ಸಾರಾಂಶ
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಪ್ರತಿ ಸಂದರ್ಭದಲ್ಲಿಯೂ ಜನರಲ್ಲಿ ಮತೀಯ ಭಾವನೆ ಕೆರಳಿಸಿ, ಉದ್ರೇಕಗೊಳ್ಳುವಂತೆ ಮಾಡಿ ಕೋಮು ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ ಎಂದು ಉತ್ತರ ಕನ್ನಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ಶಿರಸಿ: ಕಾಂಗ್ರೆಸ್ ಕಳೆದ ಒಂದು ವರ್ಷದಿಂದ ಮಹಿಳೆಯರಿಗೆ ಗ್ಯಾರಂಟಿ ನೀಡಿದ್ದೇವೆ ಎಂದು ಹೇಳುತ್ತಿದ್ದು, ರಾಜ್ಯದ ಮಹಿಳೆಯರ ಜೀವಕ್ಕೆ ಗ್ಯಾರಂಟಿ ಇಲ್ಲದ ದುಸ್ಥಿತಿಗೆ ಬಂದಿರುವುದು ಆಘಾತಕಾರಿ ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಪ್ರತಿ ಸಂದರ್ಭದಲ್ಲಿಯೂ ಜನರಲ್ಲಿ ಮತೀಯ ಭಾವನೆ ಕೆರಳಿಸಿ, ಉದ್ರೇಕಗೊಳ್ಳುವಂತೆ ಮಾಡಿ ಕೋಮು ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ. ಮತಗಳಿಕೆ ಮತ್ತು ಅಧಿಕಾರದ ಆಸೆಯ ಮೂಲ ಉದ್ದೇಶದಿಂದ ಹಿಂದೂ ಸಮಾಜವನ್ನು ಬಲಿ ಕೊಡುವ ಕೆಲಸ ಕಾಂಗ್ರೆಸ್ ಮಾಡುತ್ತಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರನ್ನೂ ಸಮನಾಗಿ ನೋಡುವುದನ್ನು ಬಿಟ್ಟು ಓಲೈಕೆಯ ರಾಜಕಾರಣಕ್ಕೆ ಬಹುಸಂಖ್ಯಾತರ ಭಾವನೆಯನ್ನು ಧಿಕ್ಕರಿಸುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಬರ್ಬರ ಹತ್ಯೆ ಖಂಡಿಸುತ್ತೇನೆ. ಅಮಾನವೀಯ ಹೇಯ ಕೃತ್ಯವನ್ನು ಹಿಂದೂ ಸಮಾಜ ಒಗ್ಗಟ್ಟಾಗಿ ವಿರೋಧಿಸಬೇಕಿದೆ. ಅವರ ಕುಟುಂಬದ ಜತೆ ಬಿಜೆಪಿ ಸದಾ ನಿಲ್ಲಲಿದೆ. ಅವರ ಕುಟುಂಬಕ್ಕೆ ನ್ಯಾಯ ಒದಗಿಸಲು ಬಿಜೆಪಿ ಬದ್ಧವಾಗಿದೆ ಎಂದು ಬಿಜೆಪಿ ಲೋಕಸಭಾ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಈ ವೇಳೆ ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ ಭಟ್ಟ, ಪ್ರಮುಖರಾದ ಆರ್.ವಿ. ಹೆಗಡೆ, ರವಿ ಹೆಗಡೆ ಹಳದೋಟ, ಅಭಿರಾಮ ಹೆಗಡೆ, ಗ್ರಾಮೀಣ ಘಟಕದ ಅಧ್ಯಕ್ಷೆ ಉಷಾ ಹೆಗಡೆ ಮತ್ತಿತರರು ಇದ್ದರು.ಕಾಂಗ್ರೆಸ್ಸಿಗೆ ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ
೫೦ ಸ್ಥಾನ ಗೆಲ್ಲುವ ಯೋಗ್ಯತೆ ಇಲ್ಲದ ಕಾಂಗ್ರೆಸ್ಸಿನವರು ೪೦೦ಕ್ಕೂ ಹೆಚ್ಚು ಸ್ಥಾನ ಗೆದ್ದು ಕೇಂದ್ರದಲ್ಲಿ ಮತ್ತೊಮ್ಮೆ ಸುಭದ್ರವಾದ ಸರ್ಕಾರ ರಚನೆ ಮಾಡುವ ಸಿದ್ದತೆಯಲ್ಲಿರುವ ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.ಶನಿವಾರ ಮುಂಡಗೋಡ ತಾಲೂಕಿನ ಮಳಗಿ, ಪಾಳಾ, ಚಿಗಳ್ಳಿ, ನಂದಿಕಟ್ಟಾ, ಹುನಗುಂದ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದರು. ದೇಶಕ್ಕೇನಾದರೂ ಒಳ್ಳೆಯದಾಗಬೇಕಾದರೆ ನರೇಂದ್ರ ಮೋದಿ ಅವರು ಅತಿ ಮುಖ್ಯ ಎಂಬುದನ್ನು ದೇಶದ ಜನತೆ ಅರಿತುಕೊಂಡಿದ್ದು, ಪ್ರತಿ ಚುನಾವಣೆಯಲ್ಲಿ ಮೋದಿ ಸರ್ಕಾರಕ್ಕೆ ಜನರ ಬೆಂಬಲ ಹೆಚ್ಚುತ್ತ ಸಾಗಿದೆ. ಮೋದಿ ಶಕ್ತಿಯನ್ನು ಹೆಚ್ಚಿಸಲು ಜೆಡಿಎಸ್ ಕೂಡ ಮೈತ್ರಿ ಮಾಡಿಕೊಂಡಿದೆ ಎಂದು ಹೇಳಿದರು.ನೇಹಾ ಹತ್ಯೆಗೆ ಖಂಡನೆ: ನೇಹಾ ಹಿರೇಮಠ ಹತ್ಯೆ ಇಡೀ ನಾಗರಿಕ ಸಮಾಜವೇ ಖಂಡಿಸುವಂತಹ ಘಟನೆ. ಇದನ್ನು ಸಹಿಸುವ ಮನಸ್ಥಿತಿ ನಮ್ಮದಾಗಬಾರದು. ನಾವು ಕೂಡ ಸ್ವಾಭಿಮಾನ, ರಾಷ್ಟ್ರಾಭಿಮಾನ, ಧರ್ಮ ಸಂಸ್ಕೃತಿ ಬಗ್ಗೆ ಜಾಗೃತಿ ಮಾಡಿಕೊಳ್ಳಬೇಕಿದೆ. ಮಹಿಳೆಯರಿಗೆ ಗ್ಯಾರಂಟಿ ಕೊಟ್ಟಿದ್ದೇವೆ ಎನ್ನುವ ಕಾಂಗ್ರೆಸ್ ಇಂದು ಮಹಿಳೆಯರಿಗೇ ಗ್ಯಾರಂಟಿ ಇಲ್ಲದಂತಹ ಪರಿಸ್ಥಿತಿ ತಂದಿಟ್ಟಿದೆ. ಮತ ಗಳಿಕೆಗಾಗಿ ಹಿಂದೂಗಳ ಭಾವನೆಗಳನ್ನು ಧಿಕ್ಕರಿಸಿ, ಒಂದು ಕೋಮಿನ ತುಷ್ಟೀಕರಣಕ್ಕಾಗಿ ರಾಷ್ಟ್ರದ್ರೋಹಿ ಮನಸ್ಥಿತಿಯವರನ್ನು ಕಾಂಗ್ರೆಸ್ ಸರ್ಕಾರ ಬೆಂಬಲಿಸುತ್ತಿದೆ. ಎಸ್‌ಡಿಪಿಐ, ಪಿಎಫ್‌ಐನಂತಹ ಸಂಘಟನೆ ಮೇಲಿನ ಪ್ರಕರಣ ರದ್ದು ಮಾಡುವ ಮೂಲಕ ಅಪರಾಧಿಕರಣ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ ಎಂದರು.ಜಿಪಂ ಮಾಜಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ, ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ, ಚಂದ್ರು ಎಸಳೆ, ಶಿವಾಜಿ ನರ್ಸಾನಿ ಮುಂತಾದವರು ಉಪಸ್ಥಿತರಿದ್ದರು.