ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಕೇಂದ್ರ ಸಚಿವ ಕುಮಾರಸ್ವಾಮಿ ಬಗ್ಗೆ ಲಘುವಾಗಿ ಮಾತನಾಡಿರುವ ಶಾಸಕ ಕೆ.ಎಂ.ಉದಯ್ ಅವರದು ಹೀನ ಸಂಸ್ಕೃತಿ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಶನಿವಾರ ಲೇವಡಿ ಮಾಡಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ಯಾವುದೇ ಕೆರೆ ಅಭಿವೃದ್ಧಿ ಪಡಿಸದೆ ಈಗ ಚಾಕನಕೆರೆಗೆ ಅವರು ಬಾಗಿನ ಅರ್ಪಿಸಲು ಬಂದಿದ್ದಾರೆ. ಇಂಥವರಿಗೆ ನಾಚಿಕೆ ಆಗಬೇಕು ಎಂದು ದುರಹಂಕಾರದ ಮಾತುಗಳನ್ನು ಆಡಿರುವುದಕ್ಕೆ ತಮ್ಮಣ್ಣ ಕಿಡಿಕಾರಿದರು.
ಕಳೆದ 10 ವರ್ಷಗಳ ಹಿಂದೆ ಚಾಕನಕೆರೆ ಬತ್ತಿ ಹೋಗಿತ್ತು. ಕೆರೆಯಲ್ಲಿ ರೈತರು ಹಿಪ್ಪನೇರಳೆ ಬೆಳೆ ಬೆಳೆಯುತ್ತಿದ್ದರು. ನಾನು ಮದ್ದೂರು ಶಾಸಕನಾಗಿ ಬಂದ ನಂತರ ಚಾಕನ ಕೆರೆ ಸೇರಿದಂತೆ ಕ್ಷೇತ್ರದ ಎಲ್ಲಾ ಕೆರೆಗಳನ್ನು ಅಭಿವೃದ್ಧಿಪಡಿಸಿ ಕೃಷಿಗೆ ಅನುಕೂಲವಾಗುವಂತೆ ನೀರು ತುಂಬಿಸಿದ್ದೇನೆ. ಕೆರೆಗಳು ನನ್ನ ಪರಿಶ್ರಮದ ಫಲವಾಗಿ ಅಭಿವೃದ್ಧಿಯಾಗಿವೆ ಹೊರತು ಇದರಲ್ಲಿ ಶಾಸಕ ಉದಯ ಅವರ ಯಾವುದೇ ಪಾತ್ರ ಇಲ್ಲ ಎಂದು ತಿರುಗೇಟು ನೀಡಿದರು.ಮದ್ದೂರು ಕೆರೆ ಮತ್ತು ಸೂಳೆಕೆರೆ ಎರಡು ಭಾಗದ ಕೋಡಿಗಳು ಶಿಥಿಲವಾಗಿದ್ದವು. ನನ್ನ ಅವಧಿಯಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದಿಂದ ಅಗತ್ಯ ಅನುದಾನ ತಂದು ಕೋಡಿಗಳನ್ನು ದುರಸ್ತಿ ಮಾಡಿ ಅಭಿವೃದ್ಧಿಪಡಿಸಿದ್ದೇನೆ. ಆದರೆ, ಶಾಸಕ ಕೆ.ಎಂ.ಉದಯ್ ಅಭಿವೃದ್ಧಿ ವಿಚಾರದಲ್ಲಿ ಯಾರೋ ಹುಟ್ಟಿಸಿದ ಮಕ್ಕಳಿಗೆ ನಾನು ಹುಟ್ಟಿಸಿದ್ದೇನೆ ಎಂದು ಅಣೆಪಟ್ಟಿ ಹಾಕಿಕೊಂಡು ಓಡಾಡೋ ಮೂಲಕ ಹೆಸರು ಪಡೆದುಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದರು.
ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಬಗ್ಗೆ ಶಾಸಕ ಉದಯ್ ಸಂಸ್ಕೃತಿ ಇಲ್ಲದಂತೆ ಟೀಕಿಸಿದ್ದಾರೆ. ಇವರ ಇಂತಹ ಮಾತುಗಳಿಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಜನ ತಕ್ಕ ಉತ್ತರ ನೀಡಿದ್ದಾರೆ.ಶಾಸಕ ಉದಯ ಅವರು ಕುಮಾರಸ್ವಾಮಿಯ ಅಥವಾ ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡುವಾಗ ಮೈ ಮೇಲೆ ಪ್ರಜ್ಞೆ ಇಟ್ಟುಕೊಂಡು ಮಾತನಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ತಮ್ಮಣ್ಣ ಎಚ್ಚರಿಕೆ ನೀಡಿದ್ದರು.