ಸಾರಾಂಶ
ಕನ್ನಡಪ್ರಭ ವಾರ್ತೆ ಸಿಂಧನೂರು
ನಗರಸಭೆ ವ್ಯಾಪ್ತಿಗೊಳಪಡುವ ಎಲ್ಲ ಅಂಗಡಿಗಳ ಲೈಸನ್ಸ್ ಕಡ್ಡಾಯಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ನಿತೀಶ್ ಅಧಿಕಾರಿಗಳಿಗೆ ಸೂಚಿಸಿದರು.ಬುಧವಾರ ನಗರಸಭೆಯ ಸಭಾಂಗಣದಲ್ಲಿ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಗರಸಭೆ ವ್ಯಾಪ್ತಿಯ ಆಸ್ತಿ ತೆರಿಗೆ ಹಾಗೂ ಇತರೆ ತೆರಿಗೆಗಳನ್ನು ನಿಗದಿತ ಕಾಲಕಾಲಕ್ಕೆ ಕಡ್ಡಾಯವಾಗಿ ಸಂಗ್ರಹಣ ಮಾಡಬೇಕು. ತೆರಿಗೆ ಸಂಗ್ರಹ ಪ್ರಮಾಣ ಪ್ರಸ್ತುತ ಶೇ.73ರಷ್ಟಿದ್ದು, ಮುಂದಿನ ಒಂದು ತಿಂಗಳಲ್ಲಿ ಶೇ.100ರಷ್ಟು ಆಗುವಂತೆ ಕ್ರಮ ಕೈಗೊಳ್ಳಬೇಕು. ಅಲ್ಲದೆ ನೀರಿನ ತೆರಿಗೆ ಸಂಗ್ರಹ ಪ್ರಮಾಣ ಪ್ರಸ್ತುತ ಶೇ.14ರಷ್ಟಿದೆ. ಕೂಡಲೇ ಶೇ.27ಕ್ಕೆ ಹೆಚ್ಚಿಸಬೇಕು ಎಂದರು.
15ನೇ ಹಣಕಾಸು ಆಯೋಗ ಹಾಗೂ ಎಸ್ಎಫ್ಸಿ ಅಡಿಯಲ್ಲಿ ಕೈಗೊಂಡ ವಿವಿಧ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಮುಗಿಸಬೇಕು. ಒಂದು ವೇಳೆ ಗುತ್ತಿಗೆ ಪಡೆದವರು ಕಾಮಗಾರಿ ಮುಗಿಸಲು ವಿಳಂಬ ಮಾಡಿದರೆ ಪುನಃ ಟೆಂಡರ್ ಕರೆಯಬೇಕು. ಅಲ್ಲದೆ ನಗರೋತ್ಥಾನ ಹಂತ-3 ಮತ್ತು 4ರಲ್ಲಿ ಕೈಗೊಂಡ ಕಾಮಗಾರಿಗಳನ್ನು ಗುಣಮಟ್ಟದಲ್ಲಾಗುವಂತೆ ನಿಗವಹಿಸಬೇಕು ಎಂದು ಹೇಳಿದರು.ಕಸ ಸಂಗ್ರಹ, ವರ್ಗೀಕರಣ ಮತ್ತು ವಿಲೇವಾರಿ ಸಮರ್ಪಕವಾಗಿ ನಡೆಯಬೇಕು. ಇದಕ್ಕೆ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗ ಪಡೆಯಬೇಕು. ಕಸ ಸಂಗ್ರಹಣೆಯ ವೈಜ್ಞಾನಿಕ ವ್ಯವಸ್ಥೆ ಬಗ್ಗೆ ಸಾರ್ವಜನಿಕ ರಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಪೌರಾಯುಕ್ತ ಮಂಜುನಾಥ ಗುಂಡೂರು, ಕಾರ್ಯಪಾಲಕ ಎಂಜಿನಿಯರ್ ಶಾಂತಮೂರ್ತಿ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.ಇಂದಿರಾ ಕ್ಯಾಂಟೀನ್‌ಗೆ ಭೇಟಿ:
ಸಭೆ ಮುಗಿದ ನಂತರ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿದ ಅವರು ಸ್ವಚ್ಛತೆ, ಶುಚಿ, ರುಚಿಯ ಬಗ್ಗೆ ಪರಿಶೀಲನೆ ನಡೆಸಿ, ಕ್ಯಾಂಟಿನ್‌ನಲ್ಲಿ ಸ್ವಚ್ಛತೆ ಕಾಪಾಡಲು ಮತ್ತು ಗುಣಮಟ್ಟದ ಆಹಾರ ವಿತರಣೆಗೆ ನಿಗಾ ವಹಿಸುವಂತೆ ತಹಶೀಲ್ದಾರ್ ಅರುಣ ದೇಸಾಯಿ ಅವರಿಗೆ ಸೂಚಿಸಿದರು.ನೀರು ಶುದ್ಧಿಕರಣ ಘಟಕ ವೀಕ್ಷಣೆ: ನಗರದ ಕುಷ್ಟಗಿ ರಸ್ತೆಯಲ್ಲಿರುವ ನೀರಿನ ಶುದ್ಧಿಕರಣ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನೀರು ಪೂರೈಕೆ ಮಾಡುವ ಪೂರ್ವದಲ್ಲಿ ಟ್ಯಾಂಕ್ಗಳ ಸ್ವಚ್ಛತೆಯ ಬಗ್ಗೆ ಗಮನ ಹರಿಸಬೇಕು. ಯಾವುದೇ ಕಾರಣಕ್ಕೂ ಕಲುಷಿತ ನೀರು ಸಾರ್ವಜನಿಕರಿಗೆ ಪೂರೈಕೆಯಾಗದಂತೆ ಎಚ್ಚರವಹಿಸಬೇಕು ಎಂದು ಪೌರಾಯುಕ್ತ ಮಂಜುನಾಥ ಗುಂಡೂರು ಮತ್ತು ಸಿಬ್ಬಂದಿಗೆ ತಿಳಿಸಿದರು.
--16ಕೆಪಿಎಸ್ಎನ್ಡಿ1ಬಿ: ಸಿಂಧನೂರಿನ ಇಂದಿರಾ ಕ್ಯಾಂಟೀನ್‌ಗೆ ಜಿಲ್ಲಾಧಿಕಾರಿ ಕೆ.ನಿತೀಶ್ ಭೇಟಿ ನೀಡಿ ವೀಕ್ಷಿಸಿದರು.