ಮದ್ಯ ಮಾರಾಟಗಾರರಿಂದ ಪ್ರತಿಭಟನೆ, ವಿವಿಧ ಬೇಡಿಕೆ ಈಡೆರಿಕೆಗೆ ಆಗ್ರಹ

| Published : Apr 05 2025, 12:47 AM IST

ಸಾರಾಂಶ

೨೦೦೫ರಲ್ಲಿ ತಿದ್ದುಪಡಿ ಆಗಿರುವ ಅಬಕಾರಿ ಕಾಯ್ದೆ ಕಲಂ ೨೯ನ್ನು ಪುನರ್ ವಿಮರ್ಶಿಸಿ ತಿದ್ದುಪಡಿ ಮಾಡಬೇಕು. ಎಂಎಸ್‌ಐಎಲ್ ಸನ್ನದುಗಳ ಕುರಿತು ನ್ಯಾಯ ಸಮ್ಮತವಾದ ತೀರ್ಮಾನ ಕೈಗೊಳ್ಳುವುದು, ಗ್ರಾಮಾಂತರ ಪ್ರದೇಶಗಳಲ್ಲಿ ಸನ್ನದುಗಳನ್ನು ತೆರೆಯದೇ ನಗರದ ಮದ್ಯಭಾಗದಲ್ಲಿ ತೆರೆಯುತ್ತಿದ್ದಾರೆ. ನಿರೀಕ್ಷಿತ ವ್ಯವಹಾರ ಇಲ್ಲದೆ ಇರುವ ಸನ್ನದುಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಚಿಲ್ಲರೆ ಮದ್ಯ ಮಾರಾಟದ ಮೇಲೆ ಕನಿಷ್ಠ ಶೇ.೨೦ರಷ್ಟು ಲಾಭಾಂಶ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮದ್ಯ ಮಾರಾಟಗಾರರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಸೇರಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಸಹಾಯಕಿ ಡಾ. ರೋಹಿಣಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಹೆಚ್ಚುವರಿ ಅಬಕಾರಿ ಶುಲ್ಕವನ್ನು ಕಡಿಮೆ ಮಾಡಬೇಕು. ಯಾವುದೇ ಕಾರಣಕ್ಕೂ ಸನ್ನದು ಶುಲ್ಕವನ್ನು ಹೆಚ್ಚಳ ಮಾಡಬಾರದು. ಇತ್ತೀಚಿನ ವರ್ಷಗಳಲ್ಲಿ ಸನ್ನದುಗಳ ಸಂಖ್ಯೆ ಮಾತ್ರ ಹೆಚ್ಚಳ ಆಗಿರುವುದು ಬಿಟ್ಟರೆ ಮಧ್ಯ ಮಾರಾಟ ಗಣನೀಯವಾಗಿ ವೃದ್ಧಿಯಾಗಿಲ್ಲ ಎಂದು ದೂರಿದರು.

ಸಿಎಲ್-೨ಗಳಲ್ಲಿ ಪಾನಿಕರಿಗೆ ಮದ್ಯ ಸೇವಿಸಲು ಅವಕಾಶ, ಸಿಎಲ್-೯, ಸಿಎಲ್-೭ ಅಥವಾ ಇನ್ನಿತರೆ ದೊಡ್ಡ ಹೊಟೇಲ್‌ಗಳಿಗೆ ಹೋಗಿ ಮದ್ಯದೊಂದಿಗೆ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ದುಬಾರಿ ಖರ್ಚು ಮಾಡಲು ಸಾಧ್ಯವಿಲ್ಲದ ಕಾರಣ ಬಡ ವರ್ಗದ ಗ್ರಾಹಕರಿಗೆ ಅನುಕೂಲವಾಗಲು ಸನ್ನದು ಷರತ್ತನ್ನು ಸಡಿಲಿಸುವ ತುರ್ತು ಅಗತ್ಯವಿದೆ. ಸನ್ನದು ಆವರಣದಲ್ಲಿ ನಿಗಧಿಪಡಿಸಿರುವ ಸ್ಥಳ ಮತ್ತು ಮೊದಲೇ ತಯಾರಿಸಿದ ಆಹಾರಗಳನ್ನು ನೀಡುವುದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

೨೦೦೫ರಲ್ಲಿ ತಿದ್ದುಪಡಿ ಆಗಿರುವ ಅಬಕಾರಿ ಕಾಯ್ದೆ ಕಲಂ ೨೯ನ್ನು ಪುನರ್ ವಿಮರ್ಶಿಸಿ ತಿದ್ದುಪಡಿ ಮಾಡಬೇಕು. ಎಂಎಸ್‌ಐಎಲ್ ಸನ್ನದುಗಳ ಕುರಿತು ನ್ಯಾಯ ಸಮ್ಮತವಾದ ತೀರ್ಮಾನ ಕೈಗೊಳ್ಳುವುದು, ಗ್ರಾಮಾಂತರ ಪ್ರದೇಶಗಳಲ್ಲಿ ಸನ್ನದುಗಳನ್ನು ತೆರೆಯದೇ ನಗರದ ಮದ್ಯಭಾಗದಲ್ಲಿ ತೆರೆಯುತ್ತಿದ್ದಾರೆ. ನಿರೀಕ್ಷಿತ ವ್ಯವಹಾರ ಇಲ್ಲದೆ ಇರುವ ಸನ್ನದುಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.

ಮದ್ಯ, ಬಿಯರ್ ತಯಾರಿಕಾ ಕಂಪನಿಯವರು ನೀಡುತ್ತಿರುವ ಸ್ಕೀಂಗಳ ಸಂಬಂಧ ೧೧ ಎ ತಿದ್ದುಪಡಿ ಮಾಡಲು ಶೀಘ್ರ ಕ್ರಮ ಕೈಗೊಳ್ಳಬೇಕು. ಪೊಲೀಸ್ ಇಲಾಖೆಯ ಹಸ್ತಕ್ಷೇಪ ಮತ್ತು ಅನಗತ್ಯವಾಗಿ ಸನ್ನದುಗಳನ್ನು ಬಂದ್ ಮಾಡುತ್ತಿರುವುದಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಎಚ್.ಪಿ. ಮಹೇಶ್, ಪ್ರಧಾನ ಕಾರ್ಯದರ್ಶಿ ಜಿ.ಎನ್. ಶಂಕರೇಗೌಡ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.