ತಾಯಿ ಸಂತೋಷವಾಗಿದ್ದರೆ ಆ ಮನೆ ಸಂತೋಷದಿಂದ ಕೂಡಿರುತ್ತದೆ, ಮನೆಗಳು ಸಂತೋಷವಾಗಿದ್ದರೆ ಊರು, ಊರಿನಿಂದ ರಾಜ್ಯ, ರಾಜ್ಯದಿಂದ ದೇಶ ಎಲ್ಲವೂ ಸಂತೋಷದಿಂದ ಕೂಡಿರುತ್ತದೆ. ಇಂದಿನ ಅನೇಕ ಸಮಸ್ಯೆಗಳಿಗೆ ಪೋಷಕರ ಒತ್ತಡದ ಜೀವನ, ಸಮಸ್ಯೆಗಳೇ ಕಾರಣ ಎಂದು ಸಂಪ್ರದಾಯ ಟ್ರಸ್ಟ್‌ ಸಹ ಸಂಸ್ಥಾಪಕ, ತರಬೇತುದಾರ ಡಿ.ಪಿ. ಚೇತನ್ ಅಭಿಪ್ರಾಯಪಟ್ಟಿದ್ದಾರೆ.

- ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯು 56ನೇ ವಾರ್ಷಿಕ ಸಂಭ್ರಮ । 3ನೇ ದಿನದ ಕಾರ್ಯಕ್ರಮ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ತಾಯಿ ಸಂತೋಷವಾಗಿದ್ದರೆ ಆ ಮನೆ ಸಂತೋಷದಿಂದ ಕೂಡಿರುತ್ತದೆ, ಮನೆಗಳು ಸಂತೋಷವಾಗಿದ್ದರೆ ಊರು, ಊರಿನಿಂದ ರಾಜ್ಯ, ರಾಜ್ಯದಿಂದ ದೇಶ ಎಲ್ಲವೂ ಸಂತೋಷದಿಂದ ಕೂಡಿರುತ್ತದೆ. ಇಂದಿನ ಅನೇಕ ಸಮಸ್ಯೆಗಳಿಗೆ ಪೋಷಕರ ಒತ್ತಡದ ಜೀವನ, ಸಮಸ್ಯೆಗಳೇ ಕಾರಣ ಎಂದು ಸಂಪ್ರದಾಯ ಟ್ರಸ್ಟ್‌ ಸಹ ಸಂಸ್ಥಾಪಕ, ತರಬೇತುದಾರ ಡಿ.ಪಿ. ಚೇತನ್ ಅಭಿಪ್ರಾಯಪಟ್ಟರು.

ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯು 56ನೇ ವಾರ್ಷಿಕ ಸಂಭ್ರಮದ ಪ್ರಯುಕ್ತ ಸೋಮವಾರ ಸಂಜೆ ನಡೆದ 3ನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪರೀಕ್ಷೆಯಲ್ಲಿ ಎಷ್ಟು ಅಂಕಗಳಿಸಬೇಕು ಎಂಬುದಕ್ಕಿಂತ ಅಷ್ಟು ಅಂಕ ಏಕೆ ಬೇಕು? ಅದನ್ನು ನಾನೇಕೆ ಮಾಡಬೇಕು ಎಂಬ ಉದ್ದೇಶದ ಸ್ಪಷ್ಟತೆಯಿದ್ದಾಗ ಮಾತ್ರ ಏನನ್ನಾದರೂ ಸಾಧಿಸಬಹುದು. ಏಕಾಗ್ರತೆಯಿಲ್ಲದೇ ಇರುವುದಕ್ಕಿಂತ ಸರಿಯಾದ ಸ್ಪಷ್ಟತೆ ಮತ್ತು ಧ್ಯೇಯ ಇಲ್ಲದೇ ಇರುವುದೇ ಇಂದಿನ ವಿದ್ಯಾರ್ಥಿಗಳ ಸಮಸ್ಯೆಗೆ ಕಾರಣ ಎಂದು ಮಕ್ಕಳಿಗೆ ಮಾರ್ಗದರ್ಶನ ನೀಡಿದರು.

ವಿದ್ಯಾಸಂಸ್ಥೆಯು ಕೊಡುವ ಡಾ. ಎಂ.ಎಸ್.ಎಸ್. ಪ್ರಶಸ್ತಿಯನ್ನು ರಾಷ್ಟ್ರಮಟ್ಟದ ಉತ್ತಮ ಶಿಕ್ಷಕಿ ಪುರಸ್ಕೃತೆ ವಾಗ್ದೇವಿ ಅವರಿಗೆ ಗೌರವಪೂರ್ವಕವಾಗಿ ಪ್ರದಾನ ಮಾಡಲಾಯಿತು. ತಮ್ಮನ್ನು ಗುರುತಿಸಿದ್ದಕ್ಕಾಗಿ ಕೃತಜ್ಞತೆಯ ಮಾತುಗಳನ್ನು ಹೇಳಿದ ಅವರು, ತಾವು ಈ ಹಿಂದೆ ಕಾರ್ಯನಿರ್ವಹಿಸಿದ ಶಾಲೆ ಆಡಳಿತ ಮಂಡಳಿಯವರ ಸಹಕಾರವಿಲ್ಲದಿದ್ದರೆ, ಕುಟುಂಬದ ಬೆಂಬಲವಿಲ್ಲದಿದ್ದರೆ ಈ ಸಾಧನೆ ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿಸಿದರು.

ವಿದ್ಯಾಸಂಸ್ಥೆ ಮುಖ್ಯಸ್ಥೆ ಜಸ್ಟಿನ್ ಡಿಸೌಜ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು. ಶ್ರೀ ಸಿದ್ಧಗಂಗಾ ಸ್ಕೂಲ್‌ನ ಸಿ.ಬಿ.ಎಸ್.ಇ. ವಿಭಾಗದ ಪ್ರಾಚಾರ್ಯೆ ಗಾಯತ್ರಿ ಚಿಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಸಿಬಿಎಸ್‌ಇ ವಿಭಾಗದ ಶಿಕ್ಷಕರಾದ ಎಸ್.ಆಶಾ, ಡಿ.ಹರಿಣಿ, ಫಾರುಕ್ ಉಸ್ಮಾನಿ ಮುಖ್ಯ ಅತಿಥಿಗಳಾಗಿದ್ದರು.

ಸಿದ್ದಗಂಗಾ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕಿ ಕೆ.ಎಸ್. ರೇಖಾರಾಣಿ ಸ್ವಾಗತಿಸಿ, ವಿದ್ಯಾರ್ಥಿನಿ ಶ್ರೀವಿ ಮಠದ್ ಅತಿಥಿಗಳ ಪರಿಚಯ ಮಾಡಿಕೊಟ್ಟರು. 2024-25ನೇ ಸಾಲಿನಲ್ಲಿ ಸಿ.ಬಿ.ಎಸ್.ಇ. ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

- - -

(ಕೋಟ್‌) ತಮ್ಮ ಮಕ್ಕಳ ಅಂಕಗಳಿಕೆಯೇ ದೊಡ್ಡ ಸಾಧನೆ ಎಂಬ ಭ್ರಮೆಯಿಂದ ಪೋಷಕರು ಮೊದಲು ಹೊರಬರಬೇಕು. ಅಂಕ ಗಳಿಕೆಗಿಂತ ಮುಖ್ಯವಾಗಿ ಮಗು ದಿನನಿತ್ಯದ ಬದುಕಲ್ಲಿ ಹೊಂದಿರಬೇಕಾದ ಸುಮಾರು 100 ಕೌಶಲ್ಯಗಳಿವೆ. ಅವುಗಳನ್ನು ಮೊದಲು ಪೋಷಕರು ಅರಿತು ಮಕ್ಕಳನ್ನು ಬೆಳೆಸಬೇಕಾಗಿದೆ.

- ಡಿ.ಪಿ.ಚೇತನ್‌, ತರಬೇತುದಾರ.

- - -

-6ಕೆಡಿವಿಜಿ31:

ದಾವಣಗೆರೆಯ ಸಿದ್ಧಗಂಗಾ ವಿದ್ಯಾಸಂಸ್ಥೆಯಿಂದ ನಡೆದ 56ನೇ ವಾರ್ಷಿಕ ಸಂಭ್ರಮದಲ್ಲಿ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕಿ ಪುರಸ್ಕೃತೆ ವಾಗ್ದೇವಿಗೆ ಡಾ. ಎಂ.ಎಸ್.ಎಸ್. ಪ್ರಶಸ್ತಿ ನೀಡಿ ಗೌರವಿಸಲಾಯಿತು.