ಘೋಷಣೆಗೆ ಮಾತ್ರ ಸೀಮಿತವಾಯ್ತೆ ಇನ್ವೆಸ್ಟ್‌ ಕರ್ನಾಟಕ - ಹುಬ್ಬಳ್ಳಿ?

| Published : Feb 19 2025, 12:45 AM IST

ಘೋಷಣೆಗೆ ಮಾತ್ರ ಸೀಮಿತವಾಯ್ತೆ ಇನ್ವೆಸ್ಟ್‌ ಕರ್ನಾಟಕ - ಹುಬ್ಬಳ್ಳಿ?
Share this Article
  • FB
  • TW
  • Linkdin
  • Email

ಸಾರಾಂಶ

ಹುಬ್ಬಳ್ಳಿಯಲ್ಲಿ ಕಳೆದ ಆರು ವರ್ಷದ ಹಿಂದೆ ನಡೆಸಿದ್ದ ಇನ್ವೆಸ್ಟ್‌ ಕರ್ನಾಟಕ ಹುಬ್ಬಳ್ಳಿ -2019ರ ಫಲಿತಾಂಶ ಏನಾಯ್ತು? ಎಷ್ಟು ಕೈಗಾರಿಕೆಗಳು ಬಂದವು? ಎಂದ ಯುವ ಜನತೆ ಪ್ರಶ್ನಿಸುತ್ತಿದ್ದಾರೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಇತ್ತೀಚಿಗೆ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಇನ್ವೆಸ್ಟ್‌ ಕರ್ನಾಟಕ ಸಮಾವೇಶವನ್ನು ಅತ್ಯಂತ ಯಶಸ್ವಿಯಾಗಿ ಪೂರೈಸಿದೆ. ಆದರೆ, ಹುಬ್ಬಳ್ಳಿಯಲ್ಲಿ ಕಳೆದ ಆರು ವರ್ಷದ ಹಿಂದೆ ನಡೆಸಿದ್ದ ಇನ್ವೆಸ್ಟ್‌ ಕರ್ನಾಟಕ ಹುಬ್ಬಳ್ಳಿ -2019ರ ಫಲಿತಾಂಶ ಏನಾಯ್ತು? ಎಷ್ಟು ಕೈಗಾರಿಕೆಗಳು ಬಂದವು?

ಇವು ಉತ್ತರ ಕರ್ನಾಟಕದ ಯುವ ಸಮೂಹದಿಂದ ಕೇಳಿ ಬರುತ್ತಿರುವ ಪ್ರಶ್ನೆ. ಬೆಂಗಳೂರಿನಲ್ಲಿ ಕಳೆದ ವಾರ ನಡೆದ ಇನ್ವೆಸ್ಟ್‌ ಕರ್ನಾಟಕ (ಬಂಡವಾಳ ಹೂಡಿಕೆದಾರರ) ಸಮಾವೇಶ ಅದ್ಧೂರಿಯಾಗಿ ನಡೆಯಿತು. ರಾಜ್ಯಕ್ಕೆ ₹10.27 ಲಕ್ಷ ಕೋಟಿ ಬಂಡವಾಳ ಹೂಡಿಕೆಯ ವಾಗ್ದಾನವಾಯಿತು. ಅದರಲ್ಲಿ ಶೇ. 45ರಷ್ಟು ಉತ್ತರ ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಲು ಉದ್ಯಮಿಗಳು ಮುಂದೆ ಬಂದಿದ್ದಾರೆ. ಆದರೆ, ಈಗ ವಾಗ್ದಾನ ಮಾಡಿರುವ ಕೈಗಾರಿಕೆಗಳೆಲ್ಲ ಬಂಡವಾಳ ಹೂಡಿಕೆ ಮಾಡುತ್ತವೇಯೋ? ಅವರಿಗೆ ಸೌಲಭ್ಯಗಳನ್ನು ಸರ್ಕಾರ ನೀಡುತ್ತದೆಯೋ ಅಥವಾ ಹಿಂದಿನ ಸಮಾವೇಶದಂತೆ ಇದು ಕೂಡ ಬರೀ ಘೋಷಣೆಗಷ್ಟೇ ಸೀಮಿತವಾಗುತ್ತದೆಯೋ ಎಂಬೆಲ್ಲ ಪ್ರಶ್ನೆಗಳು ಹುಟ್ಟಿಕೊಂಡಿವೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. 2019ರಲ್ಲಿ ಉತ್ತರ ಕರ್ನಾಟಕದತ್ತ ಹೆಚ್ಚಿನ ಕೈಗಾರಿಕೆಗಳು ಬರುವಂತಾಗಲಿ ಎಂಬ ಉದ್ದೇಶದಿಂದ ಹುಬ್ಬಳ್ಳಿ ಕೇಂದ್ರವನ್ನಾಗಿಸಿಕೊಂಡು ಇನ್ವೆಸ್ಟ್‌ ಕರ್ನಾಟಕ ಹುಬ್ಬಳ್ಳಿ- 2019ನ್ನು ಮಾಡಲಾಗಿತ್ತು.

ಆಗ ಬರೋಬ್ಬರಿ ₹83 ಸಾವಿರ ಕೋಟಿಗೂ ಅಧಿಕ ಬಂಡವಾಳ ಹೂಡಿಕೆಗೆ ಉದ್ಯಮಿಗಳು ವಾಗ್ದಾನ ಮಾಡಿದ್ದರು. ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಬೀದರ, ರಾಯಚೂರು, ಯಾದಗಿರಿ ಸೇರಿದಂತೆ ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಬಂಡವಾಳ ಹೂಡಿಕೆ ಮಾಡುವುದಾಗಿ ಭರವಸೆ ನೀಡಿದ್ದರು. ಕೊಪ್ಪಳದ ಆಟಿಕೆ ಹಬ್‌, ಬೆಳಗಾವಿಯಲ್ಲಿ ಸ್ವಲ್ಪ ಬಂಡವಾಳ ಹೂಡಿಕೆ, ಹುಬ್ಬಳ್ಳಿಯಲ್ಲಿ ಯುಫ್ಲೆಕ್ಸ್‌ ಸೇರಿದಂತೆ ನಾಲ್ಕೈದು ಕೈಗಾರಿಕೆಗಳನ್ನು ಹೊರತು ಪಡಿಸಿದರೆ ದೊಡ್ಡ ಪ್ರಮಾಣದ ಕೈಗಾರಿಕೆಗಳು ಬರಲೇ ಇಲ್ಲ. ಎಲ್ಲವೂ ಬರೀ ಘೋಷಣೆಯಾಗಿ ಉಳಿದವು ಎಂಬುದು ಮಾತ್ರ ಬಹಿರಂಗ ಸತ್ಯ.

ಎಫ್‌ಎಂಸಿಜಿ:

ಇನ್ನು ಬಹು ನಿರೀಕ್ಷಿತ ಎಫ್‌ಎಂಸಿಜಿ ಕ್ಲಸ್ಟರ್‌ ಬಗ್ಗೆಯಂತೂ ಎಲ್ಲೂ ಇಲ್ಲದ ನಿರೀಕ್ಷೆ ಇತ್ತು. ಆದರೆ, ಅದು ಸರ್ಕಾರದ ದ್ವಂದ್ವ ನೀತಿಯಿಂದಾಗಿ ಬರಲೇ ಇಲ್ಲ. ಮೊದಲಿಗೆ ₹99 ಲಕ್ಷಕ್ಕೆ ಒಂದು ಎಕರೆ ಜಮೀನು ಎಂದು ಹೇಳಿ ನಂತರ ಏಕಾಏಕಿ ₹1.39 ಕೋಟಿಗೆ ಏರಿಸಿ ಬಿಟ್ಟರು. ಹೀಗಾಗಿ ಎಫ್‌ಎಂಸಿಜಿ ಬರಲು ಹಿಂದೇಟು ಹಾಕಿತು. ಇದರಿಂದ ಗೇಮ್‌ ಚೇಂಜರ್‌ ಆಗುತ್ತಿದ್ದ ಎಫ್‌ಎಂಸಿಜಿ ಬರಲೇ ಇಲ್ಲ. ಬಂದರೂ ಸಣ್ಣ ಪುಟ್ಟ ಒಂದೆರಡು ಅಷ್ಟೇ ಬಂದಂಗಾಯಿತು.

ಕಾರಣವೇನು?

ಯಡಿಯೂರಪ್ಪ ನೇತೃತ್ವದ ಸರ್ಕಾರ ಇದ್ದಾಗ ಆಗಿನ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ ನೇತೃತ್ವದಲ್ಲಿ ಈ ಸಮಾವೇಶ ನಡೆಸಲಾಗಿತ್ತು. ಬಳಿಕ ಕೊರೋನಾ ಬಂದಿದ್ದರಿಂದ ಕೈಗಾರಿಕೆ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ನಂತರ ಸರ್ಕಾರವೂ ಬದಲಾಯಿತು. ಶೆಟ್ಟರ್‌ ಸಚಿವರಾಗಲು ಇಷ್ಟ ಪಡಲಿಲ್ಲ. ಮುಂದೆ ಬಂದ ಸಚಿವರು ಈ ಬಗ್ಗೆ ಹೆಚ್ಚಿನ ತಲೆ ಕೆಡಿಸಿಕೊಳ್ಳಲಿಲ್ಲ. ಉದ್ಯಮ ಸ್ನೇಹಿ ಸರ್ಕಾರವನ್ನಾಗಿ ಮಾಡುತ್ತೇವೆ ಎಂಬ ಮಾತು ಬರೀ ಮಾತಾಗಿಯೇ ಉಳಿಯಿತು. ಒಂದೊಂದು ಪರವಾನಗಿಗೂ ಕಚೇರಿ ಕಚೇರಿ ಅಲೆದಾಡುವುದು ತಪ್ಪಲಿಲ್ಲ. ವಾಗ್ದಾನ ಮಾಡಿದಂತೆ ಸೌಲಭ್ಯ ಕಲ್ಪಿಸಲು ಸರ್ಕಾರ ಮುಂದಾಗಲಿಲ್ಲ. ಇದರಿಂದಾಗಿ ಉದ್ಯಮಿಗಳು ಇತ್ತ ಬರಲು ತಲೆ ಕೆಡಿಸಿಕೊಳ್ಳಲೇ ಇಲ್ಲ. ಇತ್ತ ಕೈಗಾರಿಕೆಗಳು ಬರುತ್ತಿಲ್ಲ. ಪ್ರತಿಭೆಗಳು ಇಲ್ಲಿ ವಲಸೆ ಹೋಗದೇ ಮತ್ತೇನು ಮಾಡ್ಯಾರು ಎಂಬ ಪ್ರಶ್ನೆ ಉದ್ಯಮಿ ಮನೋಹರ ಅವರದ್ದು.

ಇನ್ನಾದರೂ ಬರೀ ಸಮಾವೇಶ ನಡೆಸುವುದಕ್ಕಷ್ಟೇ ಅಲ್ಲ. ಕೈಗಾರಿಕೆ ಸ್ಥಾಪನೆಗೆ ಆಗಬೇಕಾದ ಕೆಲಸ ಮಾಡಿ, ಉದ್ಯಮಿಗಳ ಮನವೋಲಿಸಿ ಬಂಡವಾಳ ಹರಿದು ಬರುವಂತೆ ಮಾಡಬೇಕು. ಹಿಂದಿನ ಸಮಾವೇಶದ ಮೂಲಕ ರಾಜ್ಯದಲ್ಲಿ ಎಷ್ಟು ಕೈಗಾರಿಕೆಗಳು ಪ್ರಾರಂಭಿಸಿವೆ ಎಂಬುದನ್ನು ಬಹಿರಂಗ ಪಡಿಸಬೇಕು. ಹಿಂದೆ ವಾಗ್ದಾನ ಮಾಡಿರುವ ಕೈಗಾರಿಕೆಗಳನ್ನು ಈ ಭಾಗದಲ್ಲಿ ತೆಗೆದುಕೊಂಡು ಬರಲು ಈಗಿನ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಪ್ರಯತ್ನಿಸಬೇಕು ಎಂಬುದು ಯುವ ಉದ್ಯಮಿಗಳ ಆಗ್ರಹ.

ಆರಂಭವಾಗಲೇ ಇಲ್ಲ

ಹುಬ್ಬಳ್ಳಿಯಲ್ಲೂ ಇನ್ವೆಸ್ಟ್‌ ಕರ್ನಾಟಕ ಸಮಾವೇಶವನ್ನು ಮಾಡಲಾಗಿತ್ತು. ಆಗ ₹83 ಸಾವಿರ ಕೋಟಿ ಹರಿದು ಬಂದಿದೆ ಎಂದು ಮಾಹಿತಿ ನೀಡಲಾಗಿತ್ತು. ಆದರೆ, ಈ ವರ್ಷವೂ ನಿರೀಕ್ಷಿತ ಮಟ್ಟದಲ್ಲಿ ಈ ಭಾಗದಲ್ಲಿ ಕೈಗಾರಿಕೆಗಳು ಆರಂಭವಾಗಲೇ ಇಲ್ಲ. ಈಗಿನ ಸರ್ಕಾರ ಆಗ ವಾಗ್ದಾನ ಮಾಡಿರುವ ಉದ್ಯಮಿಗಳನ್ನು ಒಪ್ಪಿಸಿಕೊಂಡು ಕರೆತರಬೇಕು.

ರಮೇಶ ಪಾಟೀಲ, ಯುವ ಉದ್ಯಮಿ, ಹುಬ್ಬಳ್ಳಿ