ಲಿಂಗಾಯತ ಉಪ ಪಂಗಡಗಳು ಒಂದಾಗಬೇಕು

| Published : Jul 14 2024, 01:31 AM IST

ಸಾರಾಂಶ

ಲಿಂಗಾಯಿತ ಸಮಾಜದ ಉಪ ಪಂಗಡಗಳು ಒಂದಾಗಬೇಕಿದೆ. ವೀರಶೈವಲಿಂಗಾಯತ ಸಮಾಜವನ್ನು ಶಕ್ತಿಶಾಲಿಯಾಗಿ ಮಾಡಬೇಕಿದೆ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಲಿಂಗಾಯಿತ ಸಮಾಜದ ಉಪ ಪಂಗಡಗಳು ಒಂದಾಗಬೇಕಿದೆ. ವೀರಶೈವಲಿಂಗಾಯತ ಸಮಾಜವನ್ನು ಶಕ್ತಿಶಾಲಿಯಾಗಿ ಮಾಡಬೇಕಿದೆ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ ಅಭಿಪ್ರಾಯಪಟ್ಟರು.

ನಗರದ ದಾನಮ್ಮ ದೇವಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಬಣಜಿಗ ಸಮಾಜದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಣಜಿಗ ಸಮಾಜದ ಕೇಂದ್ರ ಸಮಿತಿ ದುರ್ಬಲವಾಗಿದೆ. ಎಲ್ಲರ ಸಹಕಾರದಿಂದ ಕೇಂದ್ರದ ಸಮಿತಿಯನ್ನು ಸದೃಢಗೊಳಿಸಲು ಪ್ರಯತ್ನ ನಡೆದಿದೆ ಎಂದರು.

ಸಮಾಜದ ಸರ್ವೆ ಕಾರ್ಯ ಮಾಡಬೇಕು. ಅತೀ ಬಡವರನ್ನು ಗುರುತಿಸಿ ಅವರಿಗೆ ಸೂಕ್ತ ಸಹಾಯ ಮಾಡಬೇಕಾದ ಅವಶ್ಯಕತೆ ಇದೆ. ವಿಶ್ವಗುರು ಬಸವಣ್ಣ ಅವರ ಮಾರ್ಗದರ್ಶನದಂತೆ ಎಲ್ಲ ಸಮಾಜಗಳನ್ನು ಒಂದುಗೂಡಿಸಿಸುವ ಪ್ರಯತ್ನವಾಗಬೇಕು ಎಂದರು.

ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ಲಿಂಗಾಯಿತ ಸಮಾಜದಲ್ಲಿ ಬಣಜಿಗ ಸಮಾಜ ಜವಾಬ್ದಾರಿ ಸ್ಥಾನದಲ್ಲಿದೆ ಎಂದು ಹೇಳಿದರು.

ಮುಖಂಡ ಉಮೇಶ ಮಹಾಬಳಶೆಟ್ಟಿ ಮಾತನಾಡಿ, ಸಂಘ ಬೆಳೆದು ಬಂದ ರೀತಿಯನ್ನು ಸಮಾಜದ ಹಿರಿಯರು ದಾನಮಾಡಿದ್ದನ್ನು ಸ್ಮರಿಸಿದರು. ಮುತ್ತಿನ ಕಂತಿ ಮಠದ ಪಂಡಿತಾರಾಧ್ಯ ಸ್ವಾಮಿಗಳು ಆಶೀರ್ವಚನ ನೀಡಿದರು. ಜಿ.ಆರ್‌.ಅನಂತಪುರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಶೋಕ ಸಿರಗಣ್ಣವರ, ಚೆನ್ನಪ್ಪ ಬಾಂಗಿ, ಸಂಗಮೇಶ ಹಲವಾಯಿ, ನಂದಾಬಾಂಗಿ ಮುಂತಾದವರು ವೇದಿಕೆಯಲ್ಲಿದ್ದರು.

ಐಐಟಿ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿನುತಾ ಸಂಪಗಾವಿ ಸೇರಿದಂತೆ ಸಾಧನೆ ಗೈದ 60 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬಣಜಿಗ ಸಮಾಜದ ಮುಖಂಡರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.