024, 12:50 AM IST

ಸಾರಾಂಶ

ಕನ್ನಡ ಸಾಹಿತ್ಯ ಪರಿಷತ್ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಮುಖಾಂತರ ಕನ್ನಡ ಪರವಾದ ಕೆಲಸಗಳು ನಡೆಯಬೇಕು ಎಂದು ಕಸಾಪ ಜಿಲ್ಲಾ ಪ್ರಧಾನ ಸಂಚಾಲಕ ಕೆ.ಎಸ್. ಗುರುವೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕನ್ನಡ ಸಾಹಿತ್ಯ ಪರಿಷತ್ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಮುಖಾಂತರ ಕನ್ನಡ ಪರವಾದ ಕೆಲಸಗಳು ನಡೆಯಬೇಕು ಎಂದು ಕಸಾಪ ಜಿಲ್ಲಾ ಪ್ರಧಾನ ಸಂಚಾಲಕ ಕೆ.ಎಸ್. ಗುರುವೇಶ್ ಹೇಳಿದರು. ತಾಲೂಕಿನ ಅಂಬಳೆ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಭಾನುವಾರ ಆಯೋಜಿಸಿದ್ದ ಕಸಾಪ ಅಂಬಳೆ ಹೋಬಳಿ ಘಟಕದ ಪ್ರತಿಜ್ಞಾವಿಧಿ ಬೋಧನೆ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಸ್ಕೃತಿ, ಭಾಷೆ ಮತ್ತು ಸಾಹಿತ್ಯ ಉಳಿದರೆ ನಮ್ಮ ಬದುಕು ಸುಂದರವಾಗಲಿದೆ, ಇಲ್ಲದಿದ್ದರೆ ಸೊರಗುತ್ತದೆ. ಆಂಗ್ಲ ಮಾಧ್ಯಮ ಶಾಲೆಗಳು ಅನೇಕ ಕನ್ನಡ ಶಾಲೆಗಳನ್ನು ಮುಚ್ಚಿಸುತ್ತದೆ. ಹೀಗಾಗಿ ಇಂಗ್ಲೀಷ್ ವ್ಯಾಮೋಹ ಬಿಟ್ಟು ಅಪ್ಪಟ ಕನ್ನಡ ಭಾಷೆ ಬೆಳವಣಿಗೆಗೆ ಪ್ರತಿಯೊಬ್ಬರು ಸಹಕರಿಸಬೇಕು ಎಂದರು. ಕಸಾಪ ತಾಲೂಕು ಗೌರವ ಕಾರ್ಯದರ್ಶಿ ವೀರೇಶ್ ಕೌಲಗಿ ಮಾತನಾಡಿ, ಕನ್ನಡ ಭಾಷೆಗೆ ಹೋರಾಡಿದರೆ ನಮಗೇನು ಫಲ ಎಂಬುವ ಆಲೋಚನೆ ಬಿಡಬೇಕು. ಪ್ರತಿನಿತ್ಯ ವ್ಯವಹರಿಸುವ ಹಾಗೂ ಹುಟ್ಟಿನಿಂದ ಸಾವಿನ ವರೆಗೂ ಜೊತೆಗಿರುವ ಭಾಷೆ ಉಳಿವಿಗೆ ಸಮಯ ಕಾಯ್ದಿರಿಸಿಕೊಂಡು ಸಾಹಿತ್ಯಾತ್ಮಕವಾಗಿ ಬೆಳವಣಿಗೆಗೆ ಮುಂದಾಗಬೇಕು ಎಂದು ತಿಳಿಸಿದರು. ಕಸಾಪ ತಾಲೂಕು ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್, ತಾಲೂಕಿನ ನಗರ, ಹೋಬಳಿ ಹಾಗೂ ಮಹಿಳಾ ಘಟಕದ ಸೇರಿದಂತೆ ಒಟ್ಟಾರೆ ಹತ್ತು ಕಸಾಪ ಘಟಕಗಳನ್ನು ಸ್ಥಾಪಿಸಲಾಗಿದೆ. ಮುಂದಿನ ಯುವ ಪೀಳಿಗೆಗೆ ಸಾಹಿತ್ಯಾಭಿರುಚಿ ಹಬ್ಬಿಸುವ ನಿಟ್ಟಿನಲ್ಲಿ ಆಯಾ ಘಟಕದ ಪದಾಧಿಕಾರಿಗಳ ಸಹಕಾರ ಅತ್ಯಗತ್ಯ ಎಂದರು. ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಶಿಕ್ಷಕಿ ಡಾ. ಚೈತ್ರ ’ವಚನ ಸಾಹಿತ್ಯ ಮತ್ತು ಜೀವನ ಸಾಮರಸ್ಯ’ ಹಾಗೂ ’ಅಕ್ಕಮಹಾದೇವಿಯವರಿಂದ ಮಹಿಳಾ ಜಾಗೃತಿ’ ಕುರಿತು ವಿಶೇಷ ದತ್ತಿ ಉಪನ್ಯಾಸ ನೀಡಿದರು. ಇದೇ ವೇಳೆ ಅಂಬಳೆ ಹೋಬಳಿ ಘಟಕ ಅಧ್ಯಕ್ಷರಾಗಿ ಎಂ.ಆರ್.ಚಂದ್ರಶೇಖರ್, ಗೌರವ ಕಾರ್ಯದರ್ಶಿ ಎಂ.ಎ.ರಘುನಂದನ್, ಖಜಾಂಚಿ ಎ.ವಿ.ಸುನೀಲ್, ಸಂಘಟನಾ ಕಾರ್ಯದರ್ಶಿ ವೀರಭದ್ರಾಚಾರ್, ಸದಸ್ಯ ಡಾ. ಎ.ಪಿ.ಚೈತ, ಟಿ.ಆರ್.ದೀಕ್ಷಾ, ಎ.ಪಿ.ಚಂದನ, ಎಚ್.ಸಿ.ಲಾವಣ್ಯ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಈ ಸಂದರ್ಭದಲ್ಲಿ ಕಸಾಪ ಕಸಬಾ ಹೋಬಳಿ ಅಧ್ಯಕ್ಷೆ ವೀಣಾ ಮಲ್ಲಿಕಾರ್ಜುನ್, ತಾಲೂಕು ಗೌರವ ಕಾರ್ಯದರ್ಶಿ ಎಚ್.ಆರ್.ಕಾಂತರಾಜು, ನಗರ ಘಟಕದ ಅಧ್ಯಕ್ಷ ಸಚಿನ್‌ಸಿಂಗ್, ಲಕ್ಯಾ ಹೋಬಳಿ ಘಟಕದ ಅಧ್ಯಕ್ಷ ಶಿವನಂಜೇಗೌಡ ಹಾಜರಿದ್ದರು.

11 ಕೆಸಿಕೆಎಂ 5ಚಿಕ್ಕಮಗಳೂರು ತಾಲೂಕಿನ ಅಂಬಳೆ ಹೋಬಳಿ ಘಟಕದ ಕಸಾಪ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ನೀಡಲಾಯಿತು.