ಸಾರಾಂಶ
ಮುದಗಲ್ ಸಮೀಪದ ವ್ಯಾಸನಂದಿಹಾಳ ಗ್ರಾಮದ ಮಹಿಳೆಯರು ಮದ್ಯ ಮಾರಾಟ ನಿಷೇಧಿಸುವಂತೆ ಪೊಲೀಸರಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಮುದಗಲ್
ಪಟ್ಟಣ ಸಮೀಪದ ವ್ಯಾಸನಂದಿಹಾಳ ಗ್ರಾಮದಲ್ಲಿ ಅಲ್ಲದೇ ಕನ್ನಾಳ ಗ್ರಾಪಂ ವ್ಯಾಪ್ತಿಯ ಕೆಲ ಗ್ರಾಮೀಣ ಭಾಗಗಳಲ್ಲಿ ಎಲ್ಲೆಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವುದನ್ನು ನಿಲ್ಲಿಸುವಂತೆ ಆಗ್ರಹಿಸಿ ವ್ಯಾಸನಂದಿಹಾಳ ಗ್ರಾಮದ ಮಹಿಳೆಯರು ಮಸ್ಕಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.ವ್ಯಾಸನಂದಿಹಾಳ ಗ್ರಾಮದ ಮಹಿಳೆಯರು ಮತ್ತು ಸಾರ್ವಜನಿಕರು ಮಸ್ಕಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿ ವ್ಯಾಸನಂದಿಹಾಳ ಗ್ರಾಮದಲ್ಲಿ ನಾಗಮ್ಮ ಸತ್ಯಪ್ಪ ಭೋವಿ ಮತ್ತು ದೇವಮ್ಮ ನಿಂಗಪ್ಪ ಕಟ್ಟಿಗೇರ ಹಾಗೂ ಶಂಕ್ರಯ್ಯ ಬಾಲಯ್ಯ ಎಂಬುವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಸುತ್ತಲಿನ ಗ್ರಾಮಗಳಲ್ಲಿ ಮದ್ಯ ನಿಷೇಧವಿದ್ದು, ನಮ್ಮ ಗ್ರಾಮದಲ್ಲಿ ಮಾತ್ರ ಹೊಟೇಲ್, ಕಿರಾಣಿ, ಡಬ್ಬಾ ಅಂಗಂಡಿಗಳಲ್ಲಿ ಮಧ್ಯ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮದ್ಯಪ್ರಿಯರು ವಾಹನಗಳ ಮುಖಾಂತರ ಮದ್ಯ ಖರೀದಿಸಲು ಬರುವುದರಿಂದ ಜಮೀನಿನ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ತೊಂದರೆಯಾಗುತ್ತಿದೆ. ಮದ್ಯ ಪ್ರಿಯರ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಮಹಿಳೆಯರು ಕೂಲಿ ಕೆಸಲಕ್ಕೆ ತೆರಳಲೂ ಕಷ್ಟವಾಗುತ್ತಿದೆ. ಗ್ರಾಮದಲ್ಲಿಯೇ ಸರಳವಾಗಿ ಸಿಗುವ ಮದ್ಯ ವಯಸ್ಕ ಮಕ್ಕಳು, ಯುವಕರು ಕುಡಿತದ ದಾಸರಾಗುತ್ತಿದ್ದಾರೆ. ಕುಡಿದು ಬಂದು ಮನೆಯಲ್ಲಿ ಜಗಳವಾಡಿ ದೈಹಿಕವಾಗಿ ಹಲ್ಲೆ ಮಾಡುತ್ತಿದ್ದು, ಇದರಿಂದ ಗ್ರಾಮದಲ್ಲಿ ಮಹಿಳೆಯರಿಗೆ ನೆಮ್ಮದಿ ಜೀವನ ನಡೆಸಲು ಆಗುತ್ತಿಲ್ಲ ಎಂಬ ದೂರಿನ ಪತ್ರವನ್ನು ಪೊಲೀಸರಿಗೆ ನೀಡಿರುವ ಮಹಿಳೆಯರು ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧಿಸ ಬೇಕು ಇಲ್ಲವಾದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.