ಸಾರಾಂಶ
- ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಶಾಸಕ ಬಸವಂತಪ್ಪ - - - ಕನ್ನಡಪ್ರಭ ವಾರ್ತೆ ಚನ್ನಗಿರಿ
ಜನಪದ ಕಲೆಗಳಲ್ಲಿಯೇ ಶ್ರೇಷ್ಠವಾದ ಕುಸ್ತಿ ಕಲೆಯನ್ನು ಉಳಿಸಿ, ಬೆಳೆಸಬೇಕಾದ ಜವಾಬ್ದಾರಿ ಇಂದಿನ ಯುವಜನಾಂಗದ ಮೇಲಿದೆ. ಕುಸ್ತಿಯಂತಹ ದೇಶಿ ಕ್ರೀಡೆ ಮರೆಯಾಗುತ್ತಿದ್ದು, ಅದರ ಬದಲಿಗೆ ಆರ್ಕೇಸ್ಟ್ರಾ, ಕುಣಿತ, ನೆಗೆತದಂತಹ ಮನೋರಂಜನೆಗಳಿಗೆ ಜನ ಮಾರುಹೋಗುತ್ತಿದ್ದಾರೆ ಎಂದು ಪೈಲ್ವಾನ್ ಸಂಗಪ್ಪ ಪುತ್ರರೂ ಆಗಿರುವ ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್.ಬಸವಂತಪ್ಪ ಅಭಿಪ್ರಾಯಪಟ್ಟರು.ಅವರು ಬುಧುವಾರ ಸಂಜೆ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಶ್ರೀ ಕುಕ್ಕುವಾಡ ಅಂಬಾ ಭವಾನಿ ದೇವರ ಜಾತ್ರೆ ಮತ್ತು ಮಹಾಕಾರ್ತಿಕೋತ್ಸವ ನಿಮಿತ್ತ ಬುಧುವಾರದಿಂದ 3 ದಿನಗಳ ಕಾಲ ನಡೆಯಲಿರುವ ರಾಜ್ಯಮಟ್ಟದ ಬಯಲು ಜಂಗೀ ಕುಸ್ತಿ ಅಖಾಡದ ಪೂಜೆ ಮತ್ತು ಪಂದ್ಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಇಲ್ಲಿ ನಿರ್ಮಿಸಿರುವ ಕುಸ್ತಿ ಅಖಾಡ ದಾವಣಗೆರೆಯ ದುಗ್ಗಮ್ಮನ ಜಾತ್ರೆಯಲ್ಲಿಯೂ ಮಾಡಿರಲಿಲ್ಲ. ಅಂತಹ ವೈಭವವಾಗಿ ಕುಸ್ತಿ ಅಖಾಡವನ್ನು ನಿರ್ಮಿಸಲಾಗಿದೆ. ತಂದೆ ಸಂಗಪ್ಪ ಅವರು ಸಹಾ ಕುಸ್ತಿ ಪೈಲ್ವಾನರಾಗಿದ್ದರು. ಅವರು ಕೂಡ ಕುಸ್ತಿಯ ಪಂದ್ಯಗಳಲ್ಲಿ ಭಾಗವಹಿಸುತ್ತಿದ್ದರು ಎಂದು ತಂದೆಯ ಸಾಧನೆ ಬಗ್ಗೆ ನೆನಪಿಸಿಕೊಂಡ ಅವರು, ಇಂದಿನ ಯುವಕರು ಗರಡಿ ಮನೆಗಳಿಗೆ ಹೋಗುತ್ತಾ, ಕುಸ್ತಿಯ ಪಟ್ಟುಗಳನ್ನು ಕಲಿತು, ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂದರು.ಚನ್ನಗಿರಿ ಪಟ್ಟಣದಲ್ಲಿ ಮರಾಠ ಸಮಾಜದವರು ಜಾತ್ರೆ ಪ್ರಯುಕ್ತ ಕುಸ್ತಿ ಪಂದ್ಯ ಏರ್ಪಡಿಸಿದ್ದಾರೆ. ಈ ಜಾತ್ರೆ ಮರಾಠ ಸಮಾಜದವರು ಮಾಡುತ್ತಿದ್ದರೂ, ಇಡೀ ಊರಿನ ಹಬ್ಬದಂತಾಗಿದೆ. ಇದು ಭಾವೈಕ್ಯತೆಯ ಸಂಕೇತ. ಇಂತಹ ಭಾವನೆ ಪ್ರತಿಯೊಬ್ಬರಲ್ಲಿಯೋ ಬರಬೇಕು ಎಂದರು.
ಜಿಲ್ಲಾ ಕುಸ್ತಿ ಸಂಘದ ಅಧ್ಯಕ್ಷ ಬಿ.ವೀರಣ್ಣ ಮಾತನಾಡಿ, ಕುಸ್ತಿ ಕಲೆಯು ನಶಿಸಿಹೋಗುತ್ತಿದೆ. ಇಂತಹ ಕಲೆಯನ್ನು ಉಳಿಸಿ, ಬೆಳೆಸುವುದು ಯುವಜನಾಂಗದ ಮೇಲಿದೆ ಎಂದರು.ಸಮಾರಂಭದ ದಿವ್ಯ ಸಾನಿಧ್ಯವನ್ನು ಬೆಂಗಳೂರಿನ ಶ್ರೀ ಗೋಸಾಯಿ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ವೇದಾಂತಚಾರ್ಯ ಶ್ರೀ ಮಂಜುನಾಥ ಭಾರತಿ ಮಹಾಸ್ವಾಮೀಜಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕ್ಷತ್ರಿಯ ಮರಾಠ ಸಮಾಜ ಅಧ್ಯಕ್ಷ ಕಾಫಿ ಪುಡಿ ಶಿವಾಜಿ ರಾವ್, ಜಾತ್ರಾ ಸಮಿತಿ ಅಧ್ಯಕ್ಷ ಶ್ರೀಕಾಂತ್ ಚೌವಾಣ್, ಮರಾಠ ಸಮಾಜದ ಪ್ರಮುಖರಾದ ಬಿ.ಎಂ. ಕುಬೇಂದ್ರೋಜಿ ರಾವ್, ಶಿವಾಜಿ ರಾವ್, ಮಂಜುನಾಥ ಕಾಳೆ, ನಾಗರಾಜ್, ಕಾಯಿ ಮಂಜಣ್ಣ, ಪುರಸಭೆ ಸದಸ್ಯ ಜಿ.ನಿಂಗಪ್ಪ, ಪಟ್ಲಿ ನಾಗರಾಜ್, ಕರಡೇರ್ ರಾಮಣ್ಣ, ಅಮಾನುಲ್ಲಾ, ಜಿ.ಚಿನ್ನಸ್ವಾಮಿ, ಅಫ್ರೋಜ್, ಬಿ.ಜಿ. ನಾಗರಾಜ್, ರಾಷ್ಟ್ರೀಯ ಕುಸ್ತಿಪಟು ಸಿ.ಎಚ್. ಶ್ರೀನಿವಾಸ್, ಸಿ.ನಾಗರಾಜ್, ಪ್ರೇಕ್ಷಕರು ಭಾಗವಹಿಸಿದ್ದರು. ಮೊದಲನೆ ದಿನದ ಆರಂಭಿಕ ಕುಸ್ತಿಗಳನ್ನಾಗಿ 5 ಜೋಡಿಯ ಕುಸ್ತಿಗಳನ್ನು ಆಡಿಸಲಾಯಿತು.
- - - -25ಕೆಸಿಎನ್‌ಜಿ1:ಚನ್ನಗಿರಿ ತಾಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯ ಅಖಾಡಕ್ಕೆ ಪೂಜೆ ಸಲ್ಲಿಸುವ ಮೂಲಕ ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್.ಬಸವಂತಪ್ಪ ಉದ್ಘಾಟಿಸಿದರು. ಗೋಸಾಯಿ ಮಠದ ಶ್ರೀಗಳು, ಸ್ಥಳೀಯ ಗಣ್ಯರು ಇದ್ದರು.