ಮಳೆಯ ಅಭಾವ, ಸಾಂಪ್ರದಾಯಿಕ ಕೃಷಿಗೆ ರಾಸಾಯನಿಕ ಗೊಬ್ಬರಗಳ ಬಳಕೆ... ಇವುಗಳ ಹೊಡೆತಕ್ಕೆ ಸಿಲುಕಿ ಮಳೆಗಾಲದ ಅತಿಥಿ ಎಂದೇ ಕರೆಯಲ್ಪಡುವ ಕಪ್ಪೆಗಳ ಸಂತತಿ ಕರಾವಳಿಯಲ್ಲಿ ಕ್ಷೀಣಿಸುತ್ತಿದೆ.
ರಾಘು ಕಾಕರಮಠ
ಕನ್ನಡಪ್ರಭ ವಾರ್ತೆ ಅಂಕೋಲಾ:ಮಳೆಯ ಅಭಾವ, ಸಾಂಪ್ರದಾಯಿಕ ಕೃಷಿಗೆ ರಾಸಾಯನಿಕ ಗೊಬ್ಬರಗಳ ಬಳಕೆ... ಇವುಗಳ ಹೊಡೆತಕ್ಕೆ ಸಿಲುಕಿ ಮಳೆಗಾಲದ ಅತಿಥಿ ಎಂದೇ ಕರೆಯಲ್ಪಡುವ ಕಪ್ಪೆಗಳ ಸಂತತಿ ಕರಾವಳಿಯಲ್ಲಿ ಕ್ಷೀಣಿಸುತ್ತಿದೆ.
ಪರಿಸರ ವ್ಯವಸ್ಥೆಯ ಆಹಾರ ಸರಪಣಿಯ ಪ್ರಮುಖ ಕೊಂಡಿಯಾಗಿರುವ ಕಪ್ಪೆಗಳು ಮಾಯವಾಗುತ್ತಿರುವುದು ಕೃಷಿಕರು ಹಾಗೂ ಪರಿಸರ ಪ್ರೇಮಿಗಳಲ್ಲಿ ಕಳವಳ ಮೂಡಿಸಿದೆ.ಗೋವಾ ಖಾದ್ಯಕ್ಕೆ ಭಾರಿ ಡಿಮ್ಯಾಂಡ್:ನೆರೆಯ ಗೋವಾ ಹಾಗೂ ಚೀನಾದಲ್ಲಿ ಕಪ್ಪೆ ಮಾಂಸಕ್ಕೆ ವಿಪರೀತ ಬೇಡಿಕೆಯಿದೆ. ಆದರೆ, ಕರಾವಳಿಯಲ್ಲಿ ಕಪ್ಪೆಗಳ ಸಂತತಿ ಕ್ಷೀಣಿಸುತ್ತಿರುವುದರಿಂದ ಗೋವಾದ ಪ್ರಸಿದ್ಧ ಹೋಟೆಲ್‌ಗಳಲ್ಲಿ ಈಗ ಕಪ್ಪೆ ಖಾದ್ಯಕ್ಕೆ ಅಭಾವ ಸೃಷ್ಟಿಯಾಗಿದೆ. ಕಳೆದ ವರ್ಷ ಗೋವಾದಲ್ಲಿ ಒಂದು ದೊಡ್ಡ ಗಾತ್ರದ ಕಪ್ಪೆಗೆ ₹700 ವರೆಗೆ ಬೆಲೆಯಿದ್ದರೆ, ಈ ವರ್ಷ ₹900 ನೀಡಿದರೂ ಕಪ್ಪೆಗಳು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂದೆ ಮಳೆಗಾಲ ಆರಂಭವಾಗುತ್ತಿದ್ದಂತೆ ಹೋಟೆಲ್ ಉದ್ಯಮಿಗಳು ಕಪ್ಪೆಗಳು ಕೊಡಿಸುವಂತೆ ಏಜೆಂಟ್‌ಗಳಿಗೆ ಮುಂಗಡ ಹಣ ನೀಡುತ್ತಿದ್ದರು. ಆದರೆ, ಈಗ ಹಣ ನೀಡಿದರೂ ಕಪ್ಪೆಗಳೇ ಸಿಗುತ್ತಿಲ್ಲ.
ಮಳೆಗಾಲದ ಆಗಮನದ ಸೂಚನೆ ನೀಡುತ್ತಾ ಕೃಷಿ ಗದ್ದೆಗಳಲ್ಲಿ ಮೊಳಗುತ್ತಿದ್ದ ಕಪ್ಪೆಗಳ ಗುಟುರ್ ಗುಟುರ್ ನಾದ ಈಗ ಕ್ಷೀಣಿಸಿದೆ. ಜೈವಿಕ ವೈವಿಧ್ಯತೆಯ ಸಂಕೇತವಾಗಿದ್ದ, ಅನ್ನದಾತನ ಆಪ್ತ ಮಿತ್ರ ಆಗಿದ್ದ ಕಪ್ಪೆಗಳು ಕಾಣೆಯಾಗುತ್ತಿರುವುದು ರೈತರಲ್ಲಿ ಜಿಜ್ಞಾಸೆ ಮೂಡಿಸಿದೆ.ರೈತನ ಅಪರೂಪದ ಮಿತ್ರ ಕಪ್ಪೆ:ಕಪ್ಪೆಗಳು ಕೇವಲ ಜೀವಿಯಲ್ಲ, ಕೃಷಿಕನ ಬೆಳೆಯ ರಕ್ಷಕ. ಗದ್ದೆಗಳಲ್ಲಿ ಬೆಳೆ ಹಾಳು ಮಾಡುವ ಕ್ರಿಮಿ-ಕೀಟಗಳು ಹಾಗೂ ಸಾಂಕ್ರಾಮಿಕ ರೋಗ ಹರಡುವ ಸೊಳ್ಳೆಗಳನ್ನು ಕಪ್ಪೆಗಳು ಆಹಾರವಾಗಿ ಸೇವಿಸಿ ಕೀಟನಾಶಕವಾಗಿ ಕೆಲಸ ಮಾಡುತ್ತಿದ್ದವು. ಸೊಳ್ಳೆಗಳ ಹಾವಳಿ ನಿಯಂತ್ರಣದಲ್ಲಿದ್ದರೆ ಸಾಂಕ್ರಾಮಿಕ ರೋಗಗಳೂ ದೂರವಿರುತ್ತವೆ ಎಂಬುದು ತಜ್ಞರ ಅಭಿಮತವಾಗಿದೆ.ರಾಸಾಯನಿಕ ಗೊಬ್ಬರಗಳ ಮಾರಕ ಪ್ರಭಾವ:
ಮಳೆಯ ಅಭಾವ ಒಂದೆಡೆಯಾದರೆ, ಗದ್ದೆ, ಹಳ್ಳ-ಕೊಳ್ಳ ಮತ್ತು ಬಾವಿಗಳಲ್ಲಿ ಅತಿಯಾಗಿ ಬಳಸಲಾಗುತ್ತಿರುವ ಅಸಾಂಪ್ರದಾಯಿಕ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳು ಕಪ್ಪೆಗಳ ಜೀವಕ್ಕೆ ಕಂಟಕವಾಗಿವೆ. ರಾಸಾಯನಿಕಯುಕ್ತ ನೀರು ಕಪ್ಪೆಗಳ ಆವಾಸ ಸ್ಥಾನವನ್ನೇ ನಾಶಪಡಿಸುತ್ತಿದೆ.ಕಪ್ಪೆಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಸೊಳ್ಳೆಗಳ ಹಾವಳಿ ಗಣನೀಯವಾಗಿ ಹೆಚ್ಚಿದ್ದು, ಡೆಂಘೀ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿದೆ.
ಆಹಾರದ ಕ್ಷಾಮ ಎದುರಿಸುತ್ತಿರುವ ಉರಗ:ನಿಸರ್ಗದ ಆಹಾರ ಸರಪಣಿಯಲ್ಲಿ ಒಂದು ಜೀವಿಯನ್ನು ತಿಂದು ಇನ್ನೊಂದು ಜೀವಿ ಬದುಕುತ್ತದೆ. ಕಪ್ಪೆಗಳು ಹಾವಿನ ಪ್ರಮುಖ ಆಹಾರ. ಗದ್ದೆಗಳಲ್ಲಿ ಕಪ್ಪೆಗಳ ಸಂಖ್ಯೆ ಕ್ಷೀಣಿಸಿದ್ದರಿಂದ ಆಹಾರದ ಕ್ಷಾಮ ಎದುರಿಸುತ್ತಿರುವ ಉರಗಗಳು (ಹಾವುಗಳು) ಈಗ ಆಹಾರ ಅರಸಿ ನಾಡಿನತ್ತ ಹಾಗೂ ಮಾನವ ವಸತಿ ಪ್ರದೇಶಗಳತ್ತ ದಾಂಗುಡಿ ಇಡುತ್ತಿರುವುದು ವಾಸ್ತವ ಸಂಗತಿಯಾಗಿದೆ.ಕೋಟ್:ಹಿಂದೆ ಮಳೆಗಾಲದಲ್ಲಿ ಕಪ್ಪೆಗಳ ನಾದ ಹೆಚ್ಚಾಗಿ ಕೇಳಿಸುತ್ತಿತ್ತು. ಈಗ ಆ ವಾತಾವರಣವಿಲ್ಲ. ಜೀವವೈವಿಧ್ಯತೆಯನ್ನು ಉಳಿಸಲು ಕಪ್ಪೆಗಳ ರಕ್ಷಣೆಗೆ ಆಡಳಿತ ವ್ಯವಸ್ಥೆ ಇಚ್ಛಾಶಕ್ತಿ ತೋರಬೇಕಿದೆ.
- ವಿನೋದ ನಾಯ್ಕ, ಹಟ್ಟಿಕೇರಿ ಗ್ರಾಮಸ್ಥ.