ಕೊಪ್ಪಳ ತಾಲೂಕಿನ ಹನುಮಳ್ಳಿ ಗ್ರಾಮದಲ್ಲಿ ಕಳೆದ 30 ವರ್ಷಗಳಿಂದ ಗುಟ್ಕಾವನ್ನು ಸಂಪೂರ್ಣ ನಿಷೇಧಿಸಲಾಗಿದೆ.

ಸೋಮರೆಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಕರ್ನಾಟಕ ಸರ್ಕಾರ ಈಗ ರಾಜ್ಯದಲ್ಲಿ ಗುಟ್ಕಾ ನಿಷೇಧ ಮಾಡಿ ಅದನ್ನು ಯಥಾವತ್ತಾಗಿ ಜಾರಿ ಮಾಡಲು ಪ್ರಯತ್ನಿಸುತ್ತಿದೆ. ಆದರೆ ಕೊಪ್ಪಳ ತಾಲೂಕಿನ ಹನುಮಳ್ಳಿ ಗ್ರಾಮದಲ್ಲಿ ಕಳೆದ 30 ವರ್ಷಗಳಿಂದ ಗುಟ್ಕಾವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಅಷ್ಟೇ ಅಲ್ಲದೇ ಮದ್ಯಪಾನ ಮತ್ತು ಮದ್ಯ ಮಾರಾಟವನ್ನೂ ಮಾಡುವಂತಿಲ್ಲ.

ಸುಮಾರು 300 ಮನೆ, 1500 ಜನಸಂಖ್ಯೆ ಇರುವ ಕೊಪ್ಪಳ ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ಕಳೆದ 30 ವರ್ಷಗಳ ಹಿಂದೆಯೇ ಗುಟ್ಕಾ ಸೇರಿದಂತೆ ತಂಬಾಕುಯಕ್ತ ಪದಾರ್ಥಗಳ ಸೇವನೆ ಮತ್ತು ಮಾರಾಟ ನಿಷೇಧ ಮಾಡಲಾಗಿದೆ. ಗ್ರಾಮದ ಎಲ್ಲರೂ ಸೇರಿ ತೆಗೆದುಕೊಂಡಿರುವ ಈ ತೀರ್ಮಾನ ಇಂದಿಗೂ ಚಾಚೂ ತಪ್ಪದೆ ಪಾಲಿಸಲಾಗುತ್ತಿದೆ.

ಹನುಮನಹಳ್ಳಿಯಲ್ಲಿ ಬಹುತೇಕ ಕೃಷಿ ಕುಟುಂಬವಿದ್ದು, ಸೊಪ್ಪು ತರಕಾರಿ ಬೆಳೆಯುತ್ತಾರೆ. ಈ ಊರಲ್ಲಿ ಗುಟ್ಕಾ ಸೇರಿದಂತೆ ಮದ್ಯಪಾನ, ಮದ್ಯ ಮಾರಾಟ ಇರದೇ ಇರುವುದರಿಂದ ಗ್ರಾಮದ ಯುವಕರು ಸರಿದಾರಿಯಲ್ಲಿ ಸಾಗಿ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಎಂತಹ ಭೀಕರ ಬರಗಾಲ ಇದ್ದರೂ ಸಹ ಹನುಮನಹಳ್ಳಿ ಗ್ರಾಮಸ್ಥರು ಗುಳೆ ಹೋದ ಉದಾಹರಣೆ ಇಲ್ಲ. ಇವರು ಕೃಷಿಯನ್ನೇ ಅತ್ಯಂತ ಅರ್ಥಪೂರ್ಣವಾಗಿ ಮಾಡುತ್ತಿದ್ದಾರೆ. ಕುಲಕಸುಬು ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ ಮಾಡುತ್ತಾರೆ.

ಗುಟ್ಕಾ ಸೇರಿದಂತೆ ತಂಬಾಕು, ಮದ್ಯಪಾನ ಇರದೇ ಇರುವುದರಿಂದ ಇಲ್ಲಿ ಹೃದಯಾಘಾತ ಸೇರಿದಂತೆ ಇತರ ಅನಾರೋಗ್ಯಕ್ಕೆ ತುತ್ತಾಗುವವರ ಸಂಖ್ಯೆಯು ಅತ್ಯಂತ ವಿರಳ. ರಾಜ್ಯ ಸರ್ಕಾರ ಈಗಷ್ಟೇ ಗುಟ್ಕಾ ನಿಷೇಧ ಮಾಡುವ ಪ್ರಸ್ತಾಪ ಮಾಡಿದೆ, ಅದನ್ನು ಪರಿಪೂರ್ಣವಾಗಿ ಜಾರಿ ಮಾಡುವ ಮುನ್ನವೇ ಅಪಸ್ವರದಿಂದ ಒತ್ತಡಕ್ಕೆ ಒಳಗಾಗಿದೆ. ಆದರೆ ಹನುಮನಹಳ್ಳಿ ರಾಜ್ಯಕ್ಕೆ ಮಾದರಿ ಎನ್ನುವಂತಿದೆ. ಕೋಟ್‌:

ನಮ್ಮೂರಲ್ಲಿ ನಮಗೆ ಗೊತ್ತಿರುವಂತೆ ಗುಟ್ಕಾ ಮಾರಾಟ ಮಾಡುತ್ತಿಲ್ಲ. ಹಾಗೆ ಮದ್ಯ ಮಾರಾಟವೂ ಇಲ್ಲ ಮತ್ತು ಹೋಟೆಲ್‌ಗಳು ಸಹ ಇಲ್ಲಿ ಇಲ್ಲ.

-ರಾಘವೇಂದ್ರ ಬಡಿಗೇರ್, ಗ್ರಾಮಸ್ಥ.ಗುಟ್ಕಾ ಮೊದಲ ಬಾರಿಗೆ ಬಂದಾಗಲೇ ಗ್ರಾಮದ ಎಲ್ಲರೂ ಸೇರಿ ನಿಷೇಧ ಮಾಡಿದ್ದೇವೆ. ಅದಕ್ಕೂ ಮೊದಲು ನಮ್ಮೂರಲ್ಲಿ ಮದ್ಯಪಾನ ಹಾಗೂ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ.

-ಕುಬೇರಪ್ಪ, ಗ್ರಾಮದ ಹಿರಿಯ ಹನುಮನಹಳ್ಳಿ.