ಇಡೀ ಜಿಲ್ಲೆ ಬರಪೀಡಿತವೆಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಪರಿಣಾಮ ಜನರಿಗೆ ಮಾತ್ರವಲ್ಲ, ಜಾನುವಾರುಗಳ ಮೇಲೂ ಬೀರಿದೆ. ಆದರೆ, ಜನರು ಹೇಗೋ ಪಾರಾಗಬಹುದು. ಜಾನುವಾರುಗಳನ್ನು ಜನರೇ ರಕ್ಷಿಸಬೇಕಿದೆ. ಹೀಗಾಗಿ ಜಾನುವಾರುಗಳ ರಕ್ಷಣೆಗೆ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಪಟ್ಟಣದ ತೋಟಗಾರಿಕೆ ಆವರಣದಲ್ಲಿ ಶೀಘ್ರ ಮೇವು ಬ್ಯಾಂಕ್ ಆರಂಭಿಸಲು ಸಿದ್ಧತೆ ಮಾಡಿಕೊಂಡಿದೆ.

ಮಲ್ಲಿಕಾರ್ಜುನ ಪಟ್ಟಣಶೆಟ್ಟಿ

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಇಡೀ ಜಿಲ್ಲೆ ಬರಪೀಡಿತವೆಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಪರಿಣಾಮ ಜನರಿಗೆ ಮಾತ್ರವಲ್ಲ, ಜಾನುವಾರುಗಳ ಮೇಲೂ ಬೀರಿದೆ. ಆದರೆ, ಜನರು ಹೇಗೋ ಪಾರಾಗಬಹುದು. ಜಾನುವಾರುಗಳನ್ನು ಜನರೇ ರಕ್ಷಿಸಬೇಕಿದೆ. ಹೀಗಾಗಿ ಜಾನುವಾರುಗಳ ರಕ್ಷಣೆಗೆ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಪಟ್ಟಣದ ತೋಟಗಾರಿಕೆ ಆವರಣದಲ್ಲಿ ಶೀಘ್ರ ಮೇವು ಬ್ಯಾಂಕ್‌ ಆರಂಭಿಸಲು ಸಿದ್ಧತೆ ಮಾಡಿಕೊಂಡಿದೆ.ತಾಲೂಕಿನಾದ್ಯಂತ ಕಳೆದ ವರ್ಷ ಮುಂಗಾರು-ಹಿಂಗಾರು ಮಳೆ ಸಮರ್ಪಕವಾಗಿ ಆಗದ ಕಾರಣ ಬರಗಾಲ ಬಾಧಿಸಿದೆ. ಆದರೆ, ಇರುವ ನೀರಲ್ಲೇ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಶೀಘ್ರ ಕೆರೆಗಳಿಗೆ ನೀರು ಹರಿದು ಬರಲಿದೆ. ಜತೆಗೆ ಮೇವು ಬ್ಯಾಂಕ್ ಸ್ಥಾಪಿಸುವ ಮೂಲಕ ಬರಪೀಡಿತ ಪ್ರದೇಶಗಳಿಗೆ ಆಶ್ರಯವಾಗಲಿದೆ. ಈ ಬಾರಿ ಭೀಕರ ಬರಗಾಲದಿಂದ ಮಳೆ-ಬೆಳೆ ಇಲ್ಲದೇ ರೈತಾಪಿ ವರ್ಗ ಕಂಗಾಲಾಗಿದೆ. ಇದು ಜಾನುವಾರುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಾರದು ಎಂದು ಜಿಲ್ಲಾಡಳಿತ ಎಲ್ಲಿ ಅವಶ್ಯಕತೆ ಇದೆಯೋ ಅಲ್ಲಿಗೆ ಮೇವು ಬ್ಯಾಂಕ್‌ಗಳನ್ನು ಸ್ಥಾಪಿಸಿ ಜಾನುವಾರುಗಳ ರಕ್ಷಣೆಗೆ ಮುಂದಾಗಿದೆ.

ಮೇವು ಬ್ಯಾಂಕ್ ಸ್ಥಾಪನೆ ಹೇಗೆ?:

ಪಟ್ಟಣದ ತೋಟಗಾರಿಕೆ ಆವರಣದಲ್ಲಿ ಮೇವು ಸಂಗ್ರಹಣೆಗಾಗಿ ಜಾಗವಿದ್ದು, ಸರ್ಕಾರ ರೈತರಿಂದ ₹6ಗೆ 1 ಕೆಜಿಯಂತೆ ಮೇವು ಖರೀದಿ ಮಾಡಲಿದೆ. ಸರ್ಕಾರ ತನ್ನ ಪಾಲಿನ ₹4 ಟೆಂಡರ್‌ದಾರರಿಗೆ ಒದಗಿಸಲಿದೆ. ಉಳಿದ ಹಣ ತಾಲೂಕಿನ ಜಾನುವಾರು ಹೊಂದಿದ ರೈತರಿಗೆ ಪ್ರತಿ ಕೆಜಿಗೆ ₹2 ಅಂತೆ ದಿನಕ್ಕೆ 6 ಕೆಜಿ ಒಣಮೇವು ಇಲ್ಲವೇ ₹10 ಕೆಜಿ ಹಸಿಮೇವು ಒದಗಿಸಲಾಗುತ್ತಿದೆ. 2021ನೇ ಸಾಲಿನ ಜಾನುವಾರ ಗಣತಿ ಪ್ರಕಾರ ಮೇವು ಒದಗಿಸಲು ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಶೀಘ್ರ ಮೇವು ಬ್ಯಾಂಕ್ ಉದ್ಘಾಟನೆ ಆಗಲಿದೆ.

30 ದಿನಗಳವರೆಗೆ ಟೆಂಡರ್‌:

ಇದರ ಟೆಂಡರ್ ಹುಬ್ಬಳ್ಳಿಯ ಹರ್ಷ ಅಸೋಸಿಯೇಟ್ಸ್ ಅವರು ಪಡೆದುಕೊಂಡಿದ್ದಾರೆ. ತಾಲೂಕಿನ ರೈತರಿಗೆ ಮೇವು ಸರಬರಾಜು ಮಾಡಲಿದ್ದಾರೆ. ತಹಸೀಲ್ದಾರರ ನೇತೃತ್ವದಲ್ಲಿ ಸಿಬ್ಬಂದಿ ಮೇಲ್ವಿಚಾರಣೆ ಮಾಡಲು ನೇಮಕ ಮಾಡಿ ರೈತರಿಗೆ ಅನುಕೂಲ ಕಲ್ಪಿಸಲಿದ್ದಾರೆ. ಎಸ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ಬರ ಪರಿಹಾರ ರೈತರಿಗೆ ಒದಗಿಸಲಾಗುವುದು. 2019ನೇ ಸಾಲಿನಲ್ಲಿ ಗೋ ಶಾಲೆ ನಿರ್ಮಾಣದಿಂದ ರೈತರು ತೊಂದರೆ ಅನುಭವಿಸಿದ್ದರು. ಈ ಬಾರಿ ಮೇವು ಬ್ಯಾಂಕಿನಿಂದ ರೈತರು ತಮ್ಮ ಜಾನುವಾರುಗಳಿಗೆ ಮೇವು ಖರೀದಿ ಮಾಡಿ ತೆಗೆದುಕೊಂಡು ಹೋಗಲು ಅನುಕೂಲ ಕಲ್ಪಿಸಲಾಗಿದೆ. ಮೇವು ಬ್ಯಾಂಕ್ ಪ್ರಾರಂಭವಾದ ದಿನದಿಂದ 30 ದಿನದವರೆಗೆ ಟೆಂಡರ್ ಪ್ರಕ್ರಿಯೆ ಇರುತ್ತದೆ.

ಜಾನವಾರುಗಳಿಗೆ ಮೇವು:

21ನೇ ಜಾನುವಾರು ಗಣತಿ ಪ್ರಕಾರ ತಾಲೂಕಿನಲ್ಲಿ 13315 ದೊಡ್ಡ ಮತ್ತು 37041 ಸಣ್ಣ ಪ್ರಾಣಿಗಳಿವೆ. ಸಣ್ಣ ಮತ್ತು ದೊಡ್ಡ ಪ್ರಾಣಿಗಳಿಗೆ ಅನುಗುಣವಾಗಿ ಅಂದಾಜು ಪ್ರತಿದಿನ 6 ಕೆಜಿಯಂತೆ ಪ್ರತಿ ವಾರಕ್ಕೆ ಸರಾಸರಿ 10.261 ಟನ್ ಮೇವು ಬೇಕಾಗುತ್ತದೆ. ಕೆಲವು ರೈತರು ಮುಂಗಾರಿನಲ್ಲಿ ಮತ್ತು ಹಿಂಗಾರಿನಲ್ಲಿ ಸ್ವಂತ ಮೇವು ಸಂಗ್ರಹ ಹೊಂದಿದ್ದಾರೆ. ಜಾನುವಾರಗಳ ಸಂಖ್ಯೆಗನುಗುಣವಾಗಿ ಪ್ರತಿದಿನಕ್ಕೆ 16.477ಕೆಜಿ ಅಂದಾಜಿಸಲಾಗಿದೆ. ಮುಸುಕಿನ ಜೋಳದಲ್ಲಿ ಪೋಷಕಾಂಶಗಳ ಕೊರತೆಯಿದೆ ಎಂದು ತಿಳಿದು ಬಂದಿದೆ. ಜಾನುವಾರಗಳ ಸಮೀಕ್ಷೆ ನಡೆಸಿ ರಿಯಾಯಿತಿ ದರದಲ್ಲಿ ಗುಣಮಟ್ಟದ ಮೇವು ಎಸ್‌ಡಿಆರ್‌ಎಫ್ ಮಾರ್ಗಸೂಚಿಗಳ ಪ್ರಕಾರ ಜಿಲ್ಲಾಡಳಿತದಿಂದ ಮೇವು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲು ಜಂಟಿ ಇಲಾಖೆ ಸಮೀಕ್ಷೆ ನಡೆಸಿ ಪಟ್ಟಣದ ತೋಟಗಾರಿಕೆ ಆವರಣದಲ್ಲಿ ಮೇವು ಬ್ಯಾಂಕ್ ಸ್ಥಾಪನೆಗೆ ಈಗಾಗಲೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಟೆಂಡರ್ ಪಡೆದ ಸಂಸ್ಥೆಯವರು ಕಾರ್ಯಾದೇಶ ನೀಡಿದ ಕೂಡಲೇ ಮೇವು ಪೂರೈಕೆಗೆ ಸಿದ್ದರಾಗಿದ್ದಾರೆ.

----

ಮೇವು ಖರೀದಿ ಮಾಡಲು ಏನು ಮಾಡಬೇಕು?

ರೈತರು ಆಧಾರ್ ಕಾರ್ಡ್ ಎಫ್ಐಡಿ ಕಾರ್ಡ್ ಝರಾಕ್ಸ್ ಪ್ರತಿ ಹಾಗೂ ಪಶು ಇಲಾಕೆ ಅಧಿಕಾರಿಗಳಿಂದ ಜಾನುವಾರುಗಳ ದೃಢೀಕರಣ ಪತ್ರ ಒಮ್ಮೆ ನೀಡಿ ರಿಜಿಸ್ಟ್ರೇಷನ್ ಮಾಡಿದರೆ ಸಾಕು, ಪ್ರತಿದಿನ ಮೇವು ಖರೀದಿ ಮಾಡಲು ತೊಂದರೆ ಇರುವುದಿಲ್ಲ. ಪ್ರತಿ ಬಾರಿ ಹಣ ನೀಡಿ ರೈತರು ತಮ್ಮ ಜಾನುವಾರುಗಳಿಗೆ ಮೇವು ಖರೀದಿ ಮಾಡಬಹುದು.

---

ಕೋಟ್‌

ಜನಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ತಾಲೂಕಿನ ಕೆರೆಗಳಿಗೆ ನೀರು ಹರಿಸಲಾಗಿದ್ದು ಇದರಿಂದ ಅಂತರ್ಜಲ ಪ್ರಮಾಣ ಹೆಚ್ಚುವುದರ ಜೊತೆ ಕುಡಿಯುವ ನೀರಿನ ಸಮಸ್ಯೆ ಆಗದ ರೀತಿ ತಾಲೂಕಾಡಳಿತ ಕ್ರಮ ಕೈಗೊಳ್ಳಲಾಗಿದೆ. ತಾಲೂಕಿನ ರೈತರ ಸಮಸ್ಯೆಯ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವ ಮೂಲಕ ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ಮೇವು ಬ್ಯಾಂಕ್ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ.

-ರಾಜುಗೌಡ ಪಾಟೀಲ ಕುದುರಿಸಾಲವಾಡಗಿ, ಶಾಸಕ

---

ತಾಲೂಕಿನ ರೈತರಿಗೆ ಮೇವು ಬ್ಯಾಂಕ್ ಶೀಘ್ರದಲ್ಲಿ ಪ್ರಾರಂಭಿಸಲಾಗುವುದು. ರೈತರಿಗೆ ರಿಯಾಯಿತಿ ದರದಲ್ಲಿ ಗುಣಮಟ್ಟದ ಮೇವು ಪೂರೈಕೆಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಮೇವು ಬಂದ ತಕ್ಷಣ ಅದರ ಗುಣಮಟ್ಟ ಪರೀಕ್ಷಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗುವುದು.

-ಪ್ರಕಾಶ ಸಿಂದಗಿ, ತಹಸೀಲ್ದಾರ್, ದೇವರಹಿಪ್ಪರಗಿ.

---

ನೀರಿಲ್ಲದೇ ಒಣಗಿ ನಿಂತ ಬೆಳೆಯೂ ರೈತನಿಗೆ ಈಗ ಬಂಗಾರದಂತೆ ಕಾಣುತ್ತಿದೆ. ತಡವಾದರೂ ರೈತರ ಸಲುವಾಗಿ ತಾಲೂಕಿನಲ್ಲಿ ಮೇವು ಬ್ಯಾಂಕ್ ಸ್ಥಾಪನೆ ಆಗುತ್ತಿರುವುದು ಹೋರಾಟದ ಫಲವಾಗಿದೆ. ಆದಷ್ಟು ಬೇಗ ಪ್ರಾರಂಭಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು.

-ಸಂಪತ್ ಜಮಾದಾರ, ರಮೇಶ ಮಸಿಬಿನಾಳ, ರೈತ ಮುಖಂಡ.