ಬಾಳೆಹೊನ್ನೂರುಬದುಕಿಗೆ ಶಿಕ್ಷಣವೇ ಪ್ರಮುಖ ಅಂಗ ಶಿಕ್ಷಣವಿಲ್ಲದ ಬದುಕು ನಿರರ್ಥಕವಾಗಲಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.ಪಟ್ಟಣದ ನಿರ್ಮಲಾ ಕಾನ್ವೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಣ ಇಲಾಖೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸಾಧನ ಪಥ ನೂರರ ಗುರಿಯತ್ತ- ಫಲಿತಾಂಶ ವೃದ್ಧಿಗಾಗಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಬದುಕಿಗೆ ಶಿಕ್ಷಣವೇ ಪ್ರಮುಖ ಅಂಗ ಶಿಕ್ಷಣವಿಲ್ಲದ ಬದುಕು ನಿರರ್ಥಕವಾಗಲಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.ಪಟ್ಟಣದ ನಿರ್ಮಲಾ ಕಾನ್ವೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಣ ಇಲಾಖೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸಾಧನ ಪಥ ನೂರರ ಗುರಿಯತ್ತ- ಫಲಿತಾಂಶ ವೃದ್ಧಿಗಾಗಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಕ್ಷೇತ್ರದಲ್ಲಿ ಇಂದು ಹಲವಾರು ಸುಧಾರಣೆಗಳನ್ನು ತಂದಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಸರ್ಕಾರ ಹಲವಾರು ಯೋಜನೆ ಜಾರಿಗೊಳಿಸಿದೆ. ಇಂದು ಮಾಹಿತಿ ತಂತ್ರಜ್ಞಾನ ಹೆಚ್ಚು ಮುಂದುವರಿದಿದ್ದು, ಇದಕ್ಕೆ ಶಿಕ್ಷಣ ಅಗತ್ಯವಾಗಿ ಇರಬೇಕಿದೆ. ಮಕ್ಕಳಿಗೆ ಶಿಕ್ಷಣದ ಕೊರತೆ ಎಂದಿಗೂ ಆಗಬಾರದು ಎಂದು ಸರ್ಕಾರ ಶಿಕ್ಷಣ ಕ್ಷೇತ್ರಕ್ಕಾಗಿ ಕೋಟ್ಯಂತರ ರು. ಅನುದಾನ ನೀಡುತ್ತಿದೆ.ರಾಜ್ಯದಲ್ಲಿ ಅತೀ ಹೆಚ್ಚು ಅನುದಾನವನ್ನು ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿದ್ದು, ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಂಡು ಸಾಧನೆ ಮಾಡಬೇಕಿದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಯಾವುದೇ ಅಂಜಿಕೆ ಇಲ್ಲದೆ ವಾರ್ಷಿಕ ಪರೀಕ್ಷೆಗಳನ್ನು ಎದುರಿಸಿ ಪೋಷಕರು, ಶಿಕ್ಷಣ ನೀಡಿದ ವಿದ್ಯಾಸಂಸ್ಥೆಗೆ ಕೀರ್ತಿ ತರಬೇಕು.ಎಸ್ಸೆಸ್ಸೆಲ್ಸಿಯಲ್ಲಿ 625 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಈ ಹಿಂದೆ ಲ್ಯಾಪ್‌ಟಾಪ್ ನೀಡಲಾಗುತ್ತಿತ್ತು. ಆದರೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ಯೋಜನೆ ಬದಲು ಮಾಡಿ ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ₹50 ಸಾವಿರ ಹಣ ಜಮೆ ಮಾಡುವುದಾಗಿ ಘೋಷಿಸಿದ್ದಾರೆ. ಈ ವರ್ಷದಿಂದ ಇದು ಜಾರಿಗೊಳ್ಳಲಿದೆ ಎಂದರು.ಎನ್.ಆರ್.ಪುರ ಬಿಇಒ ಶಬನಾ ಅಂಜುಮ್ ಮಾತನಾಡಿ, ನಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆದು ದಡ ಸೇರಬೇಕು. ಆತ್ಮ ಬಲ, ಆತ್ಮಸ್ಥೈರ್ಯ ಹೆಚ್ಚುಗೊಳಿಸಿಕೊಳ್ಳಬೇಕು ಎಂದು ತಾಲೂಕಿನಲ್ಲಿ ಶಿಕ್ಷಣ ಇಲಾಖೆಪಣ ತೊಟ್ಟಿದೆ ಎಂದರು.ತಾಲೂಕಿನಲ್ಲಿ 812 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಸಿದ್ಧರಾಗಿದ್ದು, ಅವರಿಗೆ ಈಗಾಗಲೇ 3 ಹಂತದ ಪೂರ್ವಸಿದ್ಧತಾ ಪರೀಕ್ಷೆಗಳನ್ನು ಎದುರಿಸುವ ಬಗ್ಗೆ, ಕಲಿಕೆ ಹೇಗೆ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂಬ ಬಗ್ಗೆ ನುರಿತ ಶಿಕ್ಷಕರ ಕಾರ್ಯಾಗಾರದಿಂದ ತರಬೇತುಗೊಳಿಸಲಾಗುತ್ತಿದೆ.
ನಿರ್ಮಲಾ ಕಾನ್ವೆಂಟ್ ಆಂಗ್ಲ ಮಾಧ್ಯಮ ಶಾಲೆ ಮುಖ್ಯಶಿಕ್ಷಕಿ ಎಲ್ವಿನ್ ಡಿಸೋಜಾ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಕೊಟ್ರೇಶಪ್ಪ, ತಾಲೂಕು ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಂ.ರಾಘವೇಂದ್ರ, ಇಸಿಓ ಸಂಗೀತಾ, ಸಂಪನ್ಮೂಲ ವ್ಯಕ್ತಿ ಎಚ್.ಜಿ.ಪ್ರಕಾಶ್, ಎಸ್.ಗುರುಮೂರ್ತಿ, ಭರತೇಶ್, ವಿಕ್ರಾಂತ್ ಕೇಳ್ಕರ್, ಬಾಲಸುಬ್ರಮಣ್ಯ ಮತ್ತಿತರರು ಹಾಜರಿದ್ದರು.೦೫ಬಿಹೆಚ್‌ಆರ್ ೪:ಬಾಳೆಹೊನ್ನೂರಿನ ನಿರ್ಮಲಾ ಕಾನ್ವೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಣ ಇಲಾಖೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಕಾರ್ಯಾಗಾರವನ್ನು ಶಾಸಕ ಟಿ.ಡಿ.ರಾಜೇಗೌಡ ಉದ್ಘಾಟಿಸಿದರು. ಶಬನಾ ಅಂಜುಮ್, ಎಲ್ವಿನ್ ಡಿಸೋಜಾ, ಕೊಟ್ರೇಶಪ್ಪ, ರಾಘವೇಂದ್ರ, ಸಂಗೀತಾ, ಪ್ರಕಾಶ್, ಗುರುಮೂರ್ತಿ ಇದ್ದರು.