ಸಾರಾಂಶ
‘ವಿ ಸರ್ವ್’ ಎನ್ನುವ ಧ್ಯೇಯದೊಂದಿಗೆ ಜಾಗತಿಕ ಮಟ್ಟದಲ್ಲಿ ಮೇರು ಸೇವಾ ಸಂಸ್ಥೆಯಾದ ಲಯನ್ಸ್ ಇಂಟರ್‌ನ್ಯಾಷನಲ್ ಅಂಗವಾದ ಲಯನ್ಸ್ ಜಿಲ್ಲೆ 317ಡಿ ಪ್ರಾಂತ್ಯ 11ರ ಪ್ರಾಂತೀಯ ಸಮ್ಮೇಳನ ‘ಉನ್ನತಿ’ಯು ಮಾ.8ರಂದು ಮೂಡುಬಿದಿರೆ ಅಶ್ವತ್ಥಪುರದ ಲೆಕ್ಸಾ ವ್ಯಾಲಿಯಲ್ಲಿ ಪ್ರಾಂತೀಯ ಅಧ್ಯಕ್ಷ ವೆಂಕಟೇಶ್ ಹೆಬ್ಬಾರ್ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಮೂಲ್ಕಿ
‘ವಿ ಸರ್ವ್’ ಎನ್ನುವ ಧ್ಯೇಯದೊಂದಿಗೆ ಜಾಗತಿಕ ಮಟ್ಟದಲ್ಲಿ ಮೇರು ಸೇವಾ ಸಂಸ್ಥೆಯಾದ ಲಯನ್ಸ್ ಇಂಟರ್‌ನ್ಯಾಷನಲ್ ಅಂಗವಾದ ಲಯನ್ಸ್ ಜಿಲ್ಲೆ 317ಡಿ ಪ್ರಾಂತ್ಯ 11ರ ಪ್ರಾಂತೀಯ ಸಮ್ಮೇಳನ ‘ಉನ್ನತಿ’ಯು ಮಾ.8ರಂದು ಮೂಡುಬಿದಿರೆ ಅಶ್ವತ್ಥಪುರದ ಲೆಕ್ಸಾ ವ್ಯಾಲಿಯಲ್ಲಿ ಪ್ರಾಂತೀಯ ಅಧ್ಯಕ್ಷ ವೆಂಕಟೇಶ್ ಹೆಬ್ಬಾರ್ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ವೆಂಕಟೇಶ್ ಹೆಬ್ಬಾರ್ ಹೇಳಿದರು.ಅವರು ಮೂಲ್ಕಿಯ ಪುನರೂರು ಟೂರಿಸ್ಟ್ ಹೋಂ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಅಂದು ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡೈಜಿ ವರ್ಲ್ಡ್ ಮುಖ್ಯಸ್ಥ ವಾಲ್ಟರ್ ನಂದಳಿಕೆ, ಮೂಡುಬಿದಿರೆ ಪೊಲೀಸ್ ಇನ್‌ಸ್ಪೆಕ್ಟರ್ ಸಂದೇಶ್ ಪಿಜಿ ಉಪಸ್ಥಿತರಿರುವರು.
ಕಾರ್ಯಕ್ರಮದಲ್ಲಿ ಯಕ್ಷಗಾನ ರಂಗದ ಮೇರು ಭಾಗವತ, ಪಟ್ಲ ಪೌಂಡೇಶನ್ ಸ್ಥಾಪಕ ಸತೀಶ್ ಶೆಟ್ಟಿ ಪಟ್ಲ, ದೀನ ದಲಿತರ ಆಶಾಕಿರಣ ಹೊಸ ಬೆಳಕು ಆಶ್ರಮದ ತನುಲ, ವೈಕಲ್ಯತೆಯನ್ನು ಮೀರಿ ಬೆಳೆದ ದೇಹದಾರ್ಢ್ಯ ಪಟು ಆಟೋ ಜಗದೀಶ್ ಪೂಜಾರಿ ಅವರನ್ನು ಸಾಧಕರ ನೆಲೆಯಲ್ಲಿ ಗೌರವಿಸಲಾಗುವುದು. ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಯ ಲಯನ್ಸ್ ಡಯಲಿಸಿಸ್ ಕೇಂದ್ರಕ್ಕೆ ಲಕ್ಷಕ್ಕೂ ಮೀರಿದ ಆರ್ಥಿಕ ನೆರವಿನ ಘೋಷಣೆ ಸೇರಿದಂತೆ ಹಲವಾರು ಸೇವಾ ಕಾರ್ಯಕ್ರಮಗಳು ಸಮ್ಮೇಳನದಲ್ಲಿ ನಡೆಯಲಿದೆ ಎಂದರು.ಶಿವಪ್ರಸಾದ್ ಬಿ. ಅಧ್ಯಕ್ಷತೆಯಲ್ಲಿ ಲಯನ್ಸ್ ಕ್ಲಬ್ ಬಪ್ಪನಾಡು ಇನ್‌ಸ್ಪಯರ್ ಆತಿಥ್ಯದಲ್ಲಿ ನಡೆಯಲಿರುವ ಲಯನ್ಸ್ ಜಿಲ್ಲೆ 317 ಡಿ ಯ ಪ್ರಾಂತ್ಯ ಹನ್ನೊಂದರ ಸಮ್ಮೇಳನದಲ್ಲಿ ಏಕಪ್ಲಾಸ್ಟಿಕ್ ನಿಷೇಧಕ್ಕೆ ಪ್ರಾಮುಖ್ಯತೆ ನೀಡಲಾಗಿದ್ದು, ಸಮ್ಮೇಳನ ಯಶಸ್ವಿಗೆ ಎಲ್ಲರ ಸಹಕಾರ ಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪ್ರಾಂತ್ಯದ ಪ್ರಥಮ ಮಹಿಳೆ ಪ್ರತಿಭಾ ಹೆಬ್ಬಾರ್, ಉನ್ನತಿ ಸಮ್ಮೇಳನ ಸಮಿತಿ ಅಧ್ಯಕ್ಷ ಒಸ್ವಾಲ್ಡ್ ಡಿಸೋಜ, ಪದಾಧಿಕಾರಿಗಳಾದ ಶಿವಪ್ರಸಾದ್, ಒಸ್ವಾಲ್ಡ್ ಡಿಕೋಸ್ಟಾ, ಪುಷ್ಪರಾಜ ಚೌಟ, ಸುಧೀರ್ ಬಾಳಿಗ ಮತ್ತಿತರರು ಉಪಸ್ಥಿತರಿದ್ದರು. ಒಸ್ವಾಲ್ಡ್ ಡಿಸೋಜಾ ಸ್ವಾಗತಿಸಿದರು.