ಸಂಪತ್ತನ್ನು ಗಳಿಸುವುದೇ ಬದುಕಾಗಬಾರದು

| Published : May 20 2025, 01:18 AM IST

ಸಾರಾಂಶ

ನಾನು ಎಂಬ ಅಹಂಕಾರ ಬಿಟ್ಟು, ನಾವು ಎಂಬ ಸಹಕಾರ ಮನೋಭಾವ ಬೆಳೆಸಿಕೊಂಡಾಗ ಮಾನವೀಯತೆಗೆ ಒಂದು ಸಾರ್ಥಕತೆ ಲಭಿಸುತ್ತದೆ

ಕನ್ನಡಪ್ರಭ ವಾರ್ತೆ ಬೆಳಗಾವಿ

ಬದುಕಿಗೆ ಸಂಪತ್ತು ಗಳಿಸಬೇಕು, ಸಂಪತ್ತನ್ನು ಗಳಿಸುವುದೇ ಬದುಕಾಗಬಾರದು. ನಾನು ಎಂಬ ಅಹಂಕಾರ ಬಿಟ್ಟು, ನಾವು ಎಂಬ ಸಹಕಾರ ಮನೋಭಾವ ಬೆಳೆಸಿಕೊಂಡಾಗ ಮಾನವೀಯತೆಗೆ ಒಂದು ಸಾರ್ಥಕತೆ ಲಭಿಸುತ್ತದೆ ಎಂದು ರಡ್ಡೇರಹಟ್ಟಿ ಸರ್ಕಾರಿ ಪ್ರೌಢಶಾಲೆಯ ಉಪನ್ಯಾಸಕರು, ಖ್ಯಾತ ಸಾಹಿತಿ ಡಾ.ಅರ್ಚನಾ ಅಥಣಿ ಹೇಳಿದರು.

ಸಿಂಗಪುರದ ಪ್ಲೂಮ್ ಸಭಾಂಗಣದಲ್ಲಿ ಗುರುವಾರ ನಡೆದ 49ನೇ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಮ್ಮದೇ ರಚಿತ ಅರಾವಳಿ ನರ್ಮದೆಯರ ನಾಡಿನಲ್ಲಿ ಪ್ರವಾಸ ಕಥನ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಭಾರತೀಯರಾದ ನಾವು ಪಾಶ್ವಿಮಾತ್ಯರ ಅನುಕರಣೆ ತ್ಯಜಿಸಿ ನಮ್ಮ ಭಾರತೀಯ ಸನಾತನ ಸಂಸ್ಕಾರ, ಸಂಸ್ಕೃತಿ ಬೆಳೆಸಿಕೊಂಡು ಪ್ರಾಚೀನ ಮಹತ್ವವನ್ನು ಅಘಾದವಾಗಿ ಬೆಳೆಸುವ ಕಾರ್ಯ ಇಂದಿನ ಯುವ ಜನಾಂಗ ಮಾಡಬೇಕಿದೆ ಎಂದು ತಿಳಿಸಿದರು.

ಪ್ರತಿಯೊಬ್ಬರೂ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ನಾವು ಇಂದು ತಲೆ ತಗ್ಗಿಸಿ ಪುಸ್ತಕ ಓದಿದರೇ ಅದು ಮುಂದೊಂದು ದಿನ ನಮ್ಮನ್ನು ಸಮಾಜದಲ್ಲಿ ತಲೆ ಎತ್ತಿ ಸ್ವಾಭಿಮಾನದಿಂದ ಬದುಕಲು ಪ್ರೇರೆಪಿಸುತ್ತದೆ ಎಂಬ ಕಟು ಸತ್ಯವನ್ನು ಪ್ರತಿಯೊಬ್ಬರು ಅರಿಯಬೇಕು ಎಂದರು.

ಇಂದು ಪುಸ್ತಕ ಬರೆಯುವವರು ಬಹಳಷ್ಟಿದ್ದಾರೆ. ಆದರೆ, ಓದುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಎಲ್ಲರೂ ಮೊಬೈಲ್‌ನ ದಾಸರಾಗಿದ್ದು ಓದುವ ಹವ್ಯಾಸ ಮರೆಯಾಗುತ್ತಿದೆ. ಇಂದಿನ ಯುವ ಪೀಳಿಗೆಗೆ ಪುಸ್ತಕ ಎಂದರೇನು ಎಂಬುವುದೇ ತಿಳಿದಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಮಕ್ಕಳಲ್ಲಿ ಓದುವ ಆಸಕ್ತಿಯನ್ನು ಬೆಳೆಸುವವರೇ ಇಲ್ಲದಂತಾಗಿದೆ. ಪುಸ್ತಕಗಳು ಬದುಕಿಗೆ ಬೆಳಕು ನೀಡುತ್ತವೆ ಎಂಬ ಸತ್ಯವನ್ನು ಹೇಳಬೇಕು. ಪುಸ್ತಕದ ಮಹತ್ವ ಇನ್ನೂ ಅನೇಕರಿಗೆ ಅರಿವಾಗಿಲ್ಲ. ಓದುವುದು ಇಂದು ಧ್ಯಾನದಂತೆ, ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಕಲ್ಪನಾ ಶಕ್ತಿಯನ್ನು ಬೆಳೆಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಹಿಂದೆ ಸರಿಯುತ್ತಿದ್ದೇವೆ ಎಂಬುವುದೇ ದುಃಖದ ಸಂಗತಿ. ಆದರೆ, ಉತ್ತಮ ಕಥಾ ಪುಸ್ತಕಗಳು ಸರ್ವಕಾಲಕ್ಕೂ ಪೂಜ್ಯನೀಯ ಮತ್ತು ಓದುಗರನ್ನು ಸೆಳೆಯುತ್ತವೆ ಎಂಬ ಅಭಿಪ್ರಾಯಪಟ್ಟರು.

ಸಮಾರಂಭದಲ್ಲಿ ಮಂಗಳೂರಿನ ಅಂತಾರಾಷ್ಟ್ರೀಯ ಸಮ್ಮೇಳನದ ಆಯೋಜನಕಾರದ ಕೆ.ಪಿ.ಮಂಜುನಾಥ ಸಾಗರ, ಅನೀತಾ ಜಗದೀಶ, ಡಾ.ದೊಡ್ಡಪ್ಪ ಪೂಜಾರಿ, ಶ್ರೀನಿವಾಸ ನಾಯಕ, ನಾಗರಾಜ.ಕೆ ಸೇರಿದಂತೆ ಅನೇಕರು ಅತಿಥಿಗಳಾಗಿ ಆಗಮಿಸಿ ಕನ್ನಡ ನಾಡು, ನುಡಿ, ಸಂಸ್ಕೃತಿಯ ಬಗ್ಗೆ ಮಾತನಾಡಿದರು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಯಿತು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಯಾವಾಗ ನಾವು ಓದುವ ಹವ್ಯಾಸ ರೂಢಿಸಿಕೊಳ್ಳುತ್ತೇವೆಯೋ ಆಗ ನಮಗೆ ಶಾಂತಿ ದೊರೆಯುತ್ತದೆ. ಓದುವುದರಿಂದ ಜ್ಞಾನ ಮತ್ತು ಸಂಸ್ಕೃತಿ, ಸಂಸ್ಕಾರ ದೊರೆಯುತ್ತದೆ. ಅದನ್ನು ನಾವು ಇತರರಿಗೂ ನೀಡಲು ಸಾಧ್ಯವಾಗುತ್ತದೆ. ಕೃತಿಗೆ ಮೌಲ್ಯ ಬರಬೇಕಾದರೇ ಅದನ್ನು ಓದಬೇಕು. ಕೃತಿಯಲ್ಲಿರುವ ಮೌಲ್ಯಯುತ ಮಾತುಗಳು ಹೇಗೆ ಬಿಂಬಿತವಾಗುತ್ತವೆ ಎಂದು ಕೃತಿಗಳಿಂದ ತಿಳಿಯುತ್ತದೆ.

ಡಾ.ಅರ್ಚನಾ ಅಥಣಿ, ಸಾಹಿತಿ.