ಸಾರಾಂಶ
ರಂಭಾಪುರಿ ಪೀಠದಲ್ಲಿ ಕಾರ್ತೀಕ ದೀಪೋತ್ಸವ, ಶ್ರೀ ವೀರಭದ್ರಸ್ವಾಮಿ ರಥೋತ್ಸವ ಅಂಗವಾಗಿ ಧರ್ಮ ಜಾಗೃತಿ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಬದುಕಿಗೆ ಭಗವಂತ ಕೊಟ್ಟ ಕೊಡುಗೆ ಅಮೂಲ್ಯ. ಬದುಕು ಇರುವುದು ಸಂತಸಪಡಲು ಹೊರತು ಸಂಕಟಪಡಲು ಅಲ್ಲ. ಬದುಕು ಇರುವುದು ಬಾಳುವುದಕ್ಕೆ ಹೊರತು ಬಳಲುವುದಕ್ಕಲ್ಲ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು. ರಂಭಾಪುರಿ ಪೀಠದಲ್ಲಿ ಕಾರ್ತೀಕ ದೀಪೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ರಥೋತ್ಸವದ ಅಂಗವಾಗಿ ಶುಕ್ರವಾರ ನಡೆದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಜ್ಞಾನವೆಂಬ ಸಂಪತ್ತು ತಾಳ್ಮೆ ಯೆಂಬ ಆಯುಧ ಜೊತೆಗೆ ನಗುವಿನಂಥ ಶಕ್ತಿ ಹೊಂದಿರುವವರನ್ನು ಯಶಸ್ಸು ತಾನಾಗಿಯೇ ಬೆನ್ನತ್ತಿ ಬರುತ್ತದೆ. ಒಳ್ಳೆಯ ನಿರ್ಧಾರ ಅರ್ಧ ಗೆಲ್ಲಿಸಿದರೆ ಇನ್ನರ್ಧ ಪ್ರಯತ್ನ ಮತ್ತು ಪರಿಶ್ರಮ ಗೆಲ್ಲಿಸುತ್ತದೆ ಎಂಬುದನ್ನು ನೆನಪಿಡಬೇಕಾಗುತ್ತದೆ.
ಸಲಹೆ ಕೊಡುವವರೆಲ್ಲರೂ ಇನ್ನೊಬ್ಬರಿಗೆ ಸಹಾಯ ಮಾಡುವುದಿಲ್ಲ. ಬಳಸಿಕೊಂಡವರನ್ನು ಮರೆತು ಬಿಡಬೇಕು. ಆದರೆ ಬೆಳೆಸಿದವರನ್ನು ಯಾವತ್ತೂ ಮರೆಯಬಾರದು. ಮನುಷ್ಯ ವಿಚಾರಗಳನ್ನು ಬಿತ್ತರಿಸಬೇಕೆ ಹೊರತು ಧ್ವನಿಯನ್ನಲ್ಲ. ಏಕೆಂದರೆ ಮಳೆ ನೀರಿನಿಂದ ಮರಗಳು ಬೆಳೆಯುತ್ತವೆ ಹೊರತು ಗುಡುಗು ಸಿಡಿಲಿನಿಂದಲ್ಲ. ಜೀವನದ ಕೆಟ್ಟ ಘಟನೆಗಳನ್ನು ಮರೆಯಬೇಕು. ಆದರೆ ಅದರಿಂದ ಕಲಿತ ಪಾಠ ಯಾವತ್ತೂ ಮರೆಯಬಾರದು. ಮನುಷ್ಯ ಎಷ್ಟೇ ಉನ್ನತ ಸ್ಥಾನ ಪಡೆದರೂ ದೊಡ್ಡ ಪದವಿಗಳನ್ನು ಪಡೆದರೂ ಮಾತನಾಡುವ ರೀತಿ ನೀತಿ ಮಾನವೀಯತೆ ಕಲಿಯದಿದ್ದರೆ ಮನುಷ್ಯ ಎಂದಿಗೂ ಆದರ್ಶ ವ್ಯಕ್ತಿಯಾಗಿ ಬಾಳಲಾರ. ಶ್ರೀ ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮದಲ್ಲಿ ಉದಾತ್ತ ಮಾನವೀಯ ಮೌಲ್ಯಗಳನ್ನು ಬೋಧಿಸಿದ್ದಾರೆ. ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವುದೇ ದೀಪೋತ್ಸವ ಸಮಾರಂಭದ ಮೂಲ ಉದ್ದೇಶವಾಗಿದೆ. ದೀಪ ಹೊರಗಿನ ಕತ್ತಲೆ ಕಳೆದರೆ ಜ್ಞಾನದಿಂದ ಅಂತರಂಗದ ಕತ್ತಲೆ ಕಳೆಯಲು ಶ್ರೀ ಗುರುವೇ ಕಾರಣನಾಗಿದ್ದಾನೆ ಎಂದರು.ಸಮಾರಂಭದಲ್ಲಿ ಕೊಟ್ಟೂರು ಯೋಗಿರಾಜೇಂದ್ರ ಶಿವಾಚಾರ್ಯ, ಬೇರುಗಂಡಿ ಬೃಹನ್ಮಠದ ರೇಣುಕ ಮಹಂತ ಶಿವಾಚಾರ್ಯ, ಬಿಳಕಿ ರಾಚೋಟೇಶ್ವರ ಶಿವಾಚಾರ್ಯ, ತಾವರೆಕೆರೆ ಡಾ.ಅಭಿನವ ಸಿದ್ಧಲಿಂಗ ಶಿವಾಚಾರ್ಯ, ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯ, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯ, ತೆಂಡೆಕೆರೆ ಗಂಗಾಧರ ಶಿವಾಚಾರ್ಯ, ಕಾರ್ಜುವಳ್ಳಿ ಸದಾಶಿವ ಶಿವಾಚಾರ್ಯ, ಬೀರೂರು ರುದ್ರಮುನಿ ಶಿವಾಚಾರ್ಯರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಶ್ರೀಪೀಠದ ಆಡಳಿತಾಧಿಕಾರಿ ಎಸ್.ಬಿ.ಹಿರೇಮಠ, ಸಂಪರ್ಕಾಧಿಕಾರಿ ಪ್ರಭುದೇವ ಕಲ್ಮಠ, ವೀರೇಶ ಪಾಟೀಲ, ಸಿದ್ಧು ಪಾಟೀಲ, ಶಶಿಧರ ಸುರಗಿಮಠ, ಲಿಂಗಸುಗೂರಿನ ವಾರದ ಮಲ್ಲಪ್ಪ, ಬಸವರಾಜ ನಂದಿಕೋಲಮಠ, ಆಲ್ದೂರು ರಾಜೇಶ, ಚಿಕ್ಕಮಗಳೂರಿನ ಎಸ್.ಎಂ.ದೇವಣ್ಣಗೌಡ, ಪ್ರಭುಲಿಂಗ ಶಾಸ್ತ್ರಿ, ಕಡವಂತಿ ಹಣ್ಣೇಗೌಡರು, ಜಿಪಂ ಮಾಜಿ ಉಪಾಧ್ಯಕ್ಷ ಎಂ.ಎಸ್.ಚನ್ನಕೇಶವ್, ಇಳೆಖಾನ ಉಮೇಶ, ಆಲ್ದೂರು ವೀರಶೈವ ಸಮಾಜದ ಅಧ್ಯಕ್ಷ ಮಹೇಶ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.ಬೆಳಿಗ್ಗೆ ಕ್ಷೇತ್ರದ ಎಲ್ಲಾ ದೈವಗಳಿಗೆ ಕಾರ್ತೀಕ ದೀಪೋತ್ಸವದ ಅಂಗವಾಗಿ ವಿಶೇಷ ಪೂಜೆ ನಡೆಯಿತು. ರಾತ್ರಿ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಚಿಕ್ಕಮಗಳೂರಿನ ತರಕಾರಿ ವ್ಯಾಪಾರಸ್ಥೆ ಶಾಂತಮ್ಮ ಕುಟುಂಬದವರು ದಾಸೋಹ ಸೇವೆ ಸಲ್ಲಿಸಿದರು.೧೫ಬಿಹೆಚ್‌ಆರ್ ೩:ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ನಡೆದ ಕಾರ್ತಿಕ ದೀಪೋತ್ಸವವನ್ನು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಉದ್ಘಾಟಿಸಿದರು. ವಿವಿಧ ಶಾಖಾ ಮಠಗಳ ಶಿವಾಚಾರ್ಯರು, ಭಕ್ತರು ಹಾಜರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))