ಸಾರಾಂಶ
ಕುಮಟಾ: ಕೆಲವು ಶಾಲಾ- ಕಾಲೇಜು ವಲಯದಲ್ಲಿ ಗಾಂಜಾ, ಚರಸ್, ಮದ್ಯ ಇನ್ನಿತರ ಅಮಲು ಪದಾರ್ಥಗಳ ಅಕ್ರಮ ಮಾರಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ಅಬಕಾರಿ ಹಾಗೂ ಪೊಲೀಸ್ ಇಲಾಖೆ ತನಿಖೆ ನಡೆಸಿ ಅಮಲಿನ ಪದಾರ್ಥಗಳ ಮಾರಾಟ ಹಾಗೂ ಸೇವನೆಗೆ ಮಟ್ಟ ಹಾಕಬೇಕು ಎಂದು ಶಾಸಕ ದಿನಕರ ಶೆಟ್ಟಿ ಸೂಚಿಸಿದರು. ತಾಪಂ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಇಲಾಖೆಗಳ ಪ್ರಗತಿ ಪರಿಶೀಲಿಸಿದ ಅವರು, ಸರ್ಕಾರಿ ಪ್ರಥಮದರ್ಜೆ ಕಾಲೇಜು, ನೆಲ್ಲಿಕೇರಿ ಕಾಲೇಜು ಸಹಿತ ಹಲವು ಕಡೆ ಆಸುಪಾಸಿನ ಗೂಡಂಗಡಿ ಮುಂತಾದವುಗಳನ್ನು ತಪಾಸಿಸಬೇಕಾದ ಅಗತ್ಯವಿದೆ. ಗೋಕರ್ಣ ಭಾಗದಲ್ಲಂತೂ ಮೊದಲಿನಿಂದಲೂ ಡ್ರಗ್ಸ್ ದಂಧೆಗೆ ಖ್ಯಾತಿ ಇದೆ. ಅಬಕಾರಿ ಮತ್ತು ಪೊಲೀಸ್ ಇಲಾಖೆ ಏನು ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.
ತಿಂಗಳ ಹಿಂದಷ್ಟೇ ಗೋಕರ್ಣದಲ್ಲಿ ಚರಸ್, ಗಾಂಜಾ ಮುಂತಾದವುಗಳ ಸಹಿತ ಆರೋಪಿಯನ್ನು ಹಿಡಿದಿರುವುದಾಗಿ ಮತ್ತು ಹಲವು ಡ್ರಗ್ಸ್ ಸೇವನೆ ಪ್ರಕರಣಗಳನ್ನು ಹಿಡಿದಿದ್ದೇವೆ. ಆದರೆ ಡ್ರಗ್ಸ್ ಸೇವನೆ ಸಂದರ್ಭದಲ್ಲಿ ಅವರ ತಪಾಸಣೆಗೆ ಸೂಕ್ತ ಕಿಟ್ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಿರಲಿಲ್ಲ. ಆರೋಪಿಯನ್ನು ಕುಮಟಾಕ್ಕೆ ತಂದು ತಪಾಸಣೆ ಮಾಡಿಸುವುದು ಸಮಸ್ಯೆಯಾಗಿದೆ ಎಂದು ಗೋಕರ್ಣ ಪಿಎಸ್‌ಐ ತಿಳಿಸಿದರು. ಕೂಡಲೇ ಡ್ರಗ್ಸ್ ಹಾಗೂ ಅಕ್ರಮ ಮದ್ಯ ಮಾರಾಟ ಎಲ್ಲೆಡೆ ನಿಯಂತ್ರಿಸುವಂತೆ ಶಾಸಕ ಶೆಟ್ಟಿ ಸೂಚಿಸಿದರು.ಕುಮಟಾ- ಹೊನ್ನಾವರ ಸಂಬಂಧಿಸಿದಂತೆ ಸಾರಿಗೆ ಡಿಪೋದಲ್ಲಿ ಇರುವ ೧೧೬ ಬಸ್‌ಗಳಲ್ಲಿ ೬೧ ಬಸ್‌ಗಳು ೧೦ ಲಕ್ಷಕ್ಕೂ ಹೆಚ್ಚು ಕಿಮೀ ಸಂಚರಿಸಿದ ಬಸ್‌ಗಳಾಗಿದೆ. ೯ ಬಸ್‌ಗಳು ಹೊಸದಾಗಿ ಬಂದಿದ್ದರೂ ಹಳತಾದ ಬಸ್‌ಗಳನ್ನು ಅನಿವಾರ್ಯವಾಗಿ ಗ್ರಾಮೀಣ ಭಾಗದಲ್ಲಿ ಚಲಾಯಿಸುತ್ತಿದ್ದೇವೆ. ಚಾಲಕ- ನಿರ್ವಾಹಕರು, ಮೆಕ್ಯಾನಿಕ್‌ಗಳ ತೀವ್ರ ಕೊರತೆ ಇದೆ ಎಂದು ಡಿಪೋ ಮ್ಯಾನೇಜರ್ ತಿಳಿಸಿದರು. ತಾಲೂಕಾಸ್ಪತ್ರೆಯ ದಾನಿಗಳು ನೀಡಿದ ಡಯಾಲಿಸಿಸ್ ಯಂತ್ರಗಳಿಗೆ ಸಂಬಂಧಿಸಿ ಸಾಮಗ್ರಿಗಳನ್ನು ಪೂರೈಸಲು ಸಂಬಂಧಿತ ಏಜೆನ್ಸಿ ತಯಾರಿಲ್ಲ. ಸಮಸ್ಯೆ ಸರಿಪಡಿಸಬೇಕಿದೆ. ಆಸ್ಪತ್ರೆಗೆ ಇಎನ್‌ಟಿ ಹಾಗೂ ನೇತ್ರ ತಜ್ಞರ ಕೊರತೆ ಇದೆ. ಆಸ್ಪತ್ರೆಯ ಸೆಪ್ಟಿಕ್ ಟ್ಯಾಂಕ್ ಕೂಡಾ ಕೆಟ್ಟಿದ್ದು, ಎಸ್‌ಟಿಪಿ ಅಳವಡಿಸಬೇಕಿದೆ. ಟ್ರಾಮಾ ಸೆಂಟರ್ ಕಾಮಗಾರಿ ಬಹುತೇಕ ಮುಕ್ತಾಯದ ಹಂತದಲ್ಲಿದ್ದು, ಓರ್ವ ಅರ್ಢೋಪೀಡಿಯನ್ ಸರ್ಜನ್ ಬೇಕಿದೆ ಎಂದು ವೈದ್ಯಾಧಿಕಾರಿ ಡಾ. ಗಣೇಶ ನಾಯ್ಕ ಗಮನ ಸೆಳೆದರು. ಈ ಬಗ್ಗೆ ಎಲ್ಲರೂ ಸೇರಿ ಪ್ರಯತ್ನಿಸಿ ಟ್ರಾಮಾ ಸೆಂಟರ್ ಕಾರ್ಯಕ್ಕೆ ಕೈಜೋಡಿಸೋಣ ಎಂದು ಕೆಡಿಪಿ ಸದಸ್ಯರು ತಿಳಿಸಿದರು. ಗೋಕರ್ಣ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಜೀನಾಮೆ ನೀಡಿದ್ದು, ಬದಲಿ ವೈದ್ಯರ ತುರ್ತು ನಿಯೋಜನೆ ಅಗತ್ಯವಿದೆ. ತಾಲೂಕಿನಲ್ಲಿ ಇರಬೇಕಾದ ೧೨ ಪಶು ವೈದ್ಯರ ಪೈಕಿ ಕೇವಲ ಇಬ್ಬರು ವೈದ್ಯರಿದ್ದಾರೆ. ಹೊರಗುತ್ತಿಗೆಯಲ್ಲಿ ಮಂಜೂರಾದ ೩ ವೈದ್ಯರು ಕೂಡಾ ಬಾರದೇ ಎರಡು ತಿಂಗಳಾಯಿತು. ಸಿಬ್ಬಂದಿ ಕೊರತೆಯೂ ವಿಪರೀತವಾಗಿದೆ ಎಂದು ಕತಗಾಲ ಪಶು ವೈದ್ಯಾಧಿಕಾರಿ ತಿಳಿಸಿದರು.
ಕಾರ್ಮಿಕ ಇಲಾಖೆಯ ಸೌಲಭ್ಯಗಳ ಕುರಿತು ವ್ಯಾಪಕ ಪ್ರಚಾರ ನಡೆಸಲಾಗುವುದು, ಏಜೆಂಟರ ಹಾವಳಿ ತಡೆದು ನೇರವಾಗಿ ಕಾರ್ಮಿಕ ಸವಲತ್ತುಗಳ ಹಂಚಿಕೆಗೆ ಕ್ರಮ ಕೈಗೊಳ್ಳುವುದಾಗಿ ಕಾರ್ಮಿಕ ನಿರೀಕ್ಷಕ ವೆಂಕಟೇಶಬಾಬು ತಿಳಿಸಿದರು.ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು. ಇಒ ರಾಜೇಂದ್ರ ಭಟ್, ಆಡಳಿತಾಧಿಕಾರಿ ಜಯಂತ, ತಹಸೀಲ್ದಾರ್ ರಾಜು ವಿ.ಎಸ್., ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಗಜಾನನ ಪೈ, ಅರ್ಬನ್ ಬ್ಯಾಂಕಿನ ಅಧ್ಯಕ್ಷ ರಾಮನಾಥ ಶಾನಭಾಗ, ದಿವಗಿ ಪಂಚಾಯಿತಿ ಅಧ್ಯಕ್ಷ ಜಗದೀಶ ಭಟ್ಟ, ಜಗದೀಶ ಹರಿಕಂತ್ರ, ನಾಗವೇಣಿ ಮುಕ್ರಿ ಇತರರು ಇದ್ದರು.ಫೋಟೋ : ೨೯ಕೆಎಂಟಿ_ಒಸಿಟಿ_ಕೆಪಿ೧
ಕುಮಟಾದ ತಾಪಂ ಸಭಾಭವನದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ದಿನಕರ ಶೆಟ್ಟಿ, ಇಒ ರಾಜೇಂದ್ರ ಭಟ್, ಆಡಳಿತಾಧಿಕಾರಿ ಜಯಂತ, ತಹಸೀಲ್ದಾರ್ ರಾಜು ವಿ.ಎಸ್. ಇತರರು ಇದ್ದರು.