ಸಾರಾಂಶ
ಡಂಬಳ: ಶಾಲೆ ಬಿಟ್ಟ ವಿದ್ಯಾರ್ಥಿನಿಯರಲ್ಲಿ ಬದುಕುವ ಕಲೆ, ಕೌಶಲ್ಯ, ಮೌಲ್ಯಗಳು, ನಡೆನುಡಿ, ಸಂಸ್ಕೃತಿ ಸಂಸ್ಕಾರ ಉತ್ತಮ ಶಿಕ್ಷಣ ನೀಡುವುದರ ಮೂಲಕ ಕಸ್ತೂರಿಬಾ ಗಾಂಧಿ ಬಾಲಿಕಾ ವಿದ್ಯಾಲಯ ಸರಿಯಾಗಿ ವಿದ್ಯಾರ್ಥಿನಿಯರಿಗೆ ಸರ್ಕಾರದ ಯೋಜಗಳನ್ನು ತಲುಪಿಸುತ್ತಿರುವುದು ಪ್ರಶಂಸನೀಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಮ್. ಪಡ್ನೇಸ್ ಹೇಳಿದರು.
ಡಂಬಳ ಗ್ರಾಮದ ಕಸ್ತೂರಿಬಾ ಗಾಂಧಿ ಬಾಲಿಕಾ ವಿದ್ಯಾಲಯದ 8ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಗುಣಮಟ್ಟದ ಶಿಕ್ಷಣ ಪಡೆಯುವುದರ ಜತೆಗೆ ಜೀವನದಲ್ಲಿ ಯಶಸ್ಸು ಪಡೆಯಲು ಬೇಕಾದ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಬೇಕು ಎಂದು ಹೇಳಿದರು.ನಿವೃತ್ತ ಶಿಕ್ಷಕರಾದ ಕೆ.ಎ. ಬಳಗಾರ ಅವರು ಮಾತನಾಡಿ, ವಿದ್ಯಾರ್ಥಿಗಳು ನಿರ್ದಿಷ್ಟವಾದ ಗುರಿಹೊಂದಿ ಅದರ ಸಾಧನೆಗೆ ನಿರಂತರವಾಗಿ ಪರಿಶ್ರಮ ವಹಿಸಿದರೆ ಉನ್ನತ ಸ್ಥಾನ ನಿಮ್ಮದಾಗಲಿದೆ. ವಿದ್ಯಾರ್ಥಿನಿಯರು ಉತ್ತಮ ಗುರಿಯನ್ನು ಹೊಂದಲು ಗುರುಗಳ ಜೊತೆಗೆ ಪಾಲಕ ಪೋಷಕರ ಜವಾಬ್ದಾರಿ ಇದ್ದು, ವಿದ್ಯಾರ್ಥಿನಿಯರು ಇಟ್ಟ ಗುರಿಯನ್ನು ಮುಟ್ಟಲು ಪಾಲಕರ ಸಹಕಾರ ಇದ್ದಾಗ ಮಾತ್ರ ಗುರಿ ಮುಟ್ಟಲು ಸಾಧ್ಯ. ಆ ಹಿನ್ನೆಲೆಯಲ್ಲಿ ಅವರಿಗೆ ಉನ್ನತ ಮಟ್ಟದ ಶಿಕ್ಷಣ ಕೊಡಿಸಲು ಪಾಲಕರು ಮುಂದಾಗಬೇಕು ಎಂದು ಹೇಳಿದರು.
ಕ್ಷೇತ್ರ ಸಮನ್ವಯ ಅಧಿಕಾರಿ ಗಂಗಾಧರ ಅಣ್ಣಿಗೇರಿ ಮಾತನಾಡಿ, ಮುಂದಿನ ಓದಿನ ಅಭ್ಯಾಸಕ್ಕೆ ತೆರಳುತ್ತಿರುವ ನೀವು ಈ ಶಾಲೆಯನ್ನು ಮರೆಯದಿರಿ ಎಂದು ಹೇಳಿದರು.ಮುಖ್ಯೋಪಾಧ್ಯಾಯಿನಿ ಎಸ್.ಬಿ. ಅಬ್ಬಿಗೇರಿ ಮಾತನಾಡಿ, ಜ್ಞಾನಕ್ಕೆ ವಿಶೇಷ ಸ್ಥಾನವಿದ್ದು, ನಿಮ್ಮ ಮುಂದಿನ ಜೀವನದ ಹಾದಿಯಲ್ಲಿ ವಿದ್ಯಾರ್ಥಿನಿಯರು ಉತ್ತಮ ಜ್ಞಾನ ಸಂಪಾದಿಸಿ ಉತ್ತಮ ಸಾಧನೆ ಮಾಡಿದರೆ ದೇಶದ ಸಂಪತ್ತಾಗುತ್ತದೆ. ಆ ಹಿನ್ನೆಲೆಯಲ್ಲಿ ತಂದೆ-ತಾಯಿ, ಗುರುಹಿರಿಯರ ಮಾರ್ಗದರ್ಶನದಡಿ ಜೀವನ ಯಶಸ್ವಿಯಾಗುತ್ತದೆ ಎಂದು ಹೇಳಿದರು.
ವಿದ್ಯಾರ್ಥಿನಿಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕ್ರೀಡಾ ಕೂಟ, ಭಾಷಣ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಚಟುವಟಿಕೆಗಳಲ್ಲಿ ಪ್ರಥಮ, ದ್ವಿತೀಯ, ತೃತಿಯ ಸ್ಥಾನ ಪಡೆದವರಿಗೆ ಪ್ರಶಸ್ತಿಗಳನ್ನು ನೀಡಲಾಯಿತು.ಕಾರ್ಯಕ್ರಮದಲ್ಲಿ ಎಸ್‍ಡಿಎಂಸಿ ಅಧ್ಯಕ್ಷೆ ಚೆನ್ನಮ್ಮ ಬಂಡಿವಡ್ಡರ, ಉಪಾಧ್ಯಕ್ಷೆ ಪ್ರಮೀಳಾ ಉದಂಡಿ, ಎಸ್‍ಡಿಎಂಸಿ ಸರ್ವಸದಸ್ಯರು, ಶಿಕ್ಷಕಿಯರಾದ ಬಿ.ವಿ. ತುರ್ಕಾಣಿ, ಎಂ.ಎಸ್. ಅಡೂರ, ಯು.ಎಸ್. ಬಾವಿಕಟ್ಟಿ, ಎಸ್.ಎ. ತಳವಾರ, ಎಸ್.ಎಚ್. ಡೋಣಿ, ಎಸ್.ಟಿ. ಕಳಕನ್ನವರ, ಬಹುಮಾನಗಳ ದೇಣಿಗೆ ನೀಡಿದ ನಿವೃತ್ತ ತಾಪಂ ಅಧಿಕಾರಿ ದೊಡ್ಡಸಿದ್ದಪ್ಪ ಡೋಣಿ, ವಿವಿಧ ಗ್ರಾಮಗಳಿಂದ ಬಂದ ಪಾಲಕರು, ವಿದ್ಯಾರ್ಥಿನಿಯರು ಇದ್ದರು.