ವಿಧ್ವಂಸಕ ಕೃತ್ಯಕ್ಕೆ ಸ್ಫೋಟಕ ವಸ್ತು ಪೂರೈಸಿದ ಭಟ್ಕಳದ ಬಾಂಬ್‌ ಡಾಕ್ಟರ್‌ಗೆ ಜೀವಾವಧಿ

| Published : Dec 26 2024, 01:01 AM IST / Updated: Dec 26 2024, 08:01 AM IST

Prisoner in Jail
ವಿಧ್ವಂಸಕ ಕೃತ್ಯಕ್ಕೆ ಸ್ಫೋಟಕ ವಸ್ತು ಪೂರೈಸಿದ ಭಟ್ಕಳದ ಬಾಂಬ್‌ ಡಾಕ್ಟರ್‌ಗೆ ಜೀವಾವಧಿ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಸ್ಫೋಟಕ ವಸ್ತು ಪೂರೈಸಿದ ಪ್ರಕರಣ ಸಂಬಂಧ ಇಂಡಿಯನ್‌ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಶಂಕಿತ ಉಗ್ರ ಹಾಗೂ ಹೋಮಿಯೋಪತಿ ವೈದ್ಯನಿಗೆ ಜೀವಾವಧಿ ಹಾಗೂ ಆತನ ಇಬ್ಬರು ಸಹಚರರಿಗೆ 10 ವರ್ಷಗಳ ಶಿಕ್ಷೆ ವಿಧಿಸಿ ಎನ್‌ಐಎ ವಿಶೇಷ ನ್ಯಾಯಾಲಯ ಆದೇಶಿಸಿದೆ.

  ಬೆಂಗಳೂರು :  ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಸ್ಫೋಟಕ ವಸ್ತು ಪೂರೈಸಿದ ಪ್ರಕರಣ ಸಂಬಂಧ ಇಂಡಿಯನ್‌ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಶಂಕಿತ ಉಗ್ರ ಹಾಗೂ ಹೋಮಿಯೋಪತಿ ವೈದ್ಯನಿಗೆ ಜೀವಾವಧಿ ಹಾಗೂ ಆತನ ಇಬ್ಬರು ಸಹಚರರಿಗೆ 10 ವರ್ಷಗಳ ಶಿಕ್ಷೆ ವಿಧಿಸಿ ಎನ್‌ಐಎ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಉತ್ತರ ಕನ್ನಡ ಜಿಲ್ಲೆ ಭಟ್ಕಳದ ವೈದ್ಯ ಡಾ.ಸೈಯದ್ ಇಸ್ಮಾಯಿಲ್‌ ಅಫಾಕ್‌ಗೆ ಜೀವಾವಧಿ ಹಾಗೂ ಆತನ ಸಹಚರರಾದ ಅಬ್ದುಲ್‌ ಸುಬೂರ್‌ ಮತ್ತು ಸದ್ದಾಂ ಹುಸೇನ್‌ಗೆ 10 ವರ್ಷಗಳ ಶಿಕ್ಷೆಯಾಗಿದೆ. ಈ ಪ್ರಕರಣದಲ್ಲಿ ಮೂವರು ಶಂಕಿತ ಉಗ್ರರನ್ನು ದೋಷಿಗಳೆಂದು ತೀರ್ಪು ಪ್ರಕಟಿಸಿದ್ದ ನ್ಯಾಯಾಲಯ ಶಿಕ್ಷೆ ಪ್ರಮಾಣ ಆದೇಶ ಕಾಯ್ದಿರಿಸಿತ್ತು.

2015ರಲ್ಲಿ ಬೆಂಗಳೂರಿನ ಪುಲಿಕೇಶಿ ನಗರ ಹಾಗೂ ಭಟ್ಕಳ ಪಟ್ಟಣದಲ್ಲಿ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿ ಐಎಂ ಶಂಕಿತ ಉಗ್ರರನ್ನು ಬಂಧಿಸಿ 100 ಜಿಲೇಟಿನ್‌ ಕಡ್ಡಿಗಳು ಸೇರಿದಂತೆ ಸ್ಪೋಟಕ ವಸ್ತಗಳನ್ನು ಸಿಸಿಬಿ ಜಪ್ತಿ ಮಾಡಿತ್ತು. ಈ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಅಂದಿನ ಸಿಸಿಬಿ ಇನ್ಸ್‌ಪೆಕ್ಟರ್‌ (ಈಗಿನ ಹಾಸನ ಜಿಲ್ಲಾ ಹೆಚ್ಚುವರಿ ಎಸ್ಪಿ) ಎಂ.ಕೆ.ತಮ್ಮಯ್ಯ ಸಲ್ಲಿಸಿದ್ದರು. 9 ವರ್ಷಗಳ ಸುದೀರ್ಘವಾಗಿ ವಿಚಾರಣೆ ನಡೆಸಿ ನ್ಯಾಯಾಲಯವು ತೀರ್ಪ ನೀಡಿದೆ.

2014ರ ಡಿಸೆಂಬರ್‌ 30ರಂದು ಎಂ.ಜಿ.ರಸ್ತೆಯ ಚರ್ಚ್‌ ಸ್ಟ್ರೀಟ್‌ ಹೋಟೆಲ್‌ ಬಳಿ ಬಾಂಬ್ ಸ್ಫೋಟವಾಗಿತ್ತು. ಈ ವಿಧ್ವಂಸಕ ಕೃತ್ಯದ ಹಿಂದೆ ಭಟ್ಕಳ ನಂಟಿನ ಕುರಿತು ಸಿಸಿಬಿ ಪೊಲೀಸರಿಗೆ ಮಾಹಿತಿ ಸಿಕ್ಕಿತು. ಈ ಸುಳಿವು ಆಧರಿಸಿ ಸಿಸಿಬಿ, 2015ರ ಜನವರಿ 9 ರಂದು ಬೆಂಗಳೂರಿನ ಪುಲಿಕೇಶಿ ನಗರದಲ್ಲಿ ವೈದ್ಯ ಅಫಾಕ್, ಅಬ್ದುಲ್ ಸುಬೂರ್‌ ಹಾಗೂ ಭಟ್ಕಳದಲ್ಲಿ ಸದ್ದಾಂ ಹುಸೇನ್‌ ನನ್ನು ಬಂಧಿಸಿತ್ತು. ಬಳಿಕ ಸಿಸಿಬಿ ತನಿಖೆಯಲ್ಲಿ ದೇಶದ ವಿವಿಧೆಡೆ ಎಂಐ ಸಂಘಟನೆ ನಡೆಸಿದ್ದ ವಿಧ್ವಂಸಕ ಕೃತ್ಯಗಳಿಗೆ ಸ್ಫೋಟಕ ವಸ್ತುಗಳನ್ನು ಶಂಕಿತ ಉಗ್ರ ವೈದ್ಯ ಅಫಾಕ್ ತಂಡ ಪೂರೈಸಿದ್ದ ಮಹತ್ವದ ಸಂಗತಿ ಬಯಲಾಗಿತ್ತು.