ವಿಂಡ್‌ ಫ್ಯಾನ್‌ ಕಂಪನಿಗೆ ಅಕ್ರಮ ಸೇವೆ: ಲೈನ್‌ಮನ್‌ ಅಮಾನತಿಗೆ ಒತ್ತಾಯ

| Published : Jul 04 2024, 01:02 AM IST

ವಿಂಡ್‌ ಫ್ಯಾನ್‌ ಕಂಪನಿಗೆ ಅಕ್ರಮ ಸೇವೆ: ಲೈನ್‌ಮನ್‌ ಅಮಾನತಿಗೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಜಗಳೂರು ತಾಲೂಕಿನ ತೋರಣಗಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ಬೆಸ್ಕಾಂ ಲೈನ್‌ಮನ್ ರುದ್ರಗೌಡ ಕಕ್ಕಳಮೇಲಿ ವಿರುದ್ಧ ರೈತರು ಭ್ರಷ್ಟಾಚಾರ ಆರೋಪಗಳ ಸುರಿಮಳೆ ಸುರಿಸಿದ್ದು, ಶೀಘ್ರ ಅಮಾನತುಗೊಳಿಸಲು ಒತ್ತಾಯಿಸಿದ್ದಾರೆ.

- ಬೆಸ್ಕಾಂ ಲೈನ್‌ಮನ್‌ ರುದ್ರಗೌಡ ಕಕ್ಕಳಮೇಲಿ ವಿರುದ್ಧ ಭ್ರಷ್ಟಾಚಾರ ಆರೋಪ - ಮೇಲಾಧಿಕಾರಿಗಳ ಗಮನಕ್ಕೆ ತಾರದೇ ಟಿಸಿ, ವಿದ್ಯುತ್ ಕಂಬಗಳ ಅಳವಡಿಸಿಕೆ

- ಹತ್ತಿಪ್ಪತ್ತು ಸಾವಿರ ಲಂಚ ಕೊಟ್ಟವರಿಗೆ ಟಿಸಿ ಕೊಟ್ಟು ಅರ್ಹ ರೈತರಿಗೆ ವಂಚನೆ - - - ಕನ್ನಡಪ್ರಭ ವಾರ್ತೆ ಜಗಳೂರು

ತಾಲೂಕಿನ ತೋರಣಗಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ಬೆಸ್ಕಾಂ ಲೈನ್‌ಮನ್ ರುದ್ರಗೌಡ ಕಕ್ಕಳಮೇಲಿ ವಿರುದ್ಧ ರೈತರು ಭ್ರಷ್ಟಾಚಾರ ಆರೋಪಗಳ ಸುರಿಮಳೆ ಸುರಿಸಿದ್ದು, ಶೀಘ್ರ ಅಮಾನತುಗೊಳಿಸಲು ಒತ್ತಾಯಿಸಿದ್ದಾರೆ.

೨೦ ವರ್ಷಗಳಿಂದ ರುದ್ರಗೌಡ ಕಕ್ಕಳಮೇಲಿಯು ತೋರಣಗಟ್ಟೆ ಗ್ರಾಪಂ ವ್ಯಾಪ್ತಿಯ ಜಮ್ಮಾಪುರ, ಹೊನ್ನಮರಡಿ, ಅರಿಶಿಣಗುಂಡಿ, ಲಿಂಗಣ್ಣನಹಳ್ಳಿ ಸೇರಿದಂತೆ ಅನೇಕ ಗ್ರಾಮಗಳ ಇನ್‌ಚಾರ್ಜ್ ಬೆಸ್ಕಾಂ ಲೈನ್‌ಮನ್ ಆಗಿದ್ದಾರೆ. ಮೂಲತಃ ಬಿಜಾಪುರ ಜಿಲ್ಲೆಯ ಈ ಲೈನ್‌ಮನ್‌ನ ಕರ್ತವ್ಯಲೋಪ ವಿರುದ್ಧ ರೈತರು ತಿರುಗಿಬಿದ್ದಿದ್ದಾರೆ.

ಅಧಿಕಾರಿಗಳ ಗಮನಕ್ಕೆ ಬಾರದಂತೆ ದುರಸ್ತಿ ನೆಪದಲ್ಲಿ ವಿಂಡ್‌ ಫ್ಯಾನ್ ಕಂಪನಿಯಿಂದ ಬೆಸ್ಕಾಂ ಲೈನ್‌ಮನ್ ಹಾಗೂ ಗುತ್ತಿಗೆದಾರನೊಬ್ಬನ ಖಾತೆಗೆ ಲಕ್ಷಾಂತರ ರು. ವರ್ಗಾವಣೆ ಆಗಿರುವ ಆರೋಪ ಕೇಳಿಬಂದಿದೆ. ಬೆಸ್ಕಾಂಗೆ ಸಂಬಂಧಿಸಿದ ಯಾವುದೇ ಘಟನೆಯಾದರೆ ಅದನ್ನು ಮೇಲಾಧಿಕಾರಿ ಗಮನಕ್ಕೆ ತರಬೇಕು. ಆದರೆ ಈ ಲೈನ್‌ಮನ್ ನಿಯಮಗಳನ್ನು ಗಾಳಿಗೆ ತೂರಿದ್ದಾನೆ. ಈ ಬಗ್ಗೆ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ವಿಂಡ್‌ ಫ್ಯಾನ್‌ ಕಂಪನಿ ಜತೆ ಶಾಮೀಲು:

ಜಮ್ಮಾಪುರ ರೈತ ತಿಪ್ಪೇಸ್ವಾಮಿ ಸೇರಿದಂತೆ ಅನೇಕ ರೈತರು ಹೇಳುವಂತೆ, ಜಗಳೂರು ತಾಲೂಕಿನ ಹೊನ್ನಮರಡಿ ಬಳಿ ಕಳೆದ ಭಾನುವಾರ (ಜೂ.೩೦) ಕ್ಲೀನ್‌ಮ್ಯಾಕ್ಸ್ ವಿಂಡ್ ಫ್ಯಾನ್ ಸ್ಥಾವರ ನಿರ್ಮಾಣಕ್ಕೆ ಬೃಹತ್ ಲಾರಿಗಳಲ್ಲಿ ವಿದ್ಯುತ್ ಉಪಕರಣಗಳನ್ನು ಸಾಗಿಸಲಾಗುತ್ತಿತ್ತು. ಆಗ ಗ್ರಾಮಕ್ಕೆ ಪೂರೈಕೆಯಾಗುವ ನಿರಂತರ ಜ್ಯೋತಿ ವಿದ್ಯುತ್ ಕಂಬಗಳಿಗೆ ತಾಗಿ ಮೂರು ವಿದ್ಯುತ್ ಕಂಬಗಳು ಮತ್ತು ಟ್ರಾನ್ಸ್‌ಫಾರ್ಮರ್‌ ಮುರಿದು ನೆಲಕ್ಕೆ ಬಿದ್ದಿದ್ದವು. ಈ ಅವಘಡವನ್ನು ತಾಲೂಕು ಬೆಸ್ಕಾಂ ಎಇಇ ಸುಧಾಮಣಿ ಗಮನಕ್ಕೆ ತಾರದೇ ಆ ಭಾಗದ ಲೈನ್‌ಮನ್ ರುದ್ರಗೌಡ ಕಕ್ಕಳಮೇಲಿ ವಿಂಡ್ ಫ್ಯಾನ್ ಕಂಪನಿ ಜೊತೆ ಶಾಮೀಲಾಗಿ, ಹಣ ಪಡೆದು ಗುತ್ತಿಗೆದಾರರಿಂದ ನೇರವಾಗಿ ಕಾಮಗಾರಿ ಮಾಡಿಸಿದ್ದಾರೆ ಎಂದು ದೂರಿದ್ದಾರೆ.

ವಿಂಡ್ ಫ್ಯಾನ್ ನಿರ್ಮಾಣಕ್ಕೆ ಬೃಹತ್ ಉಪಕರಣಗಳನ್ನು ಲಾರಿಗಳಲ್ಲಿ ಸಾಗಿಸುವಾಗ ಕಿರಿದಾದ ರಸ್ತೆಯಲ್ಲಿ ಅಡ್ಡಲಾಗಿರುವ ವಿದ್ಯತ್‌ ಲೈನ್‌ಗೆ ತಾಗಿ ಕಂಬಗಳು ಮುರಿದುಬಿದ್ದಿತ್ತು. ಒಂದು ದಿನದ ನಂತರ ಅಧಿಕಾರಿಗಳ ಗಮನಕ್ಕೆ ತಂದು ಅವರು ಬರುವ ಮುಂಚೆಯೇ ವಿಂಡ್ ಫ್ಯಾನ್ ಕಂಪನಿ ಜೊತೆ ಹೊಂದಾಣಿಕೆ ಮಾಡಿಕೊಂಡು, ಹಣ ಪಡೆದು ವಿದ್ಯುತ್ ಕಾಮಗಾರಿ ಗುತ್ತಿಗೆದಾರರ ಜೊತೆ ಸೇರಿ ಹೊಸ ಕಂಬಗಳು ಮತ್ತು ಟ್ರಾನ್ಸ್‌ಫಾರ್ಮರ್‌ (ಟಿಸಿ) ಸಹ ತರಿಸಿ ಅಳವಡಿಸಿದ್ದಾರೆ. ಇದಕ್ಕೆ ಬೆಸ್ಕಾಂನ ಎಇ, ಎಸ್ಒ ಮತ್ತು ಎಇಇ ಅವರಿಂದ ನಿಯಮಗಳಂತೆ ಅನುಮತಿ ಸಹ ಪಡೆದಿಲ್ಲ. ನೇರವಾಗಿ ಅಕ್ರಮ ಕಾಮಗಾರಿ ನಡೆಸಿ, ಕೈ ತೊಳೆದುಕೊಂಡಿದ್ದಾರೆ. ಈ ವೇಳೆ ಅವಘಡಕ್ಕೆ ಯಾರಾದರೂ ಬಲಿಯಾಗಿದ್ದರೆ ಯಾರು ಹೊಣೆ ಎಂದು ರೈತರು ಪ್ರಶ್ನಿಸಿದರು.

ಟಿ.ಸಿ. ಗೋಲ್ಮಾಲ್:

ಜಮ್ಮಾಪುರ ಗ್ರಾಮದ ಲೈನ್ ಮನ್ ರುದ್ರೇಗೌಡ ತಮ್ಮ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ರೈತರ ಜಮೀನುಗಳಲ್ಲಿ ಟ್ರಾನ್ಸ್‌ಫಾರ್ಮರ್‌ (ಟಿಸಿ) ಸುಟ್ಟು ಹೋದರೆ ಬೆಸ್ಕಾಂ ನಿಯಮಗಳಿಗೆ ವಿರುದ್ಧವಾಗಿ ಹಣವಂತರಿಂದ ₹೧೦ ರಿಂದ ₹೨೦ ಸಾವಿರ ಹಣ ಪಡೆದು ಸ್ಥಳದಲ್ಲೇ ಟಿ.ಸಿ. ಕೊಟ್ಟು ಅರ್ಹ ರೈತರಿಗೆ ವಂಚನೆ ಮಾಡುತ್ತಿದ್ದಾರೆ. ರೈತರು ನಿಯಮಗಳಂತೆ ಟಿ.ಸಿ. ಕೇಳಿದರೆ ತಡ ಮಾಡುತ್ತಾರೆ. ಈ ವ್ಯಕ್ತಿ ಜೊತೆ ಹೊಂದಾಣಿಕೆ ಮಾಡಿಕೊಂಡು ಹಣ ಕೊಟ್ಟರೆ ಸಾಕು, ದಿನದಲ್ಲೇ ಟಿ.ಸಿ.ಗಳು ರೈತರ ಜಮೀನಿಗೆ ಬರುತ್ತವೆ ಎಂದು ಜಮ್ಮಾಪುರದ ರೈತರಾದ ಈಶ್ವರಪ್ಪ, ತಿಪ್ಪೇಸ್ವಾಮಿ, ಆರೋಪಿಸಿದ್ದಾರೆ.

ಗ್ರಾಮದಲ್ಲಿ ಟಿ.ಸಿ.ಗಳು:

ಟಿ.ಸಿ.ಗಳು ಸುಟ್ಟರೆ ೧೫ ರಿಂದ ೨೦ ದಿನಗಳ ಕಾಲ ರೈತರನ್ನು ಸತಾಯಿಸುವ ಅಧಿಕಾರಿಗಳು ಹೊಸ ಟಿ.ಸಿ.ಗಳು ಇಲ್ಲ ಎಂದು ಸಬೂಬು ಹೇಳುತ್ತಾರೆ. ಆದರೆ, ಜಮ್ಮಾಪುರ ಗ್ರಾಮದಲ್ಲಿ ಲೈನ್‌ಮನ್‌ ರುದ್ರಗೌಡ ಕಕ್ಕಳಮೇಲಿ 3 ಟಿ.ಸಿ.ಗಳನ್ನು (ಟಿಸಿ ನಂಬರ್:೩೭೦೭೧೭, ೩೨೧೯೫೨, ೩೪೧೧೨೨) ಬಚ್ಚಿಟ್ಟಿದ್ದಾರೆ ಎಂಬುದು ಈ ರೈತರ ಗಂಭೀರ ಆರೋಪ.

- - -

ಬಾಕ್ಸ್ * ಶಾಸಕರ ಎಚ್ಚರಿಕೆಗೂ ಬಗ್ಗದ ಲೈನ್‌ಮನ್‌ ಅಮಾನತುಗೊಳಿಸಿ

ಕಳೆದ ಕೆಲ ವರ್ಷದ ಹಿಂದೆ ರುದ್ರಗೌಡ ಕಕ್ಕಳಮೇಲಿ ವಿರುದ್ಧ ಗಂಭೀರ ಆರೋಪ ಕೇಳಿಬಂದಾಗ ಅವರನ್ನು ಬಿಳಿಚೋಡು ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ರೈತರು ಲೈನ್‌ಮನ್ ವಿರುದ್ಧ ಶಾಸಕರಿಗೆ ದೂರು ನೀಡಿದ್ದರು. ಆಗ ಶಾಸಕ ಬಿ.ದೇವೇಂದ್ರಪ್ಪ ಅವರು ಲೈನ್‌ಮನ್‌ ಎಚ್ಚರಿಕೆ ನೀಡಿದ್ದರು. ಆದರೂ ಪ್ರಭಾವ ಬಳಸಿ, ಮತ್ತೆ ಜಮ್ಮಾಪುರ ಗ್ರಾಮಕ್ಕೆ ವರ್ಗಾಣೆಯಾಗಿ ಬಂದಿದ್ದಾರೆ. ಇಷ್ಟೆಲ್ಲಾ ಅಕ್ರಮಗಳು ಹೊರಬಂದರೂ ಸಂಬಂಧಪಟ್ಟ ಬೆಸ್ಕಾಂ ಎಕ್ಸಿಕುಟೀವ್ ಎಂಜಿನಿಯರ್ ಎಸ್.ಕೆ.ಪಾಟೀಲ್ ಆಗಲಿ, ಎಇಇ ಸುಧಾಮಣಿ ಅವರಾಗಲೀ ಕ್ರಮ ಕೈಗೊಂಡಿಲ್ಲ. ಲೈನ್‌ಮನ್‌ ರುದ್ರಗೌಡ ಮಾಡಿರುವ ಅಕ್ರಮಗಳನ್ನು ತನಿಖೆ ಮಾಡಿಸಿ, ತಕ್ಷಣವೇ ಅಮಾನತು ಮಾಡಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

- - - ಕೋಟ್‌

ಲೈನ್‌ಮನ್‌ ನಡೆಸಿದ್ದಾರೆ ಎನ್ನಲಾದ ಟಿಸಿ ಅಕ್ರಮ ಬಗ್ಗೆ ನನ್ನ ಗಮನಕ್ಕೆ ಮಾಹಿತಿ ಬಂದಿಲ್ಲ. ಪತ್ರಿಕಾ ಮಾಧ್ಯಮಗಳಿಂದ ಲೈನ್‌ಮನ್ ಅಕ್ರಮಗಳು ಬೆಳಕಿಗೆ ಬಂದಿವೆ. ತಕ್ಷಣವೇ ಜಗಳೂರಿನ ಎಇಇ ಸುಧಾಮಣಿ ಅವರಿಗೆ ಸೂಚನೆ ನೀಡಿ ಪರಿಶೀಲಿಸಿ, ವರದಿ ಸಲ್ಲಿಸುವಂತೆ ಸೂಚನೆ ನೀಡುತ್ತೇನೆ

- ಎಸ್.ಕೆ.ಪಾಟೀಲ್, ಎಕ್ಸಿಕುಟೀನ್‌ ಎಂಜಿನಿಯರ್, ದಾವಣಗೆರೆ

- - -

-03ಜೆಎಲ್‌ಆರ್‌1: ಜಗಳೂರು ತಾಲೂಕಿನ ಜಮ್ಮಾಪುರ ಗ್ರಾಮದಲ್ಲಿ ಗುಪ್ತವಾಗಿಟ್ಟಿರುವ ಟಿ.ಸಿ.ಗಳು

-03ಜೆಎಲ್.ಆರ್2: ರುದ್ರಗೌಡ ಕಕ್ಕಳಮೇಲಿ, ಲೈನ್‌ಮನ್‌, ಬೆಸ್ಕಾಂ