ಕೃತಕ ಬುದ್ಧಿಮತ್ತೆ (ಎಐ) ಯಿಂದ ಮುಂದಿನ ದಿನಗಳಲ್ಲಿ ಶಿಕ್ಷಕರ ಅಗತ್ಯವೇ ಇಲ್ಲ ಎಂಬ ಭಾವನೆ ಮೂಡುತ್ತಿರುವುದು ಆತಂಕಕಾರಿ. ಎಐ ಮಾಹಿತಿ ಹಾಗೂ ಜ್ಞಾನ ನೀಡಬಹುದು.

ಮಕ್ಕಳ ಸ್ನೇಹಿ ಶಿಕ್ಷಕ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ

ಕನ್ನಡಪ್ರಭ ವಾರ್ತೆ ಮುಂಡರಗಿ

ಕೃತಕ ಬುದ್ಧಿಮತ್ತೆ (ಎಐ) ಯಿಂದ ಮುಂದಿನ ದಿನಗಳಲ್ಲಿ ಶಿಕ್ಷಕರ ಅಗತ್ಯವೇ ಇಲ್ಲ ಎಂಬ ಭಾವನೆ ಮೂಡುತ್ತಿರುವುದು ಆತಂಕಕಾರಿ. ಎಐ ಮಾಹಿತಿ ಹಾಗೂ ಜ್ಞಾನ ನೀಡಬಹುದು. ಆದರೆ ಶಿಕ್ಷಕರು ನೀಡುವ ಮಾನವೀಯ ಮೌಲ್ಯ, ವ್ಯಕ್ತಿತ್ವ ನಿರ್ಮಾಣ ಮತ್ತು ಬದುಕಿನ ಪಾಠವನ್ನು ಯಾವುದೇ ಎಐ ನೀಡಲು ಸಾಧ್ಯವಿಲ್ಲ ಎಂದು ಸಾಹಿತಿ ಪ್ರೊ. ಚಂದ್ರಶೇಖರ ವಸ್ತ್ರದ ಹೇಳಿದರು.

ಭಾನುವಾರ ಮುಂಡರಗಿ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಕಲಾ ಶಿಕ್ಷಣ ಸಂಸ್ಕೃತಿ ಪ್ರತಿಷ್ಠಾನ, ಮುಂಡರಗಿ ವತಿಯಿಂದ ಆದರ್ಶ ಶಿಕ್ಷಕಿ ಕಲಾ ನಿಂಗು ಸೊಲಗಿ ಅವರ ಸಂಸ್ಮರಣೆಯಲ್ಲಿ ಆಯೋಜಿಸಿದ್ದ ಮಕ್ಕಳ ಸ್ನೇಹಿ ಶಿಕ್ಷಕ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಮುಂದಿನ ದಿನಗಳು ಶಿಕ್ಷಕರಿಗೆ ಇನ್ನೂ ಬಹಳ ಕಷ್ಟದ ದಿನಗಳಾಗಲಿವೆ. ಶಿಕ್ಷಕರ ಕೊರತೆ ಈಗಾಗಲೇ ಎದ್ದು ಕಾಣುತ್ತಿದೆ. ಇದರ ನಡುವೆ ಕೃತಕ ಬುದ್ಧಿಮತ್ತೆ ಬಂದಿದೆ. ಇನ್ನು ಶಿಕ್ಷಕರ ಅಗತ್ಯವೇ ಇಲ್ಲ ಎಂಬ ಭಾವನೆ ವಿದ್ಯಾರ್ಥಿಗಳಲ್ಲಿ ಮೂಡುತ್ತಿದೆ. ಸರ್ ಕ್ಲಾಸಿನಲ್ಲಿ ಏನು ಹೇಳುತ್ತಾರೆ ಎಂಬುದನ್ನು ಎಐ ಹೇಳುತ್ತದೆ ಎಂದು ಇಂದಿನ ವಿದ್ಯಾರ್ಥಿಗಳು ತರಗತಿಗೆ ಹೋಗುವುದನ್ನೇ ಕಡಿಮೆ ಮಾಡುತ್ತಿದ್ದಾರೆ. ಶಿಕ್ಷಕರ ಕೆಲಸ ಕೇವಲ ಪಠ್ಯ ಬೋಧನೆಗೆ ಸೀಮಿತವಾಗಿಲ್ಲ. ಮಕ್ಕಳ ವ್ಯಕ್ತಿತ್ವ ಹೇಗೆ ರೂಪಿಸಬೇಕು, ಸಮಾಜದಲ್ಲಿ ಹೇಗೆ ಬದುಕಬೇಕು, ತಾಯಿ, ದೇಶ ಮತ್ತು ಸಂಬಂಧಗಳ ಬಗ್ಗೆ ಗೌರವ ಹೇಗಿರಬೇಕು ಎಂಬುದನ್ನು ಶಿಕ್ಷಕರು ಕಲಿಸುತ್ತಾರೆ. ಆದ್ದರಿಂದ ಶಿಕ್ಷಕರ ಸ್ಥಾನವನ್ನು ಯಾವುದೇ ತಂತ್ರಜ್ಞಾನ ತುಂಬಲು ಸಾಧ್ಯವಿಲ್ಲ ಎಂದರು.

ಮಕ್ಕಳ ಸ್ನೇಹಿ ಶಿಕ್ಷಕ ರಾಜ್ಯ ಪ್ರಶಸ್ತಿ ಪ್ರದಾನ‌ ಮಾಡಿ ರಾಜ್ಯ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಅರ್ಜುನ ಗೊಳಸಂಗಿ ಮಾತನಾಡಿ, ಒಳ್ಳೆಯ ಶಿಕ್ಷಕ ಹಾಗೂ ನಿಜವಾದ ಸಮಾಜ ರೂಪಕ ವಿದ್ಯಾರ್ಥಿಗಳ ಬದುಕನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾನೆ. ಶಿಕ್ಷಕನ ಬದುಕು ಕೂಡ ವಿದ್ಯಾರ್ಥಿಗಳಿಗೆ ಒಂದು ಪಠ್ಯವಾಗಬೇಕು. ಸಮಾಜ ಗುರುತಿಸುವ, ಗೌರವಿಸುವ ಹಾಗೂ ಬೆಲೆ ನೀಡುವಂತಹ ಜೀವನವನ್ನು ಶಿಕ್ಷಕರು ನಿರ್ಮಿಸಿಕೊಳ್ಳಬೇಕು. ಶಿಕ್ಷಕ ಕೇವಲ ಪಾಠ ಬೋಧಿಸುವ ವ್ಯಕ್ತಿಯಾಗಿರದೆ, ವಿದ್ಯಾರ್ಥಿಗಳ ವ್ಯಕ್ತಿತ್ವ ಮತ್ತು ಭವಿಷ್ಯ ರೂಪಿಸುವ ಮಾರ್ಗದರ್ಶಕನಾಗಬೇಕು ಎಂದರು.

ನಂದಿವೇರಿಮಠದ ಶಿವಕುಮಾರ ಸ್ವಾಮಿಜಿ ಮಾತನಾಡಿ, ಶಿಕ್ಷಕನಿಗೆ ನಿರಂತರ ಅಧ್ಯಯನ (ಸ್ವಾಧ್ಯಾಯ) ಹಾಗೂ ಶಿಷ್ಯರಿಗೆ ಬೋಧಿಸುವುದು (ಪ್ರವಚನ) ಎರಡು ಕಣ್ಣುಗಳಿದ್ದಂತೆ. ಕಲಿತ ವಿದ್ಯೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು. ಶಿಕ್ಷಕ ಸದಾ ಅಧ್ಯಯನಶೀಲನಾಗಿರಬೇಕು. ಓದಿದ ಜ್ಞಾನವನ್ನು ಅರಗಿಸಿಕೊಳ್ಳದೆ ಕೇವಲ ಬಾಯಲ್ಲೇ ಉಳಿಸಿಕೊಂಡರೆ ಅದು ವ್ಯರ್ಥವಾಗುತ್ತದೆ ಎಂದರು.

ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕಿ ವೀಣಾ‌ ಅಠವಲೆ, ಹೂವಿನ ಹಡಗಲಿ ಶಿಕ್ಷಕ ದ್ವಾರಕೀಶ ರಡ್ಡಿ, ಪ್ರಶಸ್ತಿ ಸ್ವೀಕರಿಸಿದ ಬಂಟ್ವಾಳದ ಅರವಿಂದ ಕುಡ್ಲ, ಕುಷ್ಟಗಿಯ ಶಿಕ್ಷಕ ಕಿಶನ್ ರಾವ್ ಕುಲಕರ್ಣಿ, ಮಂಡ್ಯದ ಶಿಕ್ಷಕಿ ಆಶಾಕಿರಣ್ ಜೆ. ಮಾತನಾಡಿದರು.

ತಾಲೂಕಾ ಶಸಾಪ ಗೌರವಾಧ್ಯಕ್ಷ‌‌ ಪ್ರೊ.ಆರ್.ಎಲ್.ಪೊಲೀಸ್‌ ಪಾಟೀಲ ಅಧ್ಯಕ್ಷತೆ‌ ವಹಿಸಿದ್ದರು. ಶಂಕರ ಕುಕನೂರ ಕವನ ವಾಚನ ಮಾಡಿದರು. ರಾಮೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕ‍ಳಿಂದ ಸಾಮೂಹಿಕ ನೃತ್ಯ ಜರುಗಿತು. ನಯನ ಅಳವಂಡಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಕೆಎಂಎಫ್‌ ನಿರ್ದೇಶಕ ಲಿಂಗರಾಜಗೌಡ ಪಾಟೀಲ, ಎಸ್.ಬಿ. ಕರಿಭರಮಗೌಡ್ರ, ಡಿ.ಎಸ್. ಬಾಪುರೆ, ಸತೀಶ ಚನ್ನಪ್ಪಗೌಡ್ರ, ವಿ.ಎಸ್. ಪಾಟೀಲ, ಎಸ್.ಎನ್. ಡೋಣಿ, ಎಚ್.ಜೆ. ಪವಾರ, ಎಂ.ಎಸ್. ಶೀರನಹಳ್ಳಿ, ಎಸ್.ಎಂ. ಮರಿಗೌಡರ, ಪ್ರಭು ಸೊಪ್ಪೀನ, ಶಂಕರ್ ಪಾಗದ, ಎಸ್.ಎಂ. ಮರಿಗೌಡ್ರ, ಶರಣು ಸೊಲಗಿ, ಚೇತನ್‌ ಸೊಲಗಿ, ಲಿಂಗರಾಜ ಡಾವಣಗೇರಿ, ಪಿ.ಜಿ. ಹಿರೇಮಠ, ವಿ.ಆರ್. ಹೂಗಾರ ಉಪಸ್ಥಿತರಿದ್ದರು. ಕಲಾ‌ ಶಿಕ್ಷಣ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಡಾ. ನಿಂಗು ಸೊಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವಾಸ ಸೊಲಗಿ ಸ್ವಾಗತಿಸಿ, ಶಿಕ್ಷಕ‌ ಎಸ್.ಸಿ. ಹರ್ತಿ ನಿರೂಪಿಸಿ, ಶಿವಕುಮಾರ ಕುಷ್ಟಗಿ ವಂದಿಸಿದರು.