ಜನಪದ ಸಂಸ್ಕೃತಿಯ ಜೀವಾಳ: ಹಿರೇಮಠ

| Published : Oct 31 2024, 12:49 AM IST

ಸಾರಾಂಶ

ಓದು ಬರಹ ಬಾರದ ಗ್ರಾಮೀಣ ಸಮುದಾಯ, ಶ್ರಮಿಕ ವರ್ಗದ ಶ್ರೀಸಾಮಾನ್ಯರಿಂದ ರಚಿತವಾದ ಅಮರ ಸಾಹಿತ್ಯವೇ ಜನಪದ ಸಾಹಿತ್ಯ

ಗದಗ: ಜನವಾಣಿಯೇ ಬೇರು, ಕವಿವಾಣಿಯೇ ಹೂವು ಎನ್ನುವಂತೆ ಯಾವುದೇ ನಾಡಿನ, ರಾಷ್ಟ್ರದ ಸಾಹಿತ್ಯದ ಉದಯಕ್ಕೆ ಮೂಲ ಜಾನಪದ ಸಾಹಿತ್ಯ. ಅದು ಒಂದು ಜನಾಂಗದ ಜೀವಾಳ ಮಾತ್ರವಲ್ಲ, ಸಂಸ್ಕೃತಿಯ ಜೀವಾಳವು ಹೌದು ಎಂದು ರಾಜಶೇಖರಯ್ಯ ಹಿರೇಮಠ ಹೇಳಿದರು.

ತಾಲೂಕಿನ ಎಚ್.ಎಸ್. ವೆಂಕಟಾಪೂರ ಗ್ರಾಮದಲ್ಲಿ ಶ್ರೀಮಹರ್ಷಿ ವಾಲ್ಮೀಕಿ ಸಾಂಸ್ಕೃತಿಕ ಕಲಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಆಶ್ರಯದಲ್ಲಿ ನಡೆದ ಜನಪದ ಉತ್ಸವ-2024 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಓದು ಬರಹ ಬಾರದ ಗ್ರಾಮೀಣ ಸಮುದಾಯ, ಶ್ರಮಿಕ ವರ್ಗದ ಶ್ರೀಸಾಮಾನ್ಯರಿಂದ ರಚಿತವಾದ ಅಮರ ಸಾಹಿತ್ಯವೇ ಜನಪದ ಸಾಹಿತ್ಯ. ಇದು ತಲೆಮಾರಿನಿಂದ ತಲೆಮಾರಿಗೆ ಹರಿದು ಬರುವಂತದ್ದು. ತಮ್ಮ ದೈನಂದಿನ ಜೀವನದಲ್ಲಿ ಕಂಡುಂಡ ನೋವು-ನಲಿವು, ಪ್ರೀತಿ-ಪ್ರಣಯ, ಭಕ್ತಿ-ನೀತಿ ಮುಂತಾದ ಸಂಗತಿಗಳನ್ನು ಹಬ್ಬ-ಹರಿದಿನ, ಜಾತ್ರೆ-ಉತ್ಸವಗಳಲ್ಲಿ ಗೀತೆ, ನಾಟಕ, ಡೊಳ್ಳುಕುಣಿತ, ಗೀಗೀ ಪದ, ಲಾವಣಿ, ಒಗಟು, ಒಡಪು, ಗಾಧೆ, ವಿವಿಧ ಸಾಹಿತ್ಯ ಪ್ರಕಾರಗಳ ಮೂಲಕ ಅಭಿವ್ಯಕ್ತಪಡಿಸುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಜನಪದ ಕಲೆಗಳು ಜನರೊಂದಿಗೆ ಬೆರೆತು ಹಾಸುಹೊಕ್ಕಾಗಿವೆ. ಬಹಳ ಜನಪ್ರೀಯತೆ ಪಡೆದುಕೊಂಡಿವೆ. ಇಂತಹ ಕಲೆಗಳು ಇಂದು ಪಟ್ಟಣ, ಪೇಟೆ ಪ್ರದೇಶಗಳಲ್ಲಿ ಕಣ್ಣೇರೆಯಾಗುತ್ತಿರುವುದು ಅತ್ಯಂತ ಖೇದಕರ ಸಂಗತಿ. ಇಂತಹ ಅದ್ಭುತ ಕಲೆ ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗಬೇಕಾಗಿದೆ ಹಾಗಾಗಿ ಅವುಗಳನ್ನು ಬೆಳೆಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದರು.

ಈ ವಿಘ್ನೇಶ್ವರ ಸೇವಾ ಸಮಿತಿಯ ಅಧ್ಯಕ್ಷ ರವೀಂದ್ರರಡ್ಡಿ ಇನಾಮತಿ, ಪ್ರಕಾಶ ಬೆಂತೂರ, ಆರ್.ವಿ. ಬೆಳಹುಣಸಿ, ನಿಂಗಪ್ಪ ದೇಸಾಯಿ, ಸತೀಶ ಹೆಗಡಿಕಟ್ಟಿ, ರವಿ ಬೆಂತೂರ, ವಿವೇಕ ಲಕ್ಕಣ್ಣವರ, ಬಸಯ್ಯ ಹಿರೇಮಠ ಇದ್ದರು. ಎಂ.ಎಚ್. ಹುಲ್ಲೂರ ನಿರೂಪಿಸಿದರು. ಗೌಡಪ್ಪ ವೆಂ. ಬೊಮ್ಮಪ್ಪನವರ ವಂದಿಸಿದರು.