ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ
ಸ್ಥಿತಪ್ರಜ್ಞರಾಗಿದ್ದಾಗ ಮಾತ್ರ ಯಾವುದೇ ಸಾಧನೆ ಮಾಡಲು ಸಾಧ್ಯ ಎಂಬುದನ್ನು ಅರಿತು ಸರ್ಕಾರಿ ನೌಕರರು ವ್ಯಾಯಾಮ, ಕ್ರೀಡೆಗೆ ಒತ್ತು ನೀಡುವ ಮೂಲಕ ಉತ್ತಮ ಆರೋಗ್ಯಕ್ಕಾಗಿ ತಮ್ಮ ಜೀವನ ಶೈಲಿ ಬದಲಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಶಂಕರ್ ವಣಿಕ್ಯಾಳ್ ಕರೆ ನೀಡಿದರು.ನಗರದ ರಂಗಮಂದಿರದಲ್ಲಿ ಎರಡು ದಿನಗಳ ಜಿಲ್ಲಾಮಟ್ಟದ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಅವರು, ಸಾಧನೆ ಮಾಡಲು ಅವಕಾಶಕ್ಕಾಗಿ ಕಾಯುವುದಲ್ಲ, ನಾವೇ ಅವಕಾಶ ಸೃಷ್ಟಿಸಿಕೊಳ್ಳಬೇಕು ಎಂದರು.
ತಪ್ಪದೆ ವ್ಯಾಯಾಮ ಮಾಡಿನಿಶ್ಚಲ ಮನಸ್ಸಿನಿಂದ ಗುರಿ ಹಾಗೂ ಕನಸು ಕಾಣಬೇಕು ಎಂದು ಕಿವಿಮಾತು ಹೇಳಿದ ಅವರು, ವಿಕಲಚೇತನರಾಗಿದ್ದರೂ ಸಾಧನೆ ಮಾಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕ್ರೀಡಾಪಟುಗಳನ್ನು ಆದರ್ಶವಾಗಿಟ್ಟುಕೊಳ್ಳಬೇಕು. ಎಂತಹ ಕ್ಲಿಷ್ಟ ಪರಿಸ್ಥಿತಿಗಳು ಎದುರಾದರೂ ವಿಚಲಿತರಾಗದಿರಲು ಕ್ರೀಡೆ, ವ್ಯಾಯಾಮ, ಧ್ಯಾನ ಅಭ್ಯಾಸ ಮಾಡಿಕೊಳ್ಳಿ, ದಿನದ ಸ್ವಲ್ಪ ಸಮಯ ನಿಮ್ಮ ಆರೋಗ್ಯಕ್ಕಾಗಿ ಮೀಸಲಿಸಿ ಎಂದರು.ನಾವು ಮಾಡುವ ಕೆಲಸದಲ್ಲಿ ಆತ್ಮತೃಪ್ತಿ ಇರಬೇಕು, ಪ್ರಗತಿಶೀಲ ಜೀವನ ನಡೆಸಲು ಒತ್ತಡ ಮುಕ್ತರಾಗಿ, ತಪ್ಪು ಮಾಡುವುದು ಸಹಜ ಆದರೆ ತಿದ್ದಿಕೊಳ್ಳದೇ ಮತ್ತೆ ತಪ್ಪು ಮಾಡುವುದು ಸರಿಯಲ್ಲ ಎಂದು ನೌಕರರಿಗೆ ಕಿವಿಮಾತು ಹೇಳಿದರು.
ಕ್ರೀಡಾಕೂಟ ಯಶಸ್ವಿ ನೆರವಿಗೆ ಧನ್ಯವಾದಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಮಾತನಾಡಿ, ಕ್ರೀಡಾಕೂಟದ ಯಶಸ್ಸಿನ ಹಿಂದೆ ಜಿಲ್ಲಾಧಿಕಾರಿಗಳೂ, ಜಿಪಂ ಸಿಇಒ ಅಪರ ಜಿಲ್ಲಾಧಿಕಾರಿಗಳ ಮಾರ್ಗದರ್ಶನ ವಿವಿಧ ಇಲಾಖೆಗಳ ಸಹಕಾರ, ಎಲ್ಲ ಜಿಲ್ಲಾಮಟ್ಟದ ಅಧಿಕಾರಿಗಳ ನೆರವು ಇದ್ದು, ಅದರಲ್ಲೂ ಪ್ರತಿ ಹಂತದಲ್ಲೂ ಇತರೆಲ್ಲಾ ಇಲಾಖೆಗಳಿಗೆ ಸೂಚನೆ ನೀಡಿ ಸಹಕರಿಸಿದ ಎಡಿಸಿಯವರಿಗೆ ಈ ಯಶಸ್ಸನ್ನು ಅರ್ಪಣೆ ಮಾಡುವುದಾಗಿ ತಿಳಿಸಿ, ಉತ್ತಮ ರೀತಿಯ ಊಟದ ವ್ಯವಸ್ಥೆ ಕಲ್ಪಿಸಿದ ಆಹಾರ ಇಲಾಖೆ ಉಪನಿರ್ದೇಶಕಿ ಲತಾ ಹಾಗೂ ಸುಬ್ರಮಣಿ ಅವರಿಗೆ ಧನ್ಯವಾದ ಸಲ್ಲಿಸಿದರು.ಕ್ರೀಡಾ ಯುವಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕಿ ಗೀತಾ ಮಾತನಾಡಿ, ನೌಕರರ ಒತ್ತಡ ನಿವಾರಣೆಗೆ ಈ ಕ್ರೀಡಾಕೂಟ ಸಹಕಾರಿಯಾಗಿದೆ, ಜಿಲ್ಲಾಧಿಕಾರಿಗಳ ಮಾರ್ಗದರ್ಶನದಿಂದ ಯಶಸ್ಸು ಸಿಕ್ಕಿದೆ, ಕುಟುಂಬದೊಂದಿಗೆ ಎರಡು ದಿನ ಇದ್ದಂತೆ ನೌಕರರೆಲ್ಲಾ ಒಂದೆಡೆ ಸೇರಿ ಸಂಭ್ರಮಿಸಿದ್ದಾರೆ ಎಂದರು.ಗಣ್ಯರಿಗೆ ಸನ್ಮಾನ:
ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಶಂಕರ್ ವಣಿಕ್ಯಾಳ್, ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ಎಸ್.ನಾರಾಯಣಸ್ವಾಮಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಗೀತಾ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಅಜಯ್‌ಕುಮಾರ್, ಖಜಾಂಚಿ ವಿಜಯ್,ಕಾರ್ಯಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ, ನಿಕಟಪೂರ್ವ ಅಧ್ಯಕ್ಷ ಕೆ.ಬಿ.ಅಶೋಕ್, ಹಿರಿಯ ಉಪಾಧ್ಯಕ್ಷ ನಂದೀಶ್, ಕೆಜಿಎಫ್ ನೌಕರರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ, ಮತ್ತಿತರರು ಇದ್ದರು.