ಬೆಳಗಾಂವಕರಗೆ ಜೀವಮಾನ, ಸುಧಾಗೆ ಅವ್ವ ಪ್ರಶಸ್ತಿ

| Published : Jul 25 2024, 01:18 AM IST

ಸಾರಾಂಶ

ಹಿರಿಯ ಪತ್ರಕರ್ತರಾದ ಎಚ್‌.ಜಿ. ಬೆಳಗವಾಂಕರ ಅವರಿಗೆ ಜೀವಮಾನ ಹಾಗೂ ಪತ್ರಕರ್ತೆ ಸುಧಾ ಶರ್ಮಾ ಅವರಿಗೆ ಅವ್ವ ಪ್ರಶಸ್ತಿಯನ್ನು ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕೊಡಲಾಗುತ್ತಿದೆ. ಈ ಕಾರ್ಯಕ್ರಮ ಜುಲೈ 29ರಂದು ಹುಬ್ಬಳ್ಳಿಯಲ್ಲಿ ನಡೆಯಲಿದ್ದು ಅಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಹುಬ್ಬಳ್ಳಿ:

ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕೊಡಮಾಡುವ ಜೀವಮಾನ ಪ್ರಶಸ್ತಿಗೆ ಎಚ್‌.ಜಿ. ಬೆಳಗವಾಂಕರ ಹಾಗೂ ಅವ್ವ ಪ್ರಶಸ್ತಿಗೆ ಸುಧಾ ಶರ್ಮಾ ಚವತ್ತಿ ಅವರನ್ನು ಆಯ್ಕೆ ಮಾಡಲಾಗಿದೆ.

ಎಚ್.ಜಿ. ಬೆಳಗಾಂವಕರ:

ಹಣಮಂತರಾವ ಗೋವಿಂದರಾವ ಬೆಳಗಾಂವಕರ ಸುಮಾರು 40 ವರ್ಷ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿದವರು. 1969ರಲ್ಲಿ ಧಾರವಾಡದ ವಿದ್ಯಾರಣ್ಯ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಆರಂಭಿಸಿದ ಇವರು, ಮುಂದೆ ಸ್ನಾತಕೋತ್ತರ ಪದವಿ ಪಡೆದು ವಿದ್ಯಾರಣ್ಯ ಪದವಿಪೂರ್ವ ಕಾಲೇಜನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದರು. 1978ರಲ್ಲಿ ಉಪನ್ಯಾಸಕ ಹುದ್ದೆಗೆ ವಿದಾಯ ಹೇಳಿದ ಎಚ್.ಜಿ. ಬೆಳಗಾಂವಕರ ಇಂಡಿಯನ್ ಎಕ್ಸ್‌ಪ್ರಸ್ ಪತ್ರಿಕೆಯಲ್ಲಿ ಕ್ರೀಡಾ ವರದಿಗಾರರಾಗಿ ನೇಮಕಗೊಂಡು ನಂತರ ಧಾರವಾಡ ಜಿಲ್ಲೆಗೆ ಪೂರ್ಣಾವಧಿ ವರದಿಗಾರರಾಗಿ ವರ್ಗಾವಣೆಗೊಂಡರು. 10 ವರ್ಷ ಹುಬ್ಬಳ್ಳಿಯಲ್ಲಿದ್ದ ಅವರು ನಂತರ ಕಲಬುರಗಿ, ಮಂಗಳೂರು, ಬೆಂಗಳೂರುಗಳಲ್ಲಿ ಸೇವೆ ಸಲ್ಲಿಸಿ ಮರಳಿ ಹುಬ್ಬಳ್ಳಿಗೆ ಬಂದರು. ಈ ಮಧ್ಯ ಕೆಲಕಾಲ ಟೈಮ್ಸ್ ಆಫ್ ಇಂಡಿಯಾ, ವಿಜಯ ಟೈಮ್ಸ್ ಪತ್ರಿಕೆಗಳಲ್ಲಿ ಹಿರಿಯ ವರದಿಗಾರರಾಗಿ ಕಾರ್ಯ ನಿರ್ವಹಿಸಿದರು.ಸುಧಾ ಶರ್ಮಾ ಚವತ್ತಿ:

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದ ಸುಧಾ ಶರ್ಮಾ ಚವತ್ತಿ ಅವರು ಮುದ್ರಣ ಮತ್ತು ದೃಶ್ಯ ಮಾಧ್ಯಮಗಳೆರಡರಲ್ಲೂ ಅನುಭವ ಹೊಂದಿದ್ದಾರೆ. ಆರ್ಥಿಕತೆ, ಷೇರುಪೇಟೆ ಇತ್ಯಾದಿಗಳ ಬಗ್ಗೆ ಜ್ಞಾನ ಹೊಂದಿರುವ ಅಪರೂಪದ ಪತ್ರಕರ್ತೆ. 90ರ ದಶಕದಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯ ಮೂಲಕ ಮುದ್ರಣ ಮಾಧ್ಯಮದಲ್ಲಿ ವೃತ್ತಿಜೀವನ ಆರಂಭಿಸಿದ ಅವರು, 1994ರಲ್ಲಿ ಉದಯ ಸುದ್ದಿ ವಾಹಿನಿಯಲ್ಲಿ ಕೆಲಸಕ್ಕೆ ಸೇರ್ಪಡೆಯಾಗಿ ರಾಜಕೀಯ, ಉದ್ಯಮ, ಹಣಕಾಸು, ಶಿಕ್ಷಣ, ಮಹಿಳಾ ವಿಷಯಗಳ ಕುರಿತು ವರದಿಗಾರಿಕೆ ಮಾಡಿದರು. ಈಟಿವಿ, ಸುವರ್ಣ ನ್ಯೂಸ್‌ ಹಾಗೂ ಝೀ ಟಿವಿ ಸೇರಿದಂತೆ ಮುಂದೆ ಕನ್ನಡದ ಬಹುತೇಕ ವಾಹಿನಿಗಳಲ್ಲಿ ಕಾರ್ಯಕ್ರಮಗಳ ನಿರ್ದೇಶಕಿಯಾಗಿ, ನಿರೂಪಕಿಯಾಗಿ ಕಾರ್ಯನಿರ್ವಹಿಸಿದರು.

ವಿಜಯವಾಣಿ ಪತ್ರಿಕೆಯಲ್ಲಿ ವಿತ್ತವಾಣಿ ಪುರವಣಿ ರೂಪಿಸಿದರು. ಆಪ್ತ ಸಮಾಲೋಚನಾ ಕ್ಷೇತ್ರದಲ್ಲೂ ಕೆಲಸ ಮಾಡಿ, ಆ ಹಿನ್ನೆಲೆಯಲ್ಲಿ 2018ರಲ್ಲಿ ಪ್ರಾಫಿಟ್ ಪ್ಲಸ್ ಎಂಬ ಕನ್ನಡದ ಮೊದಲ ಸಕಾರಾತ್ಮಕ ಚಿಂತನೆಯ ಮಾಸಪತ್ರಿಕೆ ಆರಂಭಿಸಿದರು. ಇದರ ಜೊತೆ ''''''''ಭರವಸೆ'''''''' ಎಂಬ ಯುಟ್ಯೂಬ್ ವಾಹಿನಿ ತೆರೆದಿದ್ದಾರೆ.