ಸಾರಾಂಶ
ಗಜೇಂದ್ರಗಡದಲ್ಲಿ ಸುಗಮ ಸಂಚಾರಕ್ಕಾಗಿ ಬೀದಿ ಬದಿ ವ್ಯಾಪಾರಸ್ಥರನ್ನು ಎಪಿಎಂಸಿ ಎದುರಿನ ಬಯಲು ಜಾಗೆಗೆ ಸ್ಥಳಾಂತರಿಸಲಾಗಿದ್ದು, ಮೂಲ ಸೌಕರ್ಯಗಳಿಲ್ಲದೆ ವ್ಯಾಪಾರಸ್ಥರು ಪರದಾಡುವಂತಾಗಿದೆ. ಮಳೆ, ಗಾಳಿ ಬಂದರೆ ವ್ಯಾಪಾರ ಸ್ಥಗಿತಗೊಳಿಸುವಂತಾಗಿದ್ದು, ಸಾಲ ಮಾಡಿ ಬದುಕು ನಡೆಸುವಂತಾಗಿದೆ
ಎಸ್.ಎಂ.ಸೈಯದ್
ಗಜೇಂದ್ರಗಡ : ಪಟ್ಟಣದ ಎಪಿಎಂಸಿ ಎದುರಿನ ಬಯಲು ಜಾಗದಲ್ಲಿ ವ್ಯಾಪಾರ, ವಹಿವಾಟು ನಡೆಸುತ್ತಿರುವ ನೂರಾರು ಬೀದಿ ಬದಿ ವ್ಯಾಪಾರಸ್ಥರು ಕನಿಷ್ಠ ಸೌಲಭ್ಯಗಳಿಲ್ಲದೇ ಪರದಾಡುತ್ತಿದ್ದಾರೆ.
ಪಟ್ಟಣದ ಜೋಡು ರಸ್ತೆ ಹಾಗೂ ಕಾಲಕಾಲೇಶ್ಚರ ವೃತ್ತ ಸೇರಿದಂತೆ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಸುಗಮ ಸಂಚಾರ ಹಿನ್ನೆಲೆ ಬೀದಿಬದಿ ವ್ಯಾಪಾರಕ್ಕೆ ಅಧಿಕಾರಿಗಳು ನಿರ್ಬಂಧ ಹೇರಿದ ಪರಿಣಾಮ ತರಕಾರಿ, ಹೂ-ಹಣ್ಣು ಸೇರಿ ಬೀದಿ ಬದಿ ವ್ಯಾಪಾರಿಗಳು ರೋಣ ರಸ್ತೆಯ ಎಪಿಎಂಸಿ ಎದುರಿನ ಬಯಲು ಜಾಗೆಯಲ್ಲಿ ವ್ಯಾಪಾರ, ವಹಿವಾಟು ನಡೆಸುತ್ತಿದ್ದಾರೆ. ಮಳೆ, ಜೋರಾದ ಗಾಳಿ ಬೀಸಿದರೆ ಮಾರಾಟಗಾರರ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆಯೇ ಗ್ಯಾರಂಟಿ.
ಜಿಲ್ಲೆಯ ಪ್ರಮುಖ ಪಟ್ಟಣ ಗಜೇಂದ್ರಗಡದ ರೋಣ, ಕುಷ್ಟಗಿ, ಜೋಡು ರಸ್ತೆ ಹಾಗೂ ಕೆಕೆ ವೃತ್ತದಲ್ಲಿ ರಸ್ತೆ ಅತಿಕ್ರಮಣದಿಂದ ಸುಗಮ ಸಂಚಾರ ಎಂಬುದು ಕಷ್ಟಸಾಧ್ಯ ಎಂಬಂತಾಗಿತ್ತು. ಪಟ್ಟಣದಲ್ಲಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಸಾರ್ವಜನಿಕರು ಮನವಿ ಜತೆ ಮೌಖಿಕವಾಗಿ ವಿನಂತಿ ಮಾಡಿಕೊಂಡಿದ್ದರು. ಮೇಲಾಧಿಕಾರಿಗಳ ಸೂಚನೆ ಮೇರೆಗೆ ಪೊಲೀಸ್, ಪುರಸಭೆ ಅಧಿಕಾರಿಗಳು ಪಟ್ಟಣದ ಜೋಡು ರಸ್ತೆ, ಕೆಕೆ ವೃತ್ತ ಸೇರಿ ಪ್ರಮುಖ ರಸ್ತೆ, ವೃತ್ತಗಳಲ್ಲಿ ಬೀದಿ ಬದಿ ವ್ಯಾಪಾರಕ್ಕೆ ನಿರ್ಬಂಧ ಹೇರಿದ್ದಾರೆ.
ಸಾಲ ತೀರಿಸಲು ಹರಸಾಹಸ: ಪಟ್ಟಣ ತಾಲೂಕು ಕೇಂದ್ರವಾಗಿದ್ದು, ಪಟ್ಟಣ ಸೇರಿದಂತೆ ಸುತ್ತಲಿನ ಹಾಗೂ ನೆರೆಯ ತಾಲೂಕಿನ ೨೫ಕ್ಕೂ ಅಧಿಕ ಗ್ರಾಮಗಳ ರೈತರು ಹಾಗೂ ಗ್ರಾಮಸ್ಥರು ಪಟ್ಟಣದಲ್ಲಿ ತರಕಾರಿ, ಹೂ ಸೇರಿದಂತೆ ಇತರ ಅಗತ್ಯ ಸಾಮಗ್ರಿಗಳ ವ್ಯಾಪಾರ ವಹಿವಾಟಿಗಾಗಿ ಪಟ್ಟಣವನ್ನು ನೆಚ್ಚಿಕೊಂಡಿದ್ದಾರೆ.
ಆದರೆ ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಿಂದ ಆಗಮಿಸುವ ರೈತರು, ಗ್ರಾಮಸ್ಥರು ಮತ್ತು ಸಾರ್ವಜನಿಕರಿಗೆ ಎಪಿಎಂಸಿ ಎದುರಿನ ಜಾಗೆಯಲ್ಲಿ ನೀರು, ನೆರಳು ಸೇರಿ ಕನಿಷ್ಠ ಮೂಲ ಸೌಲಭ್ಯ ಒದಗಿಸಿಲ್ಲ. ಬೀದಿ ಬದಿ ವ್ಯಾಪಾರ ನೆಚ್ಚಿಕೊಂಡು ಬ್ಯಾಂಕ್ ಹಾಗೂ ಸ್ವಸಹಾಯದಿಂದ ತೆಗೆದುಕೊಂಡ ಸಾಲ ತೀರಿಸಲು ಮತ್ತೆ ಸಾಲ ಮಾಡುವ ದುಸ್ಥಿತಿ ನಿರ್ಮಾಣವಾಗಿದೆ. ಆದರೆ ವ್ಯಾಪಾರ ಅಷ್ಟಕಷ್ಟೆ ಎನ್ನುವ ದಿನಗಳಲ್ಲಿ ಮಳೆಯಿಂದ ಅರ್ಧಕ್ಕೆ ಅರ್ಧ ತರಕಾರಿ ನೀರು ಪಾಲಾಗುತ್ತಿದೆ.
ಕೆಸರಲ್ಲಿ ವ್ಯಾಪಾರ: ನೂರಕ್ಕೂ ಅಧಿಕ ಬೀದಿ ಬದಿ ವ್ಯಾಪಾರಿಗಳಿಗೆ ಸೂಕ್ತ ಜಾಗ, ನೀರು ಹಾಗೂ ನೆರಳಿನ ವ್ಯವಸ್ಥೆಯಿಲ್ಲ. ಬೀದಿ ಬದಿ ವ್ಯಾಪಾರಿಗಳ ನೈಸರ್ಗಿಕ ಕರೆಗಳಿಗೆ ಸೂಕ್ತ ಜಾಗವು ಇಲ್ಲದ್ದೂ ಸ್ವಚ್ಛ ಭಾರತ ಯೋಜನೆ ಅಣಕಿಸುವಂತಾಗಿದೆ. ಪ್ರತಿದಿನ ಸಂಜೆ ಉಳಿಯುವ ತರಕಾರಿ ಹಾಗೂ ಬಾಡಿದ ಹೂ, ಹಣ್ಣುಗಳನ್ನು ಎಲ್ಲೆಂದರಲ್ಲಿ ಎಸೆಯಲಾಗುತ್ತಿದೆ. ಪರಿಣಾಮ ಸಂಗ್ರಹವಾಗುತ್ತಿರುವ ಗಲೀಜು ಹಾಗೂ ಕೊಳಚೆ ನೀರು ಡೆಂಘೀ, ಮಲೇರಿಯಾ ಸೇರಿದಂತೆ ಇತರ ಸಾಂಕ್ರಾಮಿಕ ರೋಗಗಳ ಉತ್ಪತ್ತಿಗೆ ಕಾರಣವಾಗುವ ಮುನ್ನವೇ ಆಡಳಿತ ಎಚ್ಚೆತ್ತುಕೊಳ್ಳಬೇಕಿದೆ.
ಮೊದಲು ಎಲ್ಲ ತೆಗೆದು ₹200 - 300 ಉಳಿಯುತಿತ್ತು. ಎಪಿಎಂಸಿ ಎದುರಿನ ಜಾಗೆಯಲ್ಲಿ ಬಂದ ದಿನದಿಂದ ವ್ಯಾಪಾರ ಅಷ್ಟಕಷ್ಟೆ ಎಂಬಂತಾಗಿದೆ. ಮಕ್ಕಳಿಗೆ ಪೆನ್, ನೋಟ್ ಬುಕ್ ಕೊಡಿಸಲು ಸಹ ಆಗುತ್ತಿಲ್ಲ ಎಂದು ಸಿಹಿ ತಿನಿಸು, ಸ್ಟೇಷನರಿ ವ್ಯಾಪಾರಿಗಳು ತಿಳಿಸಿದ್ದಾರೆ.
ಪಟ್ಟಣದಲ್ಲಿ ಎಪಿಎಂಸಿ ಎದುರಿನ ಜಾಗೆಯಲ್ಲಿ ವ್ಯಾಪಾರಕ್ಕಾಗಿ ತಂದಿದ್ದ ಬದನೆಕಾಯಿ, ಟೋಮ್ಯಾಟೊ, ಮೆಣಸಿನಕಾಯಿ ನೀರು ಪಾಲಾಗಿದೆ. ನೀರು ಇಲ್ಲದಿದ್ದರೂ ಪರವಾಗಿಲ್ಲ ನೆರಳಾದರೂ ಮಾಡಿ, ಪುಣ್ಯಾ ಕಟ್ಕೊಳ್ಳಿ ಎಂದು ತರಕಾರಿ ವ್ಯಾಪಾರಿಗಳು ಹೇಳಿದರು.