ಸಾರಾಂಶ
- ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಸಮಿತಿ ರಚನೆ ಸಭೆ - - - ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಲಿಂಗಾಯತ ಎನ್ನುವುದು ಜಾತಿ ಅಲ್ಲ, ಧರ್ಮವಾಗಿದೆ ಎಂದು ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಆವರಗೆರೆ ರುದ್ರಮುನಿ ಅಭಿಪ್ರಾಯಿಸಿದರು.ಇಲ್ಲಿಗೆ ಸಮೀಪದ ಬಸವ ಗುರುಕುಲದಲ್ಲಿ ಹಮ್ಮಿಕೊಂಡ ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಸಮಿತಿ ರಚನಾ ಸಭೆಯಲ್ಲಿ ಮಾತನಾಡಿದ ಅವರು, ವಿಶ್ವಗುರು, ಸಾಂಸ್ಕೃತಿಕ ನಾಯಕ ಬಸವಣ್ಣ ಶೈವ ಬ್ರಾಹ್ಮಣರಾಗಿದ್ದರು. ವಿದ್ಯೆ, ಗೌರವ, ಘನತೆ ಇತ್ತು. ಬಿಜ್ಜಳ ರಾಜನ ಆಸ್ಥಾನದಲ್ಲಿ ಐಶಾರಾಮಿ ಜೀವನ ನಡೆಸದೇ ಸಾಮಾನ್ಯರ ಜೀವನವನ್ನು ಉತ್ತಮಪಡಿಸಲು ಸಾಮಾಜಿಕ ಕ್ರಾಂತಿ ಮಾಡಿದವರು ಎಂದರು.
ದಾಸೋಹ, ಕಾಯಕ, ಮಹಾಮನೆ ಮೂಲಕ ಅಮಾಯಕ ಜನರು, ದುಡಿಯುವ ವರ್ಗಕ್ಕೆ ಸಂಘಟನೆ ಮಾಡಿ ವಚನಗಳಲ್ಲಿ ಬದುಕಿನ ಸಾರವನ್ನು ಸಾರಿದದವರು ಬಸವಣ್ಣ. ನೊಂದವರ ಪರ ಹೋರಾಡಿ, ಶೋಷಣೆಯಿಂದ ವಿಮೋಚನೆಗೊಳಿಸುವ ಪ್ರಯತ್ನ ಮಾಡಿದರು. ಬಸವೇಶ್ವರರು ಹಣ ಲೂಟಿ ಮಾಡದೇ, ಪ್ರಾಮಾಣಿಕರಾಗಿದ್ದು, ಶ್ರದ್ಧೆಯಿಂದ ಕಾಯಕದಲ್ಲಿ ತೊಡಗಿದ್ದರು ಎಂದರು.ಮಹಾಸಭಾದ ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಕುಸುಮಾ ಲೋಕೇಶ್ ಮಾತನಾಡಿ, ಬಸವಣ್ಣ ಅವರು ಧರ್ಮಗ್ರಂಥ, ಲಾಂಛನ, ವಚನಗಳ ಮೂಲಕ ಮೌಲ್ಯಯುತ ವಿಚಾರಗಳನ್ನು ನೀಡಿ ವೀರಶೈವರು, ಲಿಂಗಾಯತರಲ್ಲಿನ ಗೊಂದಲಗಳನ್ನು ದೂರ ಮಾಡಿದ್ದಾರೆ ಎಂದರು.
ಜಿಲ್ಲಾ ಸಮಿತಿ ಸದಸ್ಯ ಕೆ.ಎಂ. ಸಿದ್ದಯ್ಯ ಮಾತನಾಡಿ, ಶರಣರಾದವರು ಜೀವನದಲ್ಲಿ ವೈದಿಕ ಆಚರಣೆಗಳನ್ನು ಸೇರ್ಪಡೆ ಮಾಡದೇ ದಿನಕ್ಕೆ ಹತ್ತು ವಚನ ಹೇಳಿಕೊಂಡು ಸಾರ್ಥಕ ಜೀವನ ನಡೆಸಬೇಕಿದೆ. ಲಿಂಗ ಪೂಜೆಯಿಲ್ಲದೇ, ಯೋಗವೂ ಸೂಕ್ತವಲ್ಲ ಎಂದರು.ಮುಖಂಡ ನಾರೇಶಪ್ಪ, ಜಾಗತಿಕ ಲಿಂಗಾಯತ ಮಹಾಸಭಾ ರಚನಾ ಉದ್ದೇಶ, ಆಶಯಗಳು, ಅದರ ಕಾರ್ಯ ಚಟುಟಿಕೆಗಳನ್ನು ತಿಳಿಸಿದರು.
ರಾಜ್ಯ ಕಾರ್ಯದರ್ಶಿ ಮಹಂತೇಶ್ ಅಗಡಿ, ನ್ಯಾಮತಿ ತಾಲೂಕು ಅಧ್ಯಕ್ಷ ಮಹೇಶ್ವರಪ್ಪ, ಶಿವಯೋಗಿ, ತೀರ್ಥಪ್ಪ, ಯೋಧ ಶಿವಕುಮಾರ್, ದಾವಣಗೆರೆ ಅಕ್ಕನ ಬಳಗದ ಮಮತಾ, ಪೂರ್ಣಿಮಾ, ಶಿವಾಜಿ ಪಾಟೀಲ್, ಸದಾಶಿವ, ಹಳ್ಳಿಹಾಳ್ ಪರಮೇಶ್ವರಪ್ಪ, ಕಸಾಪ ಸಂಘಟನಾ ಕಾರ್ಯದರ್ಶಿ ಸದಾನಂದ, ಕೆ.ಕುಬೇರಪ್ಪ, ಮಂಜುಳಾ ಹಾಜರಿದ್ದರು.ಮಲೇಬೆನ್ನೂರು ಅಕ್ಕನ ಬಳಗದ ಮಹಿಳಾ ಸದಸ್ಯರು ವಚನ ಗೀತೆ ಹಾಡಿದರು. ಜಿಗಳಿ, ಹಳ್ಳಿಹಾಳು, ಯಲವಟ್ಟಿ, ನಂದಿತಾವರೆ, ಮಲೇಬೆನ್ನೂರು ಗ್ರಾಮದ ಶರಣರು ಇದ್ದರು. ಅಕ್ಕನ ಬಳಗದ ಸದಸ್ಯೆ ಮಂಜುಳಾ ವಂದಿಸಿದರು.
- - - -೨೦ಎಂಬಿಆರ್೨:ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಸಮಿತಿ ರಚನಾ ಸಭೆಯಲ್ಲಿ ಆವರಗೆರೆ ರುದ್ರಮುನಿ ಮಾತನಾಡಿದರು.