ನರಗುಂದ: ಸಮಾಜದ ಕತ್ತಲೆ ಕಳೆದು ಹೊಸ ಬೆಳಕು ನೀಡುವ ಕಾರ್ಯವನ್ನು ಈಶ್ವರೀಯ ವಿಶ್ವವಿದ್ಯಾಲಯ ಸೇವಾ ಕೇಂದ್ರ ಮಾಡುತ್ತಿರುವುದು ಸಂತೋಷ ತಂದಿದೆ ಎಂದು ಮಾಜಿ ಸಚಿವ ಬಿ.ಆರ್. ಯಾವಗಲ್‌ ತಿಳಿಸಿದರು.ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸೇವಾ ಕೇಂದ್ರದಲ್ಲಿ 90ನೇ ತ್ರಿಮೂರ್ತಿ ಶಿವ ಜಯಂತಿ ಕಾರ್ಯಕ್ರಮದ ಸಮಾರೋಪ ಉದ್ಘಾಟಿಸಿ ಮಾತನಾಡಿ, ಈಶ್ವರೀಯ ವಿಶ್ವವಿದ್ಯಾಲಯದ ಬಗ್ಗೆ ನನಗೆ ತುಂಬಾ ಗೌರವವಿದೆ. ಜಗತ್ತಿಗೆ ಆಧ್ಯಾತ್ಮದ ಬೆಳಕನ್ನು ನೀಡುತ್ತಿದೆ. ಯಾವ ಜಾತಿ, ಮತ, ಪಂಥ ಎನ್ನದೇ ಎಲ್ಲರೂ ನಮ್ಮವರು ಎನ್ನುವವರು ಇದ್ದರೆ ಅದು ಈಶ್ವರೀಯ ವಿಶ್ವವಿದ್ಯಾಲಯ ಮಾತ್ರ ಎಂದರು. ಧಾರವಾಡ ಜಿಲ್ಲಾ ಸ.ಹಾ.ಬ. ನಿರ್ದೇಶಕ ಎಚ್.ಜಿ. ಹಿರೇಗೌಡ್ರ ಮಾತನಾಡಿ, ಈಶ್ವರೀಯ ವಿಶ್ವವಿದ್ಯಾಲಯ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದೆ. ಅವರಿಗೆ ಯಾವುದೇ ರೀತಿಯ ಆಸೆ ಆಕಾಂಕ್ಷೆಗಳಿಲ್ಲದೆ ಜನರ ಒಳಿತಿಗಾಗಿ ಸೇವೆ ಮಾಡುತ್ತಾರೆ ಎಂದರು.ಡಾ. ಬಿ.ಎಂ. ಜಾಬನ್ನವರ ಮಾತನಾಡಿ, ಈಶ್ವರೀಯ ವಿಶ್ವವಿದ್ಯಾಲಯ 140 ರಾಷ್ಟ್ರಗಳಲ್ಲಿ ದಾದಾ ಲೇಖರಾಜ ಅವರಿಂದ ಆರಂಭವಾಗಿ ಈಗ ಪ್ರತಿಯೊಂದು ಹಳ್ಳಿಗೊ ತನ್ನದೇ ಆದ ಛಾಪನ್ನು ಮೂಡಿಸಿದೆ ಎಂದರು.ರಾಜಯೋಗಿನಿ ಬ್ರ.ಕು. ಪ್ರಭಕ್ಕನವರ ಮಾತನಾಡಿ, ಈಶ್ವರೀಯ ವಿಶ್ವವಿದ್ಯಾಲಯ ವಿಶ್ವಸಂಸ್ಥೆಯಲ್ಲಿ ಅಂಗ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಾ ಇದೆ. ಶಿವನ ತಲೆಯ ಮೇಲಿರುವ ಧಾರಾಪಾತ್ರೆಯಿಂದ ಬರುವ ಒಂದೊಂದು ಹನಿಯ ನೀರಿನಂತೆ ಮೊದಲಿಗೆ ಪರಮಾತ್ಮನ ಜ್ಞಾನದ ಹನಿಯಿಂದ ನಮ್ಮಲ್ಲಿರುವ ಅಜ್ಞಾನದ ಅಂಧಕಾರ ಅಂದರೆ ನಾನೆ ದೇಹ ಎಂಬ ಭ್ರಮೆಯನ್ನು ಬಿಡಿಸಿ ನಾವೆಲ್ಲರೂ ಈ ಸೃಷ್ಟಿಯಲ್ಲಿ ಪಾತ್ರಧಾರಿಗಳೆಂಬ ಜಾಗೃತಿ ಮೂಡಿಸಿ ಆತ್ಮದ ನಿಜವಾದ ಗುಣಗಳಾದ ಶಾಂತಿ, ಪವಿತ್ರತೆ, ಶುದ್ದತೆ, ಸ್ವಚ್ಛತೆ ಪರಮಾತ್ಮನ ಜತೆಗೆ ಬುದ್ಧಿಯೋಗವನ್ನು ಜೋಡಿಸಲು ಸಹಾಯ ಮಾಡುತ್ತದೆ. ನಮ್ಮಲ್ಲಿರುವ ಒಳ್ಳೆಯ ಸಂಸ್ಕಾರ ಒಳ್ಳೆಯ ಸಂಸಾರ ರೂಪಿಸಲು ಸಾಧ್ಯ ಎಂದರು.ಈ ವೇಳೆ ಶಂಕ್ರಣ್ಣ ವಾಳದ, ರಾಜು ಕಲಾಲ, ರಮೇಶಗೌಡ ಕರಕನಗೌಡ್ರ, ಡಾ. ಸಂಗಮೇಶ ಕೊಳ್ಳಿ, ಶಂಕರಣ್ಣ ಇಂಗಳಳ್ಳಿ, ಶಿಕ್ಷಕ ಹನುಮಂತಪ್ಪ ಮಾದರ ಸೇರಿದಂತೆ ಮುಂತಾದವರು ಇದ್ದರು.