ಸಾರಾಂಶ
ಗದಗ: ಏಷಿಯಾ ಖಂಡದಲ್ಲಿ ಮೊದಲ ಬಾರಿ ಕಣಗಿನಹಾಳದಲ್ಲಿ ಸಿದ್ಧನಗೌಡ ಪಾಟೀಲ ಹುಟ್ಟು ಹಾಕಿದ ಸಹಕಾರ ಸಂಘದಿಂದ ರೈತರಿಗೆ ಇಂದು ಆರ್ಥಿಕವಾಗಿ ಬೆಳೆಯಲು ಸಾಧ್ಯವಾಗುತ್ತಿದೆ. ಈ ದಿಸೆಯಲ್ಲಿ ಸಂಘಗಳ ಸದಸ್ಯರು ಸಹಕಾರ ಮನೋಭಾವನೆಯಿಂದ ಭಾಗವಹಿಸಿದ್ದಲ್ಲಿ ಮಾತ್ರ ಸಂಘಗಳು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಕೆಸಿಸಿ ಬ್ಯಾಂಕ ನಿರ್ದೇಶಕ ಎಂ.ಎಫ್. ಕಲ್ಲಗುಡಿ ಹೇಳಿದರು.
ತಾಲೂಕಿನ ಲಕ್ಕುಂಡಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಂ.2 ರಾಜ್ಯ ಸಹಕಾರ ಮಹಾಮಂಡಳ ನಿ, ಬೆಂಗಳೂರು, ಗದಗ ಜಿಲ್ಲಾ ಸಹಕಾರ ಯೂನಿಯನ್ ನಿ, ಸಹಕಾರ ಇಲಾಖೆ, ಕೆ.ಸಿ.ಸಿ ಬ್ಯಾಂಕ್ ಲಿ. ಧಾರವಾಡ ಹಾಗೂ ಕೆ.ಎಂ.ಎಫ್ ಧಾರವಾಡ ಹಾಗೂ ತಾಲೂಕಿನ ಎಲ್ಲಾ ಸಹಕಾರ ಸಂಘ, ಬ್ಯಾಂಕುಗಳ ಸಂಯುಕ್ತಾಶ್ರಯದಲ್ಲಿ ನಡೆದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಹಕಾರ ಸಚಿವಾಲಯದ ನೂತನ ಪ್ರಯತ್ನಗಳ ಮೂಲಕ ಸಹಕಾರ ಚಳವಳಿ ಬಲಪಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕೇಂದ್ರ ಸರ್ಕಾರ ಭಾರತದ ಸಹಕಾರ ಚಳವಳಿಯನ್ನು ಪರಿಣಾಮಕಾರಿಯಾಗಿ ಬಲಪಡಿಸುವ ಉದ್ದೇಶದಿಂದ 2021ರ ಜುಲೈನಲ್ಲಿ ಪ್ರತ್ಯೇಕ ಸಹಕಾರ ಸಚಿವಾಲಯ ರಚನೆ ಮಾಡಿತು. ಸಹಕಾರ ಸಚಿವಾಲಯವು ದೇಶಾದ್ಯಂತ ಸಹಕಾರ ಸಂಸ್ಥೆ ಬೆಂಬಲಿಸಲು, ನಿಯಂತ್ರಿಸಲು ಮತ್ತು ಉತ್ತೇಜಿಸಲು ಏಕೀಕೃತ ಚೌಕಟ್ಟನ್ನು ಒದಗಿಸಿದೆ. ಈಗಾಗಲೇ ಸಚಿವಾಲಯವು 54 ಉಪ ಕ್ರಮಗಳನ್ನು ಕೈಗೊಂಡಿದೆ. ಈ ಮೂಲಕ ಸಹಕಾರದ ಆರ್ಥಿಕ ನೀತಿಗಳ ಯಶಸ್ಸಿಗೆ, ವಿಶ್ವ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಯೋಜನೆ ಸಾಧಿಸಲು ಮತ್ತು 2047 ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸಲು ಕಂಕಣಬದ್ಧವಾಗಿದೆ ಎಂದರು.
ಕೆಸಿಸಿ ಬ್ಯಾಂಕ್ ನಿರ್ದೇಶಕ ಸಿ.ಬಿ. ದೊಡ್ಡಗೌಡ್ರ ಮಾತನಾಡಿ, ದೇಶದ ಸಹಕಾರಿ ಸಂಸ್ಥೆಗಳು ಸಹ ವಿಕಸಿತ ಭಾರತ ಪರಿಕಲ್ಪನೆಗೆ ಮಹತ್ವದ ಕೊಡುಗೆ ನೀಡಲು ಯೋಜನೆ ಹಮ್ಮಿಕೊಳ್ಳುತ್ತಿವೆ. ಪ್ರಸ್ತುತ ಭಾರತದ ಜನಸಂಖ್ಯೆ 142.70 ಕೋಟಿ ತಲುಪಿದೆ. ಈಗಾಗಲೇ 805 ಲಕ್ಷ ಸಹಕಾರ ಸಂಘ ಸಂಸ್ಥೆಗಳಲ್ಲಿ 30 ಕೋಟಿಗೂ ಅಧಿಕ ಸದಸ್ಯರಿದ್ದಾರೆ. ಮುಂದಿನ ದಿನಗಳಲ್ಲಿ ಸಹಕಾರ ಕಕ್ಷೆಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವಜನ ಮತ್ತು ಮಹಿಳೆಯರನ್ನು ಒಳಗೊಂಡಂತೆ ಸದಸ್ಯರನ್ನು ಸೇರ್ಪಡೆಗೊಳಿಸಿ ಸರ್ಕಾರದ ಅಭಿವೃದ್ಧಿ, ಉತ್ತಮ ಆಡಳಿತ, ಸುಸ್ಥಿರ ಅಭಿವೃದ್ಧಿಕೈಗೊಳ್ಳಲು ಸಹಕಾರ ಕ್ಷೇತ್ರವನ್ನು ಸಹ ಸದೃಢಗೊಳಿಸಬೇಕಾಗಿದೆ ಎಂದರು.ಕೆಒಎಫ್ ಮಾಜಿ ನಿರ್ದೇಶಕ ಈಶ್ವರಪ್ಪ ಕುಂಬಾರ ಮಾತನಾಡಿ, ಎಸ್.ಎಸ್.ಪಾಟೀಲ ಸಹಕಾರ ಮಂತ್ರಿ ಸ್ಥಾನ ವಹಿಸಿಕೊಂಡ ನಂತರ ಸಹಕಾರ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯವಾಯಿತು. ರಾಷ್ಟ್ರೀಕೃತ ಬ್ಯಾಂಕಗಳಿಗಿಂತ ಸಹಕಾರ ಬ್ಯಾಂಕಗಳಲ್ಲಿ ಹೆಚ್ಚು ವ್ಯವಹರಿಸಿ ಅಭಿವೃದ್ದಿಪಡಿಸಬೇಕಾಗಿದೆ ಎಂದರು.
ಸಾಮಾನ್ಯ ಸೇವಾ ಕೇಂದ್ರದ ಜಿಲ್ಲಾ ವ್ಯವಸ್ಥಾಪಕ ಬಸವರಾಜ ಸೊರಟೂರು, ಕೃಷಿ ವಿಜ್ಞಾನ ಕೇಂದ್ರದ ಡಾ. ವಿನಾಯಕ ನಿರಂಜನ ಹಾಗೂ ಹೇಮಾವತಿ ಹಿರೇಗೌಡ್ರ ಮಣ್ಣಿನ ಫಲವತ್ತತೆ ಹಾಗೂ ತೋಟಗಾರಿಕೆ ಬೆಳೆಗಳ ಅಭಿವೃದ್ಧಿ ಕುರಿತು ವಿವರಿಸಿದರು. ಸಪ್ತವರ್ಣದ ಸಹಕಾರ ಧ್ವಜಾರೋಹಣವನ್ನು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಸಿ.ಎಂ. ಪಾಟೀಲ ನೆರವೇರಿಸಿದರು.ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಂ. 2ರ ಅಧ್ಯಕ್ಷ ರುದ್ರಪ್ಪ ಮುಸ್ಕಿನಭಾವಿ ಅಧ್ಯಕ್ಷತೆ ವಹಿಸಿದ್ದರು. ನಿಂಗಪ್ಪ ಗಡಗಿ, ಕಳಕೇಶ ಟೆಂಗಿನಕಾಯಿ, ಶಾರದಾ ಪಾಟೀಲ, ಬಸವರಾಜ ಮುಳ್ಳಾಳ, ಶೈಲಾ ಅಂಬಕ್ಕಿ, ಪುಷ್ಪಾ ಕಡಿವಾಳ, ಎಸ್.ಜಿ.ಆಲದಕಟ್ಟಿ, ಸುನೀಲ ಚಳಗೇರಿ, ಯು.ಆರ್. ಮುದಕಣ್ಣವರ, ಸುರೇಶಕುಮಾರ. ಎಸ್. ಡಾ. ಪ್ರಸನ್ನ ಪಟ್ಟೇದ, ಕಿರಣಕುಮಾರ ಹುಗ್ಗಿ ಉಪಸ್ಥಿತರಿದ್ದರು.
ಶರಣಪ್ಪ ಗರ್ಜಪ್ಪನವರ ಪ್ರಾರ್ಥಿಸಿದರು. ಆರ್.ಎಸ್. ಕಲ್ಲನಗೌಡರ ಸ್ವಾಗತಿಸಿದರು. ಚಂದ್ರಶೇಖರ ಕರಿಯಪ್ಪನವರ ನಿರೂಪಿಸಿದರು. ಜಿ.ಬಿ. ಬೆಣಕಲ್ ವಂದಿಸಿದರು.